*ಗಂಗಾಧರ ಕಲ್ಲಪಳ್ಳಿ.
ಸುಳ್ಯ: ಕಳೆದ 6-7 ಚುನಾವಣೆಗಳಲ್ಲಿ ನೇರ ಸ್ಪರ್ಧೆಯ ರಂಗು ತಂದಿದ್ದ ಮೀಸಲು ಕ್ಷೇತ್ರ ಸುಳ್ಯದಲ್ಲಿ ಈ ಬಾರಿ ಚಿತ್ರಣ ಸ್ವಲ್ಪ ಭಿನ್ನವಾಗಿದೆ. ಬಿಜೆಪಿ- ಕಾಂಗ್ರೆಸ್ ನೇರ ಸ್ಪರ್ಧೆ ಎಂದು ಮೇಲ್ನೋಟಕ್ಕೆ ಕಂಡು ಬಂದರೂ ಇತರ ಐದು ಪಕ್ಷಗಳ ಅಭ್ಯರ್ಥಿಗಳು ಮತ್ತು ಓರ್ವ ಪಕ್ಷೇತರ ಅಭ್ಯರ್ಥಿ ಕಣದಲ್ಲಿದ್ದು ಪ್ರತಿಯೊಬ್ಬ ಅಭ್ಯರ್ಥಿ ಪಡೆಯುವ ಮತಗಳೂ ಸೋಲು-ಗೆಲುವಿನಲ್ಲಿ ನಿರ್ಣಾಯಕವಾಗಲಿದೆ. ನಿರಂತರ ಆರು ಬಾರಿಯ ಗೆಲವಿನ ನಾಗಾಲೋಟವನ್ನು ಮತ್ತೊಮ್ಮೆ ಮುಂದುವರಿಸಲು ಬಿಜೆಪಿ ಶತ ಪ್ರಯತ್ನ ನಡೆಸುತ್ತಿದ್ದರೆ, ಮೂರು ದಶಕಗಳ ಬಳಿಕ ಮತ್ತೆ ಶಾಸಕರನ್ನು ಗೆಲ್ಲಿಸುವ
ತವಕದಲ್ಲಿ ಕಾಂಗ್ರೆಸ್ ಇಲ್ಲಿ ಶಕ್ತಿ ಮೀರಿ ಪ್ರಯತ್ನಿಸುತಿದೆ. ತನ್ನ ಶಕ್ತಿಯನ್ನು ವೃದ್ಧಿಸಲು ಜೆಡಿಎಸ್ ಕ್ಷೇತ್ರದ ಮತದಾರರ ಕದ ತಟ್ಟುತ್ತಿದ್ದರೆ, ದೆಹಲಿ, ಪಂಜಾಬ್ನಲ್ಲಿ ಆಗಿರುವ ಮ್ಯಾಜಿಕ್ ಇಲ್ಲಿಯೂ ಸಾಧ್ಯವಾಗಲಿದೆ ಎಂಬ ವಿಶ್ವಾದಲ್ಲಿ ಆಮ್ ಆದ್ಮಿ ಪಾರ್ಟಿ ಪ್ರಚಾರದ ನಾಗಾಲೋಟದಲ್ಲಿದೆ. ಬದಲಾವಣೆಯ ನಿರೀಕ್ಷೆಯಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ, ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಗಳು ಕಣದಲ್ಲಿದ್ದರೆ ಇತರ ಪಕ್ಷಗಳ ಮತ ಸೆಳೆಯಲು ಪಕ್ಷೇತರ ಅಭ್ಯರ್ಥಿ ಸ್ಪರ್ಧೆಯಲ್ಲಿದ್ದಾರೆ. ಒಟ್ಟಿನಲ್ಲಿ ವಿಭಿನ್ನ ಲೆಕ್ಕಾಚಾರ,ಭಾರೀ ನಿರೀಕ್ಷೆಗಳ ಚುನಾವಣೆ ಇದಾಗಿದ್ದು ಚುನಾವಣೆಯ ದಿನ ಹತ್ತಿರ ಬರುತ್ತಿದ್ದಂತೆ ಕಾವು ತೀವ್ರ ಎರಿಕೆಯಾಗಿದೆ. ಕೇವಲ ಒಂದು ವಾರ ಮಾತ್ರ ಉಳಿದಿದ್ದು ಈ ಬಾರಿ ಕ್ಷೇತ್ರದಲ್ಲಿ ಮತದಾರನ ನಡೆ ನಿಗೂಢವಾಗಿದೆ. ಮತದಾರರು ಮಾತ್ರ ನಿಶ್ಯಬ್ದವಾಗಿ ಮತ್ತು ನಿರ್ಲಿಪ್ತವಾಗಿ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಸುಳ್ಯದ ಮತದಾರರು ಮತ್ತೆ ಕಮಲ ಅರಳಿಸುತ್ತಾರಾ, ಅಲ್ಲಾ ಈ ಬಾರಿ ಕೈ ಹಿಡಿಯುತ್ತಾರಾ, ಅಥವಾ ಇನ್ನೊಂದು ಪಕ್ಷಕ್ಕೆ ಮಣೆ ಹಾಕುತ್ತಾರಾ ಎಂಬ ಸಸ್ಪೆನ್ಸ್ ಇದೆ ಮನೆ ಮಾಡಿದೆ. ಗೆಲವು ಯಾರ ಕಡೆಗೆ ಎಂಬ ಕುರಿತು ಈ ಬಾರೀ ಬಾರೀ ಕುತೂಹಲ ಇದೆ.ಹಲವು ವಿಶೇಷತೆಗಳೂ ಈ ಬಾರಿ
ಭಾಗೀರಥಿ ಮುರುಳ್ಯ
ಸುಳ್ಯ ಕ್ಷೇತ್ರದ ಚುನಾವಣಾ ಕಣವನ್ನು ಭಿನ್ನವಾಗಿಸಿದೆ. ಎಂಟು ಅಭ್ಯರ್ಥಿಗಳು ಕಣದಲ್ಲಿದ್ದು ಏಳು ಮಂದಿ ಹೊಸಬರು. ಒಬ್ಬರು ಮಾತ್ರ ಹಿಂದೆ ಸ್ಪರ್ಧೆ ನಡೆಸಿದ್ದರು. ಇಬ್ಬರು ಮಹಿಳೆಯರು ಈ ಬಾರಿ ಕಣದಲ್ಲಿದ್ದಾರೆ. ಏಳು ದಶಕಗಳ ಸುಳ್ಯ ಕ್ಷೇತ್ರದ ಇತಿಹಾಸದಲ್ಲಿ ಈ ಹಿಂದೆ ಒಬ್ಬರು ಮಹಿಳೆ ಮಾತ್ರ ಸ್ಪರ್ಧಿಸಿದ್ದರು. ಈ ಬಾರಿ ಪ್ರಮುಖ ಪಕ್ಷಗಳ ಇಬ್ಬರು ಮಹಿಳೆಯರು ಕಣದಲ್ಲಿರುವುದು ವಿಶೇಷತೆಯಾಗಿದೆ.ಕಳೆದ ನಾಲ್ಕು ಬಾರಿಯ ಚುನಾಣೆಯಲ್ಲಿ ಬಿಜೆಪಿಯ ಎಸ್.ಅಂಗಾರ ಮತ್ತು ಕಾಂಗ್ರೆಸ್ನ ಡಾ.ರಘು ಅವರ ಮಧ್ಯೆ ನೇರ ಸ್ಪರ್ಧೆಗೆ ವೇದಿಕೆಯಾಗಿದ್ದ ಸುಳ್ಯದಲ್ಲಿ ಈ ಬಾರಿ ಚಿತ್ರಣವೇ ಬೇರೆ.
ಬಿಜೆಪಿ 1989 ರಿಂದ ನಡೆದ ಏಳು ಚುನಾವಣೆಯ ಬಳಿಕ ಹೊಸ ಅಭ್ಯರ್ಥಿ ಭಾಗೀರಥಿ ಮುರುಳ್ಯ ಅವರನ್ನು ಕಣಕ್ಕಿಳಿಸಿದೆ. ಹೊಸ ಅಭ್ಯರ್ಥಿ ಬೇಕು ಎಂಬ ಕೆಲವು ಕಾರ್ಯಕರ್ತರ ಬೇಡಿಕೆಗೆ ಹೈಕಮಾಂಡ್ ಮಣೆ ಹಾಕಿದೆ. ಸೀಟ್ ತಪ್ಪಿರುವುದಕ್ಕೆ ಮುನಿಸಿಕೊಂಡು ಅಂಗಾರರು ರಾಜಕೀಯ ನಿವೃತ್ತಿ ಘೋಷಣೆ ಮಾಡಿದರೂ ಬಳಿಕ ಅವರು ನಿರ್ಧಾರವನ್ನು ಬದಲಿಸಿದ್ದಾರೆ. ಹೇಳಿ ಕೇಳಿ ಸುಳ್ಯ ಬಿಜೆಪಿಯ ಭದ್ರಕೋಟೆ ಎಂದೇ ಜನಜನಿತ. 2013ರ ಚುನಾವಣೆಯಲ್ಲಿ ದ.ಕ.ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ಪರಾಜಿತಗೊಂಡರೂ ಸುಳ್ಯದಲ್ಲಿ ಮಾತ್ರ ಕಮಲ ಅರಳಿತ್ತು. ಅಂಗಾರರು ನಿರಂತರ ಆರು ಬಾರಿ ಆಯ್ಕೆಯಾಗಿ ಇತಿಹಾಸ ನಿರ್ಮಿಸಿದ್ದಾರೆ. ಈ ಬಾರಿಯೂ ಗೆಲುವು ನಿಶ್ಚಿತ ಎಂಬ ವಿಶ್ವಾಸವನ್ನು ಬಿಜೆಪಿ ವ್ಯಕ್ತಪಡಿಸಿದೆ. ಅಂಗಾರರ ಅಭಿವೃದ್ಧಿ ಸಾಧನೆ, ಕೇಂದ್ರ ಹಾಗು ರಾಜ್ಯ ಸರಕಾರದ ಸಾಧನೆಯ ಹಿನ್ನಲೆಯಲ್ಲಿ ಎಲ್ಲರೂ ಒಟ್ಟಾಗಿ ಚುನಾವಣಾ ಫೀಲ್ಡ್ಗೆ ಇಳಿದಿದ್ದು ಈ ಬಾರಿಯೂ ಗೆಲ್ಲುತ್ತೇವೆ ಎಂದು ಬಿಜೆಪಿ ಮುಖಂಡರು ಹೇಳುತ್ತಾರೆ.
ಜಿ.ಕೃಷ್ಣಪ್ಪ
ಕಾಂಗ್ರೆಸ್ ಕೂಡ ಹೊಸ ಮುಖವನ್ನು ಕಣಕ್ಕೆ ಇಳಿಸಿದೆ. ಕೆಪಿಸಿಸಿ ಸಂಯೋಜಕರಾಗಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಉಸ್ತುವಾರಿ ವಹಿಸಿದ್ದ ಜಿ.ಕೃಷ್ಣಪ್ಪ ಅವರಿಗೆ ಪಕ್ಷ ಟಿಕೆಟ್ ನೀಡಿದೆ. ಟಿಕೆಟ್ ಆಕಾಂಕ್ಷಿಯಾಗಿದ್ದ ಕೆಪಿಸಿಸಿ ಸಂಯೋಜಕ ಹೆಚ್.ಎಂ.ನಂದಕುಮಾರ್ ಅವರಿಗೆ ಟಿಕೆಟ್ ನೀಡದೇ ಇದ್ದುದು ಸುಳ್ಯ ಕಾಂಗ್ರೆಸ್ನಲ್ಲಿ ಗೊಂದಲ, ಅಸಮಾಧಾನಕ್ಕೆ ಕಾರಣವಾಗಿತ್ತು. ಇದೀಗ ನಾಯಕರು ಮಧ್ಯ ಪ್ರವೇಶಿಸಿ ಮಾತುಕತೆ ನಡೆಸಿ ಗೊಂದಲವನ್ನು ಸರಿಪಡಿಸಿದ್ದಾರೆ. ಈ ಬಾರಿ ಕ್ಷೇತ್ರದಲ್ಲಿ ಮತದಾರರು ಬದಲಾವಣೆ ಬಯಸಿದ್ದು ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂಬ ವಿಶ್ವಾಸವನ್ನು ಕಾಂಗ್ರೆಸ್ ಮುಖಂಡರು ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ನೀಡಿರುವ ಭರವಸೆಗಳ ಗ್ಯಾರಂಟಿ ಕಾರ್ಡ್ ಪಕ್ಷದ ಗೆಲುವಿಗೆ ವರದಾನವಾಗಿ ಪರಿಣಮಿಸಲಿದೆ ಎಂಬುದು ಕಾಂಗ್ರೆಸ್ನ ನಂಬಿಕೆ. ಆರು ಬಾರಿಯ ಸೋಲಿನ ಕಹಿ ಮರೆತು ಗೆಲುವಿನ ಸಿಹಿ ಸವಿಯಲು ಕಾಂಗ್ರೆಸ್ ಶತಾಯ ಗತಾಯ ಪ್ರಯತ್ನ ನಡೆಸುತ್ತಿದ್ದಾರೆ. ಕಳೆದ ಆರು ಬಾರಿ ತಪ್ಪಿದ ಗೆಲುವು ಈ ಬಾರಿ ಕೃಷ್ಣಪ್ಪರ ಕೈ ಹಿಡಿಯುವುದು ಗ್ಯಾರಂಟಿ ಎಂಬುದು ಕಾಂಗ್ರೆಸ್ ನಂಬಿಕೆ.
ಹೆಚ್.ಎಲ್.ವೆಂಕಟೇಶ್
ರಾಜ್ಯ ರಾಜಕೀಯದಲ್ಲಿ ಮತ್ತೊಮ್ಮೆ ಕಿಂಗ್ ಮೇಕರ್ ಆಗುತ್ತೇವೆ ಎಂಬ ನಂಬಿಕೆಯೊಂದಿಗೆ ಜೆಡಿಎಸ್ ಸುಳ್ಯದಲ್ಲಿಯೂ ಚುನಾವಣಾ ರಂಗಕ್ಕೆ ಇಳಿದಿದೆ. ನಿವೃತ್ತ ಉಪನ್ಯಾಸಕ ಹೆಚ್.ಎಲ್.ವೆಂಕಟೇಶ್ ಅವರನ್ನು ಕಣಕ್ಕಿಳಿಸಿದೆ. 1983ರಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ವೆಂಕಟೇಶ್ ಅವರು ಬಳಿಕ ರಾಜಕೀಯ ಕ್ಷೇತ್ರದಿಂದ ದೂರವಾಗಿ ಉಪನ್ಯಾಸಕರಾಗಿ ಸರಕಾರಿ ಸೇವೆಗೆ ಸೇರಿದ್ದರು. ಸರಕಾರಿ ಸೇವೆಯಿಂದ ನಿವೃತ್ತರಾದ ಬಳಿಕ ಇದೀಗ ಮತ್ತೆ ರಾಜಕೀಯ ಕ್ಷೇತ್ರಕ್ಕೆ ಮರಳಿ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ತನ್ನ ಶಕ್ತಿಯನ್ನು ಕ್ಷೇತ್ರದಲ್ಲಿ ವೃದ್ಧಿಸುವ ತವಕದಲ್ಲಿ ಜೆಡಿಎಸ್ ಕಣದಲ್ಲಿದೆ. ಜೆಡಿಎಸ್ ರಾಜ್ಯದಲ್ಲಿ ನಡೆಸಿದ ಪಂಚರತ್ನ ಯಾತ್ರೆ, ಜನಪರ ಪ್ರಣಾಳಿಕೆಗೆ ಮತಾದರ ಜೈ ಎನ್ನಲಿದ್ದಾರೆ ಎಂಬುದು ಜೆಡಿಎಸ್ ಲೆಕ್ಕಾಚಾರ.
ಸುಮನಾ ಬೆಳ್ಳಾರ್ಕರ್
ಎಲ್ಲಾ ಪಕ್ಷಗಳಿಗಿಂತಲೂ ಮೊದಲೇ ಚುನಾವಣಾ ಕಣಕ್ಕೆ ಧುಮುಕಿ ಈಗಲೂ ಭಾರೀ ಪ್ರಚಾರದ ಮೂಲಕ ಕ್ಷೇತ್ರದಲ್ಲಿ ಹವಾ ಸೃಷ್ಠಿಸಿರುವ ಪಕ್ಷ ಆಮ್ ಆದ್ಮಿ ಪಾರ್ಟಿ. ಮಾಜಿ ಶಾಸಕ ಕೆ.ಕುಶಲ ಅವರ ಪುತ್ರಿ ಮಲ್ಟಿ ನ್ಯಾಷನಲ್ ಕಂಪೆನಿಯಲ್ಲಿ ಉದ್ಯೋಗಿಯಾಗಿರುವ ಸುಮನಾ ಬೆಳ್ಳಾರ್ಕರ್ ಅವರು ಆಪ್ ಅಭ್ಯರ್ಥಿಯಾಗಿದ್ದಾರೆ. ಮತದಾರರಿಂದ ಉತ್ತಮ ಒಲವು ವ್ಯಕ್ತವಾಗಿದ್ದು ಸುಳ್ಯದಲ್ಲಿಯೂ ಆಪ್ ಮ್ಯಾಜಿಕ್ ಮಾಡಲಿದೆ ಎಂದು ಆಪ್ ಮುಖಂಡರು ಹೇಳುತ್ತಾರೆ. ಜನ ಸಾಮಾನ್ಯರಿಗಾಗಿ ದೆಹಲಿ ಮಾದರಿ ಆಡಳಿತ, ಸುಳ್ಯದ ಸಮಗ್ರ ಅಭಿವೃದ್ಧಿಯ ಕನಸು ಬಿತ್ತಿದ ಆಪ್ ಈ ಬಾರಿ ಗೆಲುವಿನೆಡೆಗೆ ಸಾಗಲಿದೆ ಎಂಬುದು ನಾಯಕರ ಆತ್ಮ ವಿಶ್ವಾಸದ ನುಡಿ.
ಸುಂದರ ಮೇರ
ಸುಳ್ಯವನ್ನು ಅಭಿವೃದ್ಧಿಯಲ್ಲಿ ಮಾದರಿ ಕ್ಷೇತ್ರವಾಗಿಸುವ ಭರವಸೆ ನೀಡಿ ಗಾಲಿ ಜನಾರ್ಧನ ರೆಡ್ಡಿ ಅವರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿ ಸುಂದರ ಮೇರ ಕಣದಲ್ಲಿದ್ದಾರೆ. ಭಾರತೀಯ ಜೀವ ವಿಮಾ ನಿಗಮದಲ್ಲಿ ಅಧಿಕಾರಿಯಾಗಿ ನಿವೃತ್ತರಾದ ಬಳಿಕ ಸುಂದರ ಮೇರ ಅವರು ರಾಜಕೀಯದತ್ತ ಚಿತ್ತ ಹರಿಸಿದ್ದಾರೆ.
ಭ್ರಷ್ಟಾಚಾರ ಮುಕ್ತ ಆಡಳಿತ ವ್ಯವಸ್ಥೆಯ ಜೊತೆಗೆ ಅಭಿವೃದ್ಧಿ ಪರ ಯೋಜನೆಗಳನ್ನು ಮುಂದಿರಿಸಿ ರವಿ ಕೃಷ್ಣಾ ರೆಡ್ಡಿ ಅವರ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಭ್ಯರ್ಥಿ ಗಣೇಶ್ ಎಂ.(ಸುದೀಶ್) ಕಣದಲ್ಲಿದ್ದಾರೆ. ಬೆಂಗಳೂರಿನ ಕಂಪೆನಿಯಲ್ಲಿ ಉದ್ಯೋಗದಲ್ಲಿರುವ ಗಣೇಶ್ ಇದೀಗ ಚುನಾವಣಾ ಕಣಕ್ಕಿಳಿದು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಗಣೇಶ್ ಎಂ.
ಅಲ್ಲದೆ ಸುಳ್ಯದ ಅಭಿವೃದ್ಧಿ ಮಾಡುವ ಭರವಸೆ ನೀಡಿ ಉತ್ತಮ ಪ್ರಜಾಕೀಯ ಪಾರ್ಟಿ ಪಕ್ಷದಿಂದ ರಮೇಶ್ ಬೂಡು ಹಾಗು ಪಕ್ಷೇತರ ಅಭ್ಯರ್ಥಿ ಗುರುವಪ್ಪ ಕಲ್ಲುಗುಡ್ಡೆ ಚುನಾವಣಾ ಕಣದಲ್ಲಿದ್ದಾರೆ.
ಹೈವೋಲ್ಟೇಜ್ ಪ್ರಚಾರ: ಕಾಂಗ್ರೆಸ್, ಬಿಜೆಪಿ ಪಕ್ಷಗಳು ಸೇರಿದಂತೆ ಎಲ್ಲಾ ಪಕ್ಷಗಳ ಅಭ್ಯರ್ಥಿಗಳು ಬಿರುಸಿನ ಚುನಾವಣಾ ಪ್ರಚಾರ ಕೈಗೊಂಡಿದ್ದಾರೆ. ಸುಳ್ಯದ ಚುನಾವಣಾ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಎರಡು ಪಕ್ಷಗಳ ರಾಷ್ಟ್ರೀಯ ಅಧ್ಯಕ್ಷರು ಚುನಾವಣಾ ಪ್ರಚಾರಕ್ಕೆ ಆಗಮಿಸುವ ಮೂಲಕ ಚುನಾವಣಾ ಪ್ರಚಾರದ ರಂಗು ಹೆಚ್ಚಿಸಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸುಳ್ಯಕ್ಕೆ ಆಗಮಿಸಿ ಪ್ರಚಾರ ನಡೆಸಿದ್ದಾರೆ. ಮನೆ ಮನೆ ಪ್ತಚಾರ, ಕಾರ್ಯಕರ್ತರ ಸಭೆಯ ಮೂಲಕ ಎಲ್ಲಾ ಪಕ್ಷಗಳು ಚುನಾವಣಾ ಕ್ಷೇತ್ರದಲ್ಲಿ ಸಕ್ರೀಯವಾಗಿದೆ. ಇನ್ನೂ ಕೆಲವು ಮುಖಂಡರು ಆಗಮಿಸಿ ರೋಡ್ ಶೋ ಮತ್ತಿತರ ಪ್ರಚಾರ ಕಾರ್ಯ ನಡೆಯುವ ಸಾಧ್ಯತೆ ಇದೆ. ಒಟ್ಟಿನಲ್ಲಿ ವಾತಾವರಣದ ಉಷ್ಣಾಂಶ ಏರಿಕೆಗಿಂತಲೂ ಹೆಚ್ಚು ಇಲ್ಲಿ ಚುನಾವಣಾ ಕಾವು ಏರು ಗತಿಯಲ್ಲಿದೆ..!