ಸುಳ್ಯ: ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ತಪ್ಪಿರುವ ಹಿನ್ನಲೆಯಲ್ಲಿ ಸುಳ್ಯ ರಾಜಕೀಯದಿಂದ ದೂರ ಉಳಿದಿದ್ದ ಕೆಪಿಸಿಸಿ ಸದಸ್ಯ ಹೆಚ್.ಎಂ.ನಂದಕುಮಾರ್ ಅವರು ಇಂದು ಸುಳ್ಯ ಕಾಂಗ್ರೆಸ್ ಚುನಾವಣಾ ಕಚೇರಿಗೆ ಆಗಮಿಸಿದರು. ಸುಳ್ಯದ ಕಾಂಗ್ರೆಸ್ ಮುಖಂಡರು ಹೂಗುಚ್ಛ ನೀಡಿ ಅವರನ್ನು ಸ್ವಾಗತಿಸಿದರು. ಟಿಕೆಟ್ ಕೈ ತಪ್ಪಿರುವ ಹಿನ್ನಲೆಯಲ್ಲಿ
ಮುನಿಸಿಕೊಂಡಿದ್ದ ನಂದಕುಮಾರ್ ಅಭಿಮಾನಿಗಳಾದ ಕಾಂಗ್ರೆಸ್ ಕಾರ್ಯಕರ್ತರನ್ನು ಹಾಗು ಪ್ರಮುಖರನ್ನು ರಮಾನಾಥ ರೈ ನೇತೃತ್ವದಲ್ಲಿ ಮುಖಂಡರು ಕರೆಸಿ ಮಾತುಕತೆ ನಡೆಸಿ ಸಮಸ್ಯೆಯನ್ನು ಇತ್ಯರ್ಥ ಪಡಿಸಿದ್ದರು. ಕಾಂಗ್ರೆಸ್ ಗೆಲುವಿಗಾಗಿ ಒಟ್ಟಾಗಿ ದುಡಿಯುವಂತೆ ರಮಾನಾಥ ರೈ ಸೂಚಿಸಿದ್ದರು. ಈ ಹಿನ್ನಲೆಯಲ್ಲಿ ಎಐಸಿಸಿ ಸದಸ್ಯ ಸುನಿಲ್ ಕೇದಾರ್ ಅವರ ಜೊತೆಯಲ್ಲಿ ನಂದಕುಮಾರ್ ಹಾಗು ಅವರ ಬೆಂಬಲಿಗರು ಕಾಂಗ್ರೆಸ್ ಚುನಾವಣಾ ಕಚೇರಿಗೆ ಆಗಮಿಸಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ ಅವರು ಹೂಗುಚ್ಛ ನೀಡಿ ನಂದಕುಮಾರ್ ಅವರನ್ನು ಸ್ವಾಗತಿಸಿದರು.
ಎಐಸಿಸಿ ಸದಸ್ಯ ಸುನಿಲ್ ಕೇದಾರ್ ನೇತೃತ್ವದಲ್ಲಿ ಚುನಾವಣಾ ಪ್ರಚಾರ ಕಾರ್ಯವನ್ನು ಪರಿಶೀಲಿಸಿದರು. ವಿವಿಧ ಬೂತ್ಗಳಲ್ಲಿ ನಡೆಯುವ ಚುನಾವಣಾ ಪ್ರಚಾರ ಕಾರ್ಯದ ಬಗ್ಗೆ ವರದಿ ಪಡೆದ ಸುನಿಲ್ ಕೇದಾರ್ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ, ಕೆಪಿಸಿಸಿ ವಕ್ತಾರ ಟಿ.ಎಂ.ಶಹೀದ್ ತೆಕ್ಕಿಲ್,ಕೆಪಿಸಿಸಿ ಸದಸ್ಯ ಹೆಚ್.ಎಂ.ನಂದಕುಮಾರ್, ಕೆಪಿಸಿಸಿ ಅಲ್ಪ ಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಎಂ.ಮುಸ್ತಫ, ಸುಳ್ಯ ವಿಧಾನಸಭಾ ಕ್ಷೇತ್ರದ ಪ್ರಚಾರ ಸಮಿತಿ ಅಧ್ಯಕ್ಷ ಸದಾನಂದ ಮಾವಜಿ, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ, ಎಐಸಿಸಿ ಉಸ್ತುವಾರಿ ಕಮಲ್ ಜಿತ್, ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ, ಪ್ರಮುಖರಾದ ಕೆ.ಗೋಕುಲ್ದಾಸ್, ನ.ಪಂ.ಸದಸ್ಶ ಶರೀಫ್ ಕಂಠಿ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಸಿದ್ದಿಕ್ ಕೊಕ್ಕೊ, ಇಂಟೆಕ್ಶಾ ಅಧ್ಯಕ್ಷ ಶಾಫಿ ಕುತ್ತಮೊಟ್ಟೆ, ಯುವ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಭವಾನಿಶಂಕರ ಕಲ್ಮಡ್ಕ,ಸತ್ಯಕುಮಾರ್ ಆಡಿಂಜ, ಹನೀಫ್ ಕುನ್ನಿಲ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು