*ಶಿವಸುಬ್ರಹ್ಮಣ್ಯ ಕಲ್ಮಡ್ಕ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮನೆ ಮಾತಾಗಿದ್ದ ‘ನವಭಾರತ ‘ ದ ಜಾಹೀರಾತು ಫಲಕ ಇದು.ಈ ಪತ್ರಿಕೆ ಮುಚ್ಚಿ ಮೂರು ದಶಕಗಳಿಗೂ ಹೆಚ್ಚು ವರ್ಷಗಳು ಸಂದರೂ ಸುಳ್ಯ ತಾಲೂಕಿನ ಬೆಳ್ಳಾರೆ ಟೌನ್ ರಸ್ತೆಯ ಹಳೆಯ ಕಟ್ಟಡದ ಗೋಡೆಯಲ್ಲಿ ಚೌಕಟ್ಟಿನಲ್ಲಿ ನವಭಾರತ ಪತ್ರಿಕೆಯ ಹೆಸರಿನ ಫಲಕ ಥಟ್ಟನೆ ಕಣ್ಣು ಸೆಳೆಯುತ್ತದೆ. ಸ್ಥಳೀಯರಾದ ದಿವಂಗತ ಶ್ಯಾಮ ಜೋಶಿ ಅವರು ಅಂದು ಪತ್ರಿಕಾ ಏಜೆನ್ಸಿ ನಡೆಸುತ್ತಿದ್ದರು. ತಂದೆಯವರ ನಂತರ ಪುತ್ರ ಸುಬ್ರಹ್ಮಣ್ಯ ಜೋಶಿ ಈ ಏಜೆನ್ಸಿ ನಡೆಸಿದರು. ಆದರೆ ನವಭಾರತ ಆಗಲೇ ಹಳೆಯದಾಗಿ ಮುಚ್ಚಿದ್ದರಿಂದ ನವಭಾರತವನ್ನು ಓದುಗರಿಗೆ ಕೊಡುವ ಅವಕಾಶ ಸುಬ್ರಹ್ಮಣ್ಯ ಜೋಶಿಯವರಿಗೆ ಸಿಗಲಿಲ್ಲ. ಆಗ ಮಾರುಕಟ್ಟೆಯಲ್ಲಿ
ಪ್ರಬಲವಾಗಿದ್ದ ಜಿಲ್ಲೆಯ ಪ್ರಮುಖ ಪತ್ರಿಕೆಗಳಾದ ಮುಂಗಾರು ಮತ್ತು ಉದಯವಾಣಿ ಪತ್ರಿಕೆಗಳು ಹಾಗು ಇತರ ಮಾಸಿಕಗಳ ಮಾರಾಟ ಮಾಡುವ ಅವಕಾಶ ಸುಬ್ರಹ್ಮಣ್ಯ ಜೋಶಿ ಅವರಿಗೆ ಸಿಕ್ಕಿತು. 60-70ರ ದಶಕಗಳಲ್ಲಿ ಅಪ್ಪನ ಕೆಲಸದ ಬದ್ಧತೆಯನ್ನು ಪುತ್ರ ಸುಬ್ರಹ್ಮಣ್ಯ ಹೀಗೆ ನೆನಪಿಸುತ್ತಾರೆ.
-‘ಕೃಷಿಕರಾಗಿದ್ದ ನನ್ನ ಅಪ್ಪನವರು, ವೈದ್ಯ ಡಾ. ಮಹಾಲಿಂಗ ಭಟ್ಟರ ಕ್ಲಿನಿಕ್ ನಲ್ಲಿ ಕಂಪೌಂಡರ್ ಕೆಲಸವನ್ನೂ ಮಾಡುತ್ತಿದ್ದರು. ಅಡಿಕೆ ಬೆಳೆಗಾರರಿಗೆ ಮಾರಾಟಕ್ಕೆ ಅನುಕೂಲವಾಗಲು ಅಡಿಕೆ ವ್ಯಾಪಾರ ಕೂಡಾ ಮಾಡುತ್ತಿದ್ದರು. ಸ್ಥಳೀಯರಿಗೆ ಓದುವ ಸಂಸ್ಕೃತಿ ಹೆಚ್ಚಿಸಬೇಕೆಂಬ ಉದ್ದೇಶದಿಂದ ಪೇಪರ್ ಏಜೆನ್ಸಿ ಆರಂಭಿಸಿದರು. ಈ ಏಜೆನ್ಸಿಯಿಂದ ಬರುವ ಕಮಿಷನ್ ಅತ್ಯಲ್ಪವಾದರೂ, ಅವರಿಗೆ ಕೆಲಸದಲ್ಲಿ ಬದ್ಧತೆ ಇತ್ತು. ಅಂದಿನ ಕಾಲದಲ್ಲಿ ಅಪ್ಪನವರು ಹತ್ತಿರದ ಕಲ್ಮಡ್ಕ, ಚೊಕ್ಕಾಡಿ, ಬಾಳಿಲ, ಮುಂಡುಗಾರುವರೆಗೆ ಪತ್ರಿಕೆ ತಲುಪಿಸುತ್ತಿದ್ದರು. ಕುಕ್ಕೆ ಸುಬ್ರಹ್ಮಣ್ಯದವರೆಗೂ ಸೈಕಲ್ ತುಳಿದೇ ಹೋಗಿ ಪತ್ರಿಕೆ ವಿತರಿಸಿದ ಕಾಲವೂ ಆಗಿನದು. ಪತ್ರಿಕೆ ಆ ಭಾಗದ ಬುದ್ಧಿವಂತ ಜನರಿಗೆ ತಲುಪಿದರೆ , ಓದುವ ಆಸಕ್ತಿ ವೃದ್ಧಿಯಾಗುತ್ತದೆ ಎಂಬುದೊಂದೇ ಅಪ್ಪನ ಆಶಯವಾಗಿತ್ತು. ನಾನು ಏಜೆನ್ಸಿ ತೆಗೆದುಕೊಳ್ಳುವಾಗ ಕಾಲ ಬದಲಾಗಿತ್ತು. ಊರುಗಳಿಗೆ ಬಸ್ ವ್ಯವಸ್ಥೆ ಹಾಗೂ ಖುದ್ದಾಗಿ ಬಂದು ಖರೀದಿ ಮಾಡುವವರ ಸಂಖ್ಯೆಯೂ ಹೆಚ್ಚಿತ್ತು. ಅಪ್ಪನ ವಿಶೇಷ ಆಸಕ್ತಿಯಿಂದಲೇ ಆ ಜಾಹೀರಾತು ಫಲಕ ಕಟ್ಟಡದ ಗೋಡೆಯಲ್ಲಿ 40-45 ವರ್ಷಗಳ ಹಿಂದೆಯೇ ಹಾಕಲಾಗಿತ್ತು. ಕಾಕತಾಳೀಯ ಎಂಬಂತೆ ನಾವು ಸಹೋದರರು ಆ ಕಟ್ಟಡದಲ್ಲಿದ್ದ ಜವಳಿ ಮಾರಾಟ ಮಳಿಗೆಯನ್ನು ಬೇರೆಡೆಗೆ ಸ್ಥಳಾಂತರಿಸಿದರೂ ಫಲಕ ಮಾತ್ರ ಅಲ್ಲೇ ಇದೆ. ಪತ್ರಿಕೆಗಳ ಮಾರಾಟ ಮಳಿಗೆಯೂ ಹಳೇ ಕಟ್ಟಡದಲ್ಲಿ ನಿಂತಿತು. ಆದರೆ, ನವಭಾರತದ ನೆನಪೂ ಇನ್ನು ಹಸಿರಾಗಿಯೇ ಇದೆ. ಅದಕ್ಕೆ ಸಾಕ್ಷಿ ಎಂಬಂತೆ ಆ ಜಾಹೀರಾತು ಬೋರ್ಡ್ ಕೂಡಾ ಕಟ್ಟಡದ ಗೋಡೆಯಲ್ಲಿ ಇದೆ’. ಪತ್ರಿಕೆಯ ನೆನಪು…..
ಅಂದಹಾಗೆ, ನವಭಾರತ ಜಾಹೀರಾತು ಫಲಕದ ಬಗ್ಗೆ ಹೇಳಿದ ಮೇಲೆ ಪತ್ರಿಕೆ ಬಗ್ಗೆ ನಾಲ್ಕು ಮಾತು ಹೇಳದಿದ್ದರೆ ತಪ್ಪಾದೀತು. ಹಿರಿಯ ಪತ್ರಕರ್ತ, ಮನೋಹರ ಪ್ರಸಾದ್ ನವಭಾರತದ ಬಗ್ಗೆ ಹೀಗೆ ನೆನಪಿಸುತ್ತಾರೆ.
”ರಟ್ಟಿನಲ್ಲೇ ಬರೆದಿದ್ದ ಜಾಹೀರಾತು ಫಲಕ ಕ್ರಮೇಣ ಮರದ ಚೌಕಟ್ಟು, ಕಬ್ಬಿಣದ ಚೌಕಟ್ಟು ಆಯಿತು. ಪತ್ರಿಕೆ ಇಲ್ಲಿ ಲಭ್ಯವಿದೆ ಎಂಬ ಜಾಹೀರಾತು ಬೋರ್ಡ್ ಅಳವಡಿಸುತ್ತಿದ್ದರು. ನವಭಾರತ ಸಿಪಿಸಿ ಬಸ್ ಸರ್ವೀಸ್ ಮೂಲಕ ಪತ್ರಿಕೆ ಸರಬರಾಜು ಮಾಡುತ್ತಿದ್ದುದರಿಂದ ಪ್ರಸಾರ ಸಂಖ್ಯೆ 60-70 ರ ದಶಕದಲ್ಲಿ 30,000 ದಾಟಿದ್ದು ಸಾಧನೆಯೇ. ಎಸ್.ವಿ.ಕುಡ್ವ ಅವರಿಂದ ಸ್ಥಾಪನೆಯಾದ ನವಭಾರತ ವಿ.ಸಂಜೀವ ಕುಡ್ವ ಅವರವರೆಗೆ ನಡೆಯಿತು.
ಶಿಂಗಣ್ಣನವರ ಕಾರ್ಟೂನ್ಗಳು, ಎಂ.ವಿ.ಹೆಗ್ಡೆಯವರ ಅರ್ಥಗರ್ಭಿತ ವಾರ್ತೆಗಳು ಎಂಬ ಕಾಲಂ ಓದುಗರನ್ನು ಅತಿ ಹೆಚ್ಚು ಸೆಳೆದಿತ್ತು.. ನವಭಾರತ ಪತ್ರಿಕೆ ಇದ್ದ ಸ್ಥಳದಲ್ಲಿ ಈ ಓಷನ್ ಪರ್ಲ್ ಹೋಟೆಲ್ ಇದೆ. ಮುದ್ರಣವಾಗುತ್ತಿದ್ದ ಸ್ಥಳ ಈಗ ಫ್ಲಾಟ್ ಆಗಿದೆ. ಹಳೆಯ ಸಂಚಿಕೆ ಇಟ್ಟುಕೊಂಡವರಿಗಷ್ಟೇ ನವಭಾರತದ ನೆನಪು ಹಸಿರಾಗಿ ಇರಬಹುದು.1970ರ ನಂತರ ನವಭಾರತ ಪತ್ರಿಕೆ ಹೊರ ಬಂದದ್ದೇ ಒಂದು ಪವಾಡ. ಹೊಸ ಪತ್ರಿಕೆಗಳು ಮಾರುಕಟ್ಟೆಗೆ ಬಂದಾಗ ಪೈಪೋಟಿ ನೀಡಲು ನವಭಾರತಕ್ಕೆ ಸಾಧ್ಯವಾಗದೆ ಹಳತಾಯಿತು. ಪ್ರಸಾರ ಸಂಖ್ಯೆ ಅತಿ ಕಡಿಮೆಗೆ ಇಳಿದು, ನಿಂತೇ ಹೋಯಿತು. ಕಾಲೇಜು ವಿದ್ಯಾರ್ಥಿ ಅಗಿದ್ದಾಗಲೇ ನನ್ನ ಕಥೆ ‘ಬಾಡಿದ ಬಳ್ಳಿ’ ನವಭಾರತ ಪುರವಣಿಯಲ್ಲಿ ಪ್ರಕಟವಾಗಿತ್ತು ಎಂದು ಹೇಳಲು ಹೆಮ್ಮೆ’.
ಎಂದು ನೆನಪಿಸುತ್ತಾರವರು.
(ಶಿವಸುಬ್ರಹ್ಮಣ್ಯ ಕಲ್ಮಡ್ಕ ಅವರು ಹಿರಿಯ ಪತ್ರಕರ್ತರು. ನಾಡಿನ ಪ್ರಮುಖ ಕನ್ನಡ ಪತ್ರಿಕೆಗಳ ಸಂಪಾದಕರಾಗಿ ಕಾರ್ಯನಿರ್ವಹಿಸಿದವರು. ಪರಿಸರ ವನ್ಯಜೀವಿ ಛಾಯಾಚಿತ್ರಗ್ರಾಹಕರು)