ನವದೆಹಲಿ: ನೂತನ ಸಂಸತ್ ಭವನದ ಉದ್ಘಾಟನೆಯನ್ನು ಪ್ರಧಾನಿ ನರೇಂದ್ರ ಮೋದಿ ನೆರವೇರಿಸಿದರು. ಪೂಜೆ, ಹವನಗಳೊಂದಿಗೆ ಆರಂಭಗೊಂಡು ವಿವಿಧ ಕಾರ್ಯಕ್ರಮಗಳು ನಡೆಯುತಿದೆ. ಮುಂಜಾನೆ ಹವನ ಮತ್ತು ಸರ್ವಧರ್ಮ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು.ಪ್ರಧಾನಿ ನರೇಂದ್ರ ಮೋದಿ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಪೂಜೆಯಲ್ಲಿ ಪಾಲ್ಗೊಂಡರು. ಬಳಿಕ ನಾಮಫಲಕ ಅನಾವರಣ ಮಾಡುವ ಮೂಲಕ ನೂತನ ಸಂಸತ್ ಭವನವನ್ನು
ಪ್ರಧಾನಿ ಮೋದಿ ಅವರು ಉದ್ಘಾಟಿಸಿದರು. ಲೋಕಸಭೆಯ ಒಳಗೆ ಸೆಂಗೋಲ್ ಪ್ರತಿಷ್ಠಾಪನೆ ನಡೆಯಿತು. ನೂತನ ಸಂಸತ್ ಭವನದಲ್ಲಿ ಸ್ಪೀಕರ್ ಆಸನದ ಪಕ್ಕದಲ್ಲಿರುವ ಗಾಜಿನ ಪೆಟ್ಟಿಗೆಯಲ್ಲಿ ಐತಿಹಾಸಿಕ ರಾಜದಂಡವನ್ನು ಪ್ರಧಾನಿ ನರೇಂದ್ರ ಮೋದಿ ಪ್ರತಿಷ್ಢಾಪಿಸಿದರು.
‘ಅಧೀನಂ’ (ತಮಿಳುನಾಡಿನ ಶೈವ ಮಠಗಳ ಪುರೋಹಿತರು), ಐತಿಹಾಸಿಕ ಸೆಂಗೋಲ್ ತಯಾರಿಕೆಯಲ್ಲಿ ಶ್ರಮಿಸಿದ ವುಮ್ಮಿಡಿ ಚಿನ್ನಾಭರಣ ವ್ಯಾಪಾರಿಗಳು ಮತ್ತು ನೂತನ ಸಂಸತ್ ಭವನವನ್ನು ನಿರ್ಮಿಸಿದವರನ್ನು ಸನ್ಮಾನಿಸಲಾಯಿತು.
ಮಧ್ಯಾಹ್ನ 12 ಗಂಟೆಗೆ ರಾಷ್ಟ್ರಗೀತೆ ಹಾಡುವುದರೊಂದಿಗೆ ಎರಡನೇ ಹಂತದ ಕಾರ್ಯಕ್ರಮ ಆರಂಭವಾಗಲಿದೆ. ಈ ಸಂದರ್ಭದಲ್ಲಿ ಎರಡು ಕಿರುಚಿತ್ರಗಳನ್ನು ಪ್ರದರ್ಶಿಸಲಾಗುವುದು.
ರಾಜ್ಯಸಭಾ ಉಪಾಧ್ಯಕ್ಷರು ಸ್ವಾಗತ ಭಾಷಣ ಮಾಡುವರು. ಉಪಾಧ್ಯಕ್ಷರು ಹಾಗೂ ಅಧ್ಯಕ್ಷರು ಸಂದೇಶ ನೀಡಲಿದ್ದಾರೆ. ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆಯಲ್ಲಿ ಭಾಷಣ ಮಾಡಲಿದ್ದಾರೆ.
ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಭಾಷಣ ಮಾಡಲಿದ್ದು, ಸ್ಮರಣಾರ್ಥ ನಾಣ್ಯ ಮತ್ತು ಅಂಚೆಚೀಟಿ ಬಿಡುಗಡೆ ಮಾಡಲಾಗುವುದು.
ಮಧ್ಯಾಹ್ನ 2.30ಕ್ಕೆ ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿ ಭಾಷಣದೊಂದಿಗೆ ಕಾರ್ಯಕ್ರಮ ಮುಕ್ತಾಯವಾಗಲಿದೆ.
ನೂತನ ಕಟ್ಟಡದ ವೈಶಿಷ್ಟ್ಯಗಳು:
2020 ಡಿಸೆಂಬರ್ 10ಕ್ಕೆ ಪ್ರಧಾನಿ ನೂತನ ಸಂಸತ್ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು.
13 ಎಕರೆಯಲ್ಲಿ ಅಂದಾಜು 1200 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ. ಲೋಕಸಭೆ ಛಾವಣಿ ನವಿಲಿನಾಕಾರದಲ್ಲಿ, ರಾಜ್ಯಸಭೆ ಕಮಲದಾಕಾರದಲ್ಲಿ ನಿರ್ಮಾಣ ಮಾಡಲಾಗಿದೆ,ವನೂತನ ಕಟ್ಟಡ 150 ವರ್ಷ ಬಾಳಿಕೆ ನಿರೀಕ್ಷೆ, ಹೊಸ ಲೋಕಸಭೆಯಲ್ಲಿ 888 ಜನ, ರಾಜ್ಯಸಭೆಯಲ್ಲಿ 384 ಮಂದಿ ಕುಳಿತುಕೊಳ್ಳಲು ವ್ಯವಸ್ಥೆ, ಹಳೆಯ ಭವನದಲ್ಲಿ ಸೆಂಟ್ರಲ್ ಹಾಲ್ ಇದ್ದರೆ ನೂತನ ಕಟ್ಟಡದಲ್ಲಿ ಸೆಂಟ್ರಲ್ ಹಾಲ್ ಇಲ್ಲ. ಜಂಟಿ ಅಧಿವೇಶನಕ್ಕಾಗಿ ಲೋಕಸಭೆಯಲ್ಲೇ 1,272 ಮಂದಿ ಕುಳಿತುಕೊಳ್ಳಲು ವ್ಯವಸ್ಥೆ. ನೂತನ ಭವನವು 4 ಅಂತಸ್ತಿನ ಕಟ್ಟಡವಾಗಿದ್ದು, 64,500 ಚದರ ಮೀಟರ್ ವಿಸ್ತೀರ್ಣ ಹೊಂದಿದೆ. ಜ್ಞಾನ ದ್ವಾರ, ಶಕ್ತಿ ದ್ವಾರ ಹಾಗೂ ಕರ್ಮ ದ್ವಾರ ಎಂಬ ಮೂರು ಪ್ರಮುಖ ದ್ವಾರಗಳ ನಿರ್ವಣ. ಸಂಸದರು, ವಿಐಪಿ ಸಂದರ್ಶಕರು ಹಾಗೂ ಅಧಿಕಾರಿಗಳಿಗಾಗಿ ಪ್ರತ್ಯೇಕ ಪ್ರವೇಶ ದ್ವಾರ. ಭವನದ ಮೇಲೆ ರಾಷ್ಟ್ರೀಯ ಲಾಂಛನದ ಪ್ರತಿರೂಪ ಇರಿಸಲಾಗಿದೆ. 9,500 ಕೆ.ಜಿ ಕಂಚಿನ ಪ್ರತಿಮೆ 6.5 ಮೀಟರ್ ಎತ್ತರ ಇದೆ.