ಹೈದರಾಬಾದ್:ಶ್ರೀಲಂಕಾ ವಿರುದ್ಧ ದಾಖಲೆಯ ಸ್ಕೋರ್ ಚೇಸ್ ಮಾಡಿ ಗೆದ್ದ ಪಾಕಿಸ್ತಾನ ಏಕದಿನ ವಿಶ್ವಕಪ್ ಕ್ರೀಡಾಕೂಟದಲ್ಲಿ ಎರಡನೇ ಗೆಲುವು ದಾಖಲಿಸಿತು. ಶ್ರೀಲಂಕಾ ನೀಡಿದ 345 ರನ್ ಬೃಹತ್ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ 48.2 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 348 ರನ್ ಬಾರಿಸಿ ಭರ್ಜರಿ ಗೆಲುವು ದಾಖಲಿಸಿತು. ಇಲ್ಲಿನ ರಾಜೀವ್ ಗಾಂಧಿ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ಪರ ಆರಂಭಿಕ ಬ್ಯಾಟರ್
ಅಬ್ದುಲ್ಲಾ ಶಫೀಕ್ ಹಾಗೂ ಮಹಮ್ಮದ್ ರಿಝ್ವಾನ್ ಭರ್ಜರಿ ಶತಕಗಳ ಮೂಲಕ ಮಿಂಚಿ ತಂಡಕ್ಕೆ ರೋಚಕ ಗೆಲುವು ತಂದು ಕೊಟ್ಟರು. ಆರಂಭಿಕ ಅಬ್ದುಲ್ ಶಫೀಕ್ 103 ಎಸೆತ ಗಳಲ್ಲಿ 10 ಬೌಂಡರಿ 3 ಸಿಕ್ಸರ್ ಸಹಿತ 113 ರನ್ ಗಳಿಸಿದರೆ, ವಿಕೆಟ್ ಕೀಪರ್ – ಬ್ಯಾಟರ್ ಮುಹಮ್ಮದ್ ರಿಜ್ವಾನ್ 121 ಎಸೆತಗಳಲ್ಲಿ 3 ಸಿಕ್ಸರ್, 8 ಬೌಂಡರಿಯೊಂದಿಗೆ ಅಜೇಯ 131 ರನ್ ಸಿಡಿಸಿದರು. ಇವರಿಬ್ಬರೂ 3ನೇ ವಿಕೆಟ್ಗೆ 176 ರನ್ ಜೊತೆಯಾಟ ಆಡಿದರು.
ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಶ್ರೀಲಂಕಾ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 344 ರನ್ ಗಳಿಸಿತು. ಲಂಕಾ ಪರ ಕೂಡ ಎರಡು ಆಕರ್ಷಕ ಶತಕ ಮೂಡಿ ಬಂದಿತ್ತು. ಕುಸಾಲ್ ಮೆಂಡಿಸ್ 77 ಎಸೆತಗಳಲ್ಲಿ 14 ಬೌಂಡರಿ 6 ಸಿಕ್ಸರ್ ಸಹಿತ 122 ರನ್ ಗಳಿಸಿದರೆ, ಇನ್ನೋರ್ವ ಬ್ಯಾಟರ್ ಸದೀರ ಸಮರವಿಕ್ರಮ 89 ಎಸೆತ ಎದುರಿಸಿ 11 ಬೌಂಡರಿ ಸಹಿತ 108 ರನ್ ಸಿಡಿಸಿದ್ದರು.
ಪಾಕಿಸ್ತಾನ ವಿಶ್ವಕಪ್ನಲ್ಲಿ ಆಡಿದ ಎರಡೂ ಪಂದ್ಯಗಳನ್ನು ಗೆದ್ದರೆ, ಶ್ರೀಲಂಕಾ ಎರಡನೇ ಪಂದ್ಯದಲ್ಲಿ ಸೋಲನುಭಿವಿಸಿತು. 4 ಶತಕ ಸಿಡಿದ ಪಂದ್ಯದಲ್ಲಿ 692 ರನ್ ದಾಖಲಾಯಿತು.