ಮುಂಬಯಿ: ಪ್ಲೇ ಆಫ್ ಪ್ರವೇಶಕ್ಕೆ ಗೆಲ್ಲಲೇ ಬೇಕಾದ ಮಹತ್ವದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಸನ್ರೈಸರ್ಸ್ ವಿರುದ್ಧ 8 ವಿಕೆಟ್ಗಳಿಂದ ಗೆಲುವು ಸಾಧಿಸಿದೆ. ಆದರೆ ತಂಡ ಪ್ಲೇ ಆಫ್ ಪ್ರವೇಶ ಪಡೆಯಬೇಕಿದ್ದರೆ ಆರ್ಸಿಬಿ ಮತ್ತು ಗುಜರಾತ್ ನಡುವಣ ಪಂದ್ಯದ ಫಲಿತಾಂಶ ಬರಬೇಕಿದೆ. ಒಂದೊಮ್ಮೆ ಆರ್ಸಿಬಿ ಗೆದ್ದರೆ ಮುಂಬೈ ತಂಡದ ಈ ಗೆಲುವು ವ್ಯರ್ಥವಾಗುತ್ತದೆ. ಈ ಮಧ್ಯೆ ಬೆಂಗಳೂರಿನಲ್ಲಿ ಭಾರಿ ಮಳೆಯಾಗಿರುವುದರಿಂದ ಪಂದ್ಯ ಆರಂಭಗೊಳ್ಳುವುದು ತಡವಾಗಿದೆ. ಪಂದ್ಯ ರದ್ದಾದರೆ ಮುಂಬೈ ತಂಡ ಆರ್ಸಿಬಿಗಿಂತ ಒಂದು ಅಂಕ
ಮುನ್ನಡೆಯಲ್ಲಿ ನಾಲ್ಕನೇ ತಂಡವಾಗಿ ಪ್ಲೇ ಆಫ್ಗೆ ಲಗ್ಗೆಯಿಡಲಿದೆ. ಗೆದ್ದರೆ ಆರ್ಸಿಬಿ ಪ್ಲೇ ಆಫ್ ಪ್ರವೇಶಿಸಲಿದೆ.ಮುಂಬಯಿ ವಾಂಖೇಡೆ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಸನ್ರೈಸರ್ಸ್ ಹೈದರಾಬಾದ್ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 200 ರನ್ ಗಳಿಸಿತು. ಬೃಹತ್ ಮೊತ್ತವನ್ನು ದಿಟ್ಟ ರೀತಿಯಲ್ಲಿ ಬೆನ್ನಟ್ಟಿದ ಮುಂಬೈ 18 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 201 ರನ್ ಬಾರಿಸಿ ಗೆಲುವು ದಾಖಲಿಸಿತು. ಮುಂಬೈ ಪರ ಕ್ಯಾಮರೂನ್ ಗ್ರೀನ್(100*) ಅಜೇಯ ಶತಕ ಬಾರಿಸಿ ಮಿಂಚಿದರು. ನಾಯಕ ರೋಹಿತ್ ಶರ್ಮ ಅರ್ಧ ಶತಕ ಸಿಡಿಸಿದರು.ನಾಯಕ ರೋಹಿತ್ ಶರ್ಮ ಹಾಗೂ ಕ್ಯಾಮರೂನ್ ಗ್ರೀನ್ ಮಹತ್ವದ ಪಂದ್ಯದಲ್ಲೇ ಬ್ಯಾಟಿಂಗ್ ಫಾರ್ಮ್ ಕಂಡುಕೊಂಡರು. ದ್ವಿತೀಯ ವಿಕೆಟ್ಗೆ ಜತೆಯಾದ ಈ ಜೋಡಿ ತಂಡಕ್ಕೆ ಉತ್ತಮ ಅಡಿಪಾಯ ನಿರ್ಮಿಸಿಸಿದರು. ವಾಂಖೇಡೆ ಕ್ರಿಕೆಟ್ ಸ್ಟೇಡಿಯಂನ ಮೂಲೆ ಮೂಲೆಗೂ ಸಿಕ್ಸರ್ ಬೌಂಡರಿ ಬಾರಿಸಿ ಹೈದರಾಬಾದ್ ಬೌಲರ್ಗಳನ್ನು ಬೆಂಡೆತ್ತಿದರು. ಜತೆಗೆ ನೆರೆದಿದ್ದ ಸ್ಥಳೀಯ ಅಭಿಮಾನಿಗಳಿಗೆ ಭರಪೂರ ರಂಜನೆ ನೀಡಿದರು.
ರೋಹಿತ್ ಶರ್ಮ 37 ಎಸೆತಗಳಿಂದ 56 ರನ್ ಗಳಿಸಿ ಔಟಾದರು. ಗ್ರೀನ್ ಮತ್ತು ರೋಹಿತ್ ದ್ವಿತೀಯ ವಿಕೆಟ್ಗೆ 128 ರನ್ಗಳ ಅಮೂಲ್ಯ ಜತೆಯಾಟ ನಡೆಸಿದರು. ರೋಹಿತ್ ವಿಕೆಟ್ ಪತನಗೊಂಡರೂ ಗ್ರೀನ್ ಅವರ ಬ್ಯಾಟಿಂಗ್ ಆರ್ಭಟಕ್ಕೆ ಮುಂದುವರಿಸಿದರು. ಕೊನೆವರೆಗೂ ಬ್ಯಾಟಿಂಗ್ ನಡೆಸಿದ ಗ್ರೀನ್ ಐಪಿಎಲ್ನಲ್ಲಿ ಚೊಚ್ಚಲ ಶತಕ ಸಿಡಿಸಿ ಸಂಭ್ರಮಿಸಿದರು. 47 ಎಸೆತಗಳಿಂದ ತಲಾ 8 ಸಿಕ್ಸರ್ ಮತ್ತು 8 ಬೌಂಡರಿ ನೆರವಿನಿಂದ ಅಜೇಯ 100 ರನ್ ಗಳಿಸಿದರು. ಸೂರ್ಯಕುಮಾರ್ ಅಜೇಯ 25 ರನ್ ಬಾರಿಸಿದರು.
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಹೈದರಾಬಾದ್ ಪರ ವಿವ್ರಾಂತ್ ಶರ್ಮಾ ಮತ್ತು ಕನ್ನಡಿಗ ಮಯಾಂಕ್ ಅಗರ್ವಾಲ್ ಉತ್ತಮ ಆರಂಭ ಒದಗಿಸಿದರು. ಉಭಯ ಆಟಗಾರರು ಅರ್ಧಶತಕ ಬಾರಿಸಿ ಮಿಂಚಿದರು.
ಈ ಜೋಡಿ ಮೊದಲ ವಿಕೆಟ್ಗೆ 140 ರನ್ ಒಟ್ಟುಗೂಡಿಸಿದರು. ವಿವ್ರಾಂತ್ ಶರ್ಮಾ ಅವರು 47 ಎಸೆತ ಎದುರಿಸಿ 9 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 69 ರನ್ ಬಾರಿಸಿದರು. ಹೆನ್ರಿಚ್ ಕ್ಲಾಸೆನ್ 18 ರನ್ ಗಳಿಸಿ ವಿಕೆಟ್ ಕೈಚೆಲ್ಲಿದರು. ಮಯಾಂಕ್ ಅಗರ್ವಾಲ್ 83 ರನ್ ಬಾರಿಸಿದರು. ಅಗರ್ವಾಲ್ 8 ಬೌಂಡರಿ ಮತ್ತು 4 ಸೊಗಸಾದ ಸಿಕ್ಸರ್ ಬಾರಿಸಿದರು.