ಸುಳ್ಯ: ಸುಳ್ಯ ಭಾಗದಲ್ಲಿ ಚಿತ್ರೀಕರಣಗೊಂಡ ಅರೆಭಾಷೆ ಸಿನಿಮಾ ‘ಮೂಗಜ್ಜನ ಕೋಳಿ’ 13 ನೇ ಲಿಫ್ಟ್-ಆಫ್ ಗ್ಲೋಬಲ್ ನೆಟ್ವರ್ಕ್ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ಸಂತೋಷ್ ಮಾಡ ನಿರ್ದೇಶನದ ಈ ಸಿನಿಮಾ ಯುಕೆ ಮೂಲದ 13 ನೇ ಲಿಫ್ಟ್-ಆಫ್ ಗ್ಲೋಬಲ್ ನೆಟ್ವರ್ಕ್ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ಮೇ 29ರಿಂದ ಚಲನ ಚಿತ್ರೋತ್ಸವ ಆರಂಭವಾಗುತ್ತಿದ್ದು, ಸ್ಪರ್ಧೆಗೆ ಬಂದಿರುವ ಚಿತ್ರಗಳನ್ನು
ಆನ್ ಲೈನ್ನಲ್ಲಿ ವೀಕ್ಷಿಸಲು ಅವಕಾಶ ಇದೆ ಎಂದು ಚಿತ್ರದ ನಿರ್ದೇಶಕ ಸಂತೋಷ್ ಮಾಡ ತಿಳಿಸಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ‘ಜೀಟಿಗೆ’ ತುಳು ಚಿತ್ರ ನಿರ್ದೇಶಿಸಿದ್ದ ಸಂತೋಷ್ ಮಾಡ ಮೊದಲ ಬಾರಿಗೆ ಅರೆಭಾಷೆಯ ಚಿತ್ರ ಮೂಗಜ್ಜನ ಕೋಳಿಯನ್ನು ನಿರ್ದೇಶನ ಮಾಡಿದ್ದಾರೆ. ಗಲ್ಫ್ ಮರಳುಗಾಡಿನಲ್ಲಿ ಬೆಳೆದ ಬಾಲಕಿ ‘ಕನಸು’ ಮೊದಲ ಬಾರಿಗೆ ತನ್ನ ಹೆತ್ತವರ ಊರು ಸುಳ್ಯಕ್ಕೆ ಬರುತ್ತಾಳೆ. ಆಕೆಗೆ ಅಲ್ಲಿನ ಸುಂದರ ಹಸಿರು ಪರಿಸರ ಹೊಸದಾಗಿರುತ್ತದೆ. ತನ್ನದೆ ದೃಷ್ಟಿಕೋನದಲ್ಲಿ ಇವೆಲ್ಲವನ್ನೂ ಗಮನಿಸುವ ಬಾಲಕಿ ಮುಗ್ಧಳಾಗಿ ಅನೇಕ ಪ್ರಶ್ನೆಗಳನ್ನು ಕೇಳುತ್ತಾಳೆ. ಈಕೆಯ ನೆರೆಮನೆಯಲ್ಲಿ ಕೋಳಿ ಸಾಕಿಕೊಂಡಿರುವ ಒರಟು ಸ್ವಭಾವದ ಮೂಗಜ್ಜ ಇರುತ್ತಾನೆ. ಮುಗ್ಧ ಹುಡುಗಿ ಮತ್ತು ಮೂಗಜ್ಜನ ನಡುವೆ ನಡೆಯುವ ಸಂಘರ್ಷ ಮತ್ತು ಸಂಬಂಧದ ಕಥೆ ಯನ್ನು ಮೂಗಜ್ಜನ ಕೋಳಿ ಸಿನಿಮಾದಲ್ಲಿ ಚಿತ್ರಿಸಲಾಗಿದೆ.
ಮೂಗಜ್ಜನ ಪಾತ್ರದಲ್ಲಿ ನವೀನ್ ಡಿ.ಪಡೀಲ್ ಮತ್ತು ಕನಸು ಪಾತ್ರದಲ್ಲಿ ಗೌರಿಕ ದೀಪುಲಾಲ್ ಅಭಿನಯಿಸಿದ್ದಾರೆ. ಪ್ರಕಾಶ್ ತುಮ್ಮಿನಾಡು, ದೀಪಕ್ ರೈ ಪಾಣಾಜೆ, ರೂಪಶ್ರೀ ವರ್ಕಾಡಿ, ಸುಕನ್ಯಾ, ರಾಘವೇಂದ್ರ ಭಟ್, ಜೀವನ್ ರಾಮ್ ಸುಳ್ಯ, ಸಾನಿಧ್ಯ ಮತ್ತಿತರರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ‘ಅಮರಸುಳ್ಯ ಸ್ವಾತಂತ್ರ್ಯ ಹೋರಾಟ 1837’ರ ಕೆಲ ತುಣುಕುಗಳು ಕೂಡ ಈ ಸಿನಿ ಮಾದಲ್ಲಿ ಸೇರಿಸಲಾಗಿದೆ. ಇದೊಂದು ಮಕ್ಕಳ ಚಿತ್ರವಾಗಿದ್ದು, ಕೆ.ಸುರೇಶ್ ನಿರ್ಮಿಸಿದ್ದಾರೆ. ಹಿರಿಯ ಕವಿ ಸುಬ್ರಾಯ ಚೊಕ್ಕಾಡಿ ಸಾಹಿತ್ಯ ವಿದ್ದು, ಅರುಣ್ ಗೋಪನ್ ಸಂಗೀತ ಕೊಟ್ಟಿದ್ದಾರೆ. ಆಶಾ ಭಟ್ ಹಾಡುಗಳನ್ನು
ಹಾಡಿದ್ದಾರೆ. ಸುರೇಶ್ ಅರಸ್ ಸಂಕಲನ ವಿದೆ. ವಿಷ್ಣುಪ್ರಸಾದ್ ಕ್ಯಾಮರಾ ಹಿಡಿದಿರುವ ಈ ಸಿನಿಮಾದಲ್ಲಿ ಸುಳ್ಯದ ಹಲವು ಮಂದಿ ಕಲಾವಿದರು ಸಹಕರಿಸಿದ್ದಾರೆ. ‘ಅರೆ ಭಾಷೆಯಲ್ಲಿ ನಿರ್ದೇಶನ ಮಾಡಿದ ಈ ಸಿನಿಮಾ 13ನೇ ಲಿಫ್ಟ್-ಆಫ್ ಗ್ಲೋಬಲ್ ನೆಟ್ವರ್ಕ್ ಚಲನಚಿತ್ರೋ ತ್ಸವಕ್ಕೆ ಆಯ್ಕೆ ಆಗಿರುವುದು ಖುಷಿ ತಂದಿದೆ. ಮತ್ತಷ್ಟು ಸಿನಿಮಾಗಳನ್ನು ಮಾಡಲು ಪ್ರೇರಣೆ ನೀಡಿದೆ ಎನ್ನುತ್ತಾರೆ ಮೂಗಜ್ಜನ ಕೋಳಿ ನಿರ್ದೇಶಕ ಸಂತೋಷ್ ಮಾಡ.