ನವದೆಹಲಿ: ಬಂಗಾಳಕೊಲ್ಲಿಯಲ್ಲಿ ಉಂಟಾದ ‘ಮೋಚಾ’ ಚಂಡಮಾರುತ ಅತಿ ತೀವ್ರ ಸ್ಚರೂಪ ತಾಳಿದ್ದು ನಿನ್ನೆ ಬಾಂಗ್ಲಾ ಕರಾವಳಿಗೆ ಅಪ್ಪಳಿಸಿತು. ಮೊಚಾ ನಿನ್ನೆ ಮಧ್ಯಾಹ್ನ ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ಕರಾವಳಿಯಲ್ಲಿ ಅಪ್ಪಳಿಸಿ ಭಾರೀ ಹಾನಿ ಮಾಡಿದೆ. ಧಾರಾಕಾರ ಮಳೆಯ ಜೊತೆಗೆ, ಚಂಡಮಾರುತವು ಭಾರೀ ಹಾನಿಯನ್ನುಂಟು ಮಾಡಿತು. ಸಾವಿರಾರು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಮ್ಯಾನ್ಮಾರ್ ನ ರಾಖಿನೆ ರಾಜ್ಯದತ್ತ ಚಂಡಮಾರುತ ಮುಂದುವರಿದಿದ್ದು ಸಿಟ್ವೆ ನಗರದಲ್ಲಿ ಕಟ್ಟೆಚ್ಚರದ
ಸ್ಥಿತಿ ಘೋಷಿಸಲಾಗಿದ್ದು 3 ಲಕ್ಷ ಜನಸಂಖ್ಯೆಯಿರುವ ಸಿಟ್ವೆ ನಗರದಲ್ಲಿನ 4 ಸಾವಿರಕ್ಕೂ ಅಧಿಕ ಜನರನ್ನು ಶುಕ್ರವಾರದಿಂದ ಇತರ ನಗರಗಳಿಗೆ ಸ್ಥಳಾಂತರಿಸಲಾಗಿದ್ದರೆ, 20,000ಕ್ಕೂ ಅಧಿಕ ಜನರು ಎತ್ತರದ ಸ್ಥಳದಲ್ಲಿರುವ ಮಠ, ಮಂದಿರ ಮತ್ತು ಶಾಲೆಗಳಲ್ಲಿ ಆಶ್ರಯ ಪಡೆದಿದ್ದಾರೆ.
ಚಂಡಮಾರುತ ಅಪ್ಪಳಿಸುವ ಮೊದಲೇ ನಗರದಲ್ಲಿ ಗಂಟೆಗೆ 48 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿತ್ತು. ಗಾಳಿಯ ವೇಗ ಹೆಚ್ಚುತ್ತಿರುವುದರಿಂದ ಭೀತಿಗೊಂಡಿರುವ ಜನತೆ ತಾತ್ಕಾಲಿಕ ಶಿಬಿರದತ್ತ ತೆರಳಿದ್ದಾರೆ.ಈ ವಲಯದಲ್ಲಿ ಕಳೆದೊಂದು ದಶಕದಲ್ಲಿ ಬೀಸಿದ ಅತ್ಯಂತ ಪ್ರಬಲ ಚಂಡಮಾರುತ ಎಂದೆನಿಸಿರುವ ಮೋಚಾ ಚಂಡಮಾರುತ ರವಿವಾರ ಬೆಳಿಗ್ಗೆ ಬಾಂಗ್ಲಾದ ಕೋಕ್ಸ್ ಬಝಾರ್ಗೆ ಅಪ್ಪಳಿಸಿದೆ. ಇಲ್ಲಿ ನಿರ್ಮಿಸಲಾಗಿರುವ ತಾತ್ಕಾಲಿಕ ಟೆಂಟ್ಗಳಲ್ಲಿ ಸುಮಾರು 1 ದಶಲಕ್ಷದಷ್ಟು ರೊಹಿಂಗ್ಯಾಗಳು ನೆಲೆಸಿದ್ದು ಅವರನ್ನು ಟ್ರಕ್ ಮತ್ತಿತರ ವಾಹನಗಳ ಮೂಲಕ ಸಮುದಾಯ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.
ಜಿಲ್ಲೆಯಲ್ಲಿ ಸುಮಾರು 1.27 ದಶಲಕ್ಷ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ.
ಬಾಂಗ್ಲಾದ ಅತೀದೊಡ್ಡ ಬಂದರುನಗರ ಚಿತ್ತಗಾಂಗ್ನಲ್ಲಿ ಎಲ್ಲಾ ಚಟುವಟಿಕೆಗಳನ್ನೂ ಸ್ಥಗಿತಗೊಳಿಸಲಾಗಿದೆ ಎಂದು ವರದಿಯಾಗಿದೆ. ಭಾರೀ ಮಳೆ, ಪ್ರವಾಹ ಮತ್ತು ಭೂಕುಸಿತಗಳು ಮ್ಯಾನ್ಮಾರ್ನ ಸಾವಿರಾರು ಜನರ ಮೇಲೆ ಪರಿಣಾಮ ಬೀರಿದ್ದು ಮ್ಯಾನ್ಮಾರ್ನ ರಾಖಿನೆ ರಾಜ್ಯದಲ್ಲಿ 6 ದಶಲಕ್ಷ ಜನತೆ ಮಾನವೀಯ ನೆರವಿನ ಅಗತ್ಯದಲ್ಲಿದ್ದಾರೆ ಎಂದು ವರದಿಯಾಗಿದೆ.ಚಂಡಮಾರುತದ ಪರಿಣಾಮ ತಮಿಳುನಾಡು ಕರಾವಳಿ, ಕನ್ಯಾಕುಮಾರಿ ಪ್ರದೇಶ, ಶ್ರೀಲಂಕಾ ಕರಾವಳಿಯಲ್ಲಿ ಗಂಟೆಗೆ 60 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.