ಕೋಲ್ಚಾರು:ಕೋಲ್ಚಾರು ಕುಟುಂಬಸ್ಥರ ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ಮೇ.16ರಿಂದ 18ರ ತನಕ ಶ್ರೀ ವಯನಾಟ್ ಕುಲವನ್ ದೈವಕಟ್ಟು ಮಹೋತ್ಸವ ನಡೆಯಲಿದೆ. ಸುಳ್ಯ ತಾಲೂಕಿನ ತೊಡಿಕಾನ ಸೀಮೆಗೆ ಒಳಪಟ್ಟ ಆಲೆಟ್ಟಿ ಗ್ರಾಮದ ಶ್ರೀ ಸದಾಶಿವ ಗ್ರಾಮ ದೇವರ ಹಾಗೂ ಕುತ್ತಿಕೋಲ್ ಶ್ರೀ ತಂಬುರಾಟಿ ಭಗವತಿ ಕ್ಷೇತ್ರದ ಪರಿಧಿಯಲ್ಲಿರುವ ಕೇರಳ ಗಡಿಪ್ರದೇಶವಾದ ಕೋಲ್ದಾರು ಮಣಿಗಾರಜ್ಜನ ವಂಶಸ್ಥರ ತರವಾಡಿನ ದೈವ ಸನ್ನಿಧಿಯಲ್ಲಿ ನಡೆಯುವ ದೈವಕಟ್ಟು ಮಹೋತ್ಸವಕ್ಕೆ
ಅದ್ದೂರಿ ಸಿದ್ಧತೆಗಳನ್ನ ಮಾಡಲಾಗಿದೆ. ಮಹೋತ್ಸವಕ್ಕಾಗಿ ನಾಡಿಗೇ ನಾಡೇ ಅಣಿಯಾಗಿದೆ. ವರ್ಣ ವರ್ಣ ವೈವಿಧ್ಯ ತಳಿರು ತೋರಣಗಳಿಂದ, ಪ್ಲೆಕ್ಸ್ಗಳು, ಬಂಟಿಂಗ್ಸ್ಗಳಿಂದ ಅಲಂಕರಿಸಲಾಗಿದೆ. ಸುಳ್ಯ ಕೋಲ್ಚಾರ್ ಬಂದಡ್ಕ ರಸ್ತೆ ಮುಖ್ಯ ರಸ್ತೆಯಿಂದ ದೈವಸ್ಥಾನಕ್ಕೆ ಪ್ರವೇಶಿಸುವ ದ್ವಾರ ಆಕರ್ಷಕವಾಗಿ ಮನ ಸೆಳೆದಿದೆ. ದೈವಸ್ಥಾನದ ಮಾದರಿಯಲ್ಲಿಯೇ ದ್ವಾರ ನಿರ್ಮಿಸಲಾಗಿದೆ. ಇಲ್ಲಿ ದೈವಸ್ಥಾನವೇ ಮೈದಳೆದಂತೆ ಭಾಸವಾಗುತಿದೆ. ರಸ್ತೆಯಲ್ಲಿ ತೆರಳುವ ಮಂದಿ ಕೈ ಮುಗಿದು ವಂದಿಸಿ, ಪೊಟೋ ಕ್ಲಿಕ್ಕಿಸಿ ಮುಂದೆ ಸಾಗುತ್ತಿದ್ದಾರೆ. ದೈವಸ್ಥಾನದ ಅದೇ ವಿನ್ಯಾಸದ ದ್ವಾರ, ಆಕರ್ಷಕ
ಬಣ್ಣಗಳು ಮನ ಸೆಳೆದಿದೆ. ದ್ವಾರದ ಎರಡೂ ಬದಿಯಲ್ಲಿ ವಯನಾಟ್ ಕುಲವನ್ ದೈವ, ಕಂಡನಾರ್ ಕೇಳನ್, ಕೋರಚ್ಚನ್ ದೈವ, ವಿಷ್ಣುಮೂರ್ತಿ ದೈವದ ಚಿತ್ರಗಳನ್ನು ಅಳವಡಿಸಲಾಗಿದೆ. ಕಲಾವಿದರಾದ
ಲೋಹಿತಾಶ್ವ ಪರಮಂಡಲ, ಸತ್ಯಪ್ರಕಾಶ್ ಕೋಲ್ಚಾರ್ ಸುಳ್ಯ, ಮಧು ಉಜಿರೆ, ಶಿವರಾಮ ಕಲ್ಮಡ್ಕ ಹಾಗೂ ಸ್ಥಳೀಯ ಯುವಕರ ಸಹಕಾರದಲ್ಲಿ ಆಕರ್ಷಕ ದ್ವಾರ ನಿರ್ಮಿಸಲಾಗಿದೆ. ಸುಳ್ಯ ನಗರ ಸಮೀಪದ ನಾಗಪಟ್ಟಣ ಸೇತುವೆ ಬಳಿಯಿಂದಲೇ ಭಕ್ತರನ್ನು ಸ್ವಾಗತಿಸುವ ಪ್ರವೇಶ ದ್ವಾರ
ಆರಂಭಗೊಳ್ಳುತ್ತದೆ. ಇಲ್ಲಿಂದ ದೈವಸ್ಥಾನದ ತನಕ ರಸ್ತೆ ಬದಿಯಲ್ಲಿ ವಯನಾಟ್ ಕುಲವನ್ ದೈವಕಟ್ಟು ಮಹೋತ್ಸವದ ಪ್ಲೆಕ್ಸ್ಗಳು ರಾರಾಜಿಸುತ್ತಿವೆ. ಪ್ಲೆಕ್ಸ್ಗಳು, ಬಂಟಿಂಗ್ಸ್ಗಳು ಮೂಲಕ ಗ್ರಾಮವೇ ಶೃಂಗಾರಗೊಂಡಿದೆ.
ದೈವಕಟ್ಟು ಮಹೋತ್ಸವಕ್ಕೆ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದೆ. ದೈವದ ಅಂಗಣ ಮತ್ತಿತರ ವ್ಯವಸ್ಥೆಗಳು. ಆಗಮಿಸುವವರಿಗೆ
ಕುಳಿತುಕೊಳ್ಳಲು ವಿಶಾಲವಾದ ವ್ಯವಸ್ಥೆ. ವಿಶಾಲವಾದ ಊಟದ ವ್ಯವಸ್ಥೆ, ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ದೈವಸ್ಥಾನದ ಸುತ್ತಲೂ ಲೈಟಿಂಗ್ಸ್ಗಳನ್ನು, ಬಣ್ಣದ ಲೈಟಿಂಗ್ಸ್ಗಳು ಅಳವಡಿಸಲಾಗಿದೆ. ಮೂರು ದಿನಗಳ ಅದ್ದೂರಿ ಮಹೋತ್ಸವಕ್ಕೆ ಎಲ್ಲಾ ಸಿದ್ಧತೆ ಪೂರ್ಣಗೊಂಡಿದೆ.
50 ವರ್ಷಗಳ ಬಳಿಕ ಮಹೋತ್ಸವ-ಪುರುಷೋತ್ತಮ ಕೋಲ್ಚಾರು:
50 ವರ್ಷದ ಬಳಿಕ ನಡೆಯುವ ವಯನಾಟ್ ಕೋಲ್ಚಾರು ಕುಟುಂಬದ ವಯನಾಟ್ ಕುಲವನ್ ದೈವಸ್ಥಾನದಲ್ಲಿ ದೈವಕಟ್ಟು ಮಹೋತ್ಸವ ನಡೆಯುತಿದೆ ಎಂದು ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಪುರುಷೋತ್ತಮ ಕೋಲ್ಚಾರು ಹೇಳಿದ್ದಾರೆ. ಉತ್ಸವಕ್ಕೆ ಮಾಡಲಾದ ಸಿದ್ಧತೆಗಳ ಬಗ್ಗೆ ಅವರು ವಿವರಿಸಿದರು.