ಮುಂಬೈ: ಐಪಿಎಲ್ನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಸನ್ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ 4 ವಿಕೆಟ್ಗಳ ಜಯ ದಾಖಲಿಸಿದೆ. ಮೊದಲು ಬ್ಯಾಟ್ ಮಾಡಿದ ಎಸ್ಆರ್ಎಚ್ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ಗೆ 162 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಮುಂಬೈ 18.1 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಮುಂಬೈ ಇಂಡಿಯನ್ಸ್ ಪರ
ರೋಹಿತ್ ಶರ್ಮ 26, ರಯಾನ್ ರಿಕಲ್ಟನ್ 31, ವಿಲ್ ಜಾಕ್ಸ್ 36, ಸೂರ್ಯಕುಮಾರ್ ಯಾದವ್ 26 ರನ್ ಗಳಿಸಿದರು. ಹಾರ್ದಿಕ್ ಪಾಂಡ್ಯ 21, ತಿಲಕ್ ವರ್ಮ ಅಜೇಯ 21 ರನ್ ಬಾರಿಸಿದರು.
ಮೊದಲು ಬ್ಯಾಟ್ ಮಾಡಿದ ಎಸ್ಆರ್ಎಚ್ನ ಬಲಿಷ್ಠ ಬ್ಯಾಟಿಂಗ್ ವಿಭಾಗದ ಎದುರು ಆತಿಥೇಯ ಮುಂಬೈ ಇಂಡಿಯನ್ಸ್ ಬೌಲರ್ಗಳು ಉತ್ತಮ ದಾಳಿ ಸಂಘಟಿಸಿದರು. ಇದರಿಂದ ಎಸ್ಆರ್ಎಚ್ ಸಾಧಾರಣ ಮೊತ್ತ ಗಳಿಸಿತು. ರೈಸರ್ಸ್ ಪರ ಅಭಿಷೇಕ್ ಶರ್ಮಾ ಹಾಗೂ ಟ್ರಾವಿಸ್ ಹೆಡ್ 7.3 ಓವರ್ಗಳಲ್ಲಿ 59 ರನ್ ಕಲೆಹಾಕಿದರು. ಅಭಿಷೇಕ್ ಶರ್ಮ 40, ಟ್ರಾವಿಸ್ ಹೆಡ್ 28 ರನ್, ನಿತೀಶ್ ಕುಮಾರ್ ರೆಡ್ಡಿ 19, ಹೆನ್ರಿಚ್ ಕ್ಲಾಸೆನ್ 37 ರನ್ಗಳ ಕೊಡುಗೆ ನೀಡಿದರು. ಕೊನೆಯಲ್ಲಿ ಬೀಸಾಟವಾಡಿದ ಅನಿಕೇತ್ ವರ್ಮಾ (ಅಜೇಯ 18 ರನ್) ಹಾಗೂ ಪ್ಯಾಟ್ ಕಮಿನ್ಸ್ (ಅಜೇಯ 8 ರನ್) ತಂಡದ ಮೊತ್ತವನ್ನು 160ರ ಗಡಿ ದಾಟಿಸಿದರು.
ಮುಂಬೈ ಪರ ವಿಲ್ ಜಾಕ್ಸ್ 2 ವಿಕೆಟ್ ಪಡೆದರು. ನಾಯಕ ಹಾರ್ದಿಕ್ ಪಾಂಡ್ಯ, ಟ್ರೆಂಟ್ ಬೌಲ್ಟ್ ಮತ್ತು ಜಸ್ಪ್ರಿತ್ ಬೂಮ್ರಾ ಒಂದೊಂದು ವಿಕೆಟ್ ಕಿತ್ತರು.