ನವದೆಹಲಿ: ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನ ಮಂಗಳವಾರ ನಡೆಯುತ್ತಿದ್ದು, ದೇಶದ 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 93 ಕ್ಷೇತ್ರಗಳ ಜನರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.120 ಮಹಿಳೆಯರು ಸೇರಿದಂತೆ 1,300ಕ್ಕೂ ಅಧಿಕ
ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಗೃಹ ಸಚಿವ ಅಮಿತ್ ಶಾ (ಗಾಂಧಿನಗರ) ಮತ್ತು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ (ಗುನಾ) ಸೇರಿದಂತೆ ಹಲವು ಪ್ರಮುಖರ ಭವಿಷ್ಯ ನಿರ್ಧಾರವಾಗಲಿದೆ.
ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿಗಳಾದ ಶಿವರಾಜ್ ಸಿಂಗ್ ಚೌಹಾನ್ ಮತ್ತು ದಿಗ್ವಿಜಯ್ ಸಿಂಗ್ ಅವರು ಇದೇ ಮೊದಲ ಬಾರಿ ಲೋಕಸಭಾ ಚುನಾವಣೆಗೆ ಕಣಕ್ಕಿಳಿದಿದ್ದಾರೆ.
ರಾಜ್ಯದ ಎರಡನೇ ಹಂತದ 14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ಆರಂಭಗೊಂಡಿದೆ.
ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ, ಬಿಜಾಪುರ, ಗುಲ್ಬರ್ಗ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರಕನ್ನಡ, ದಾವಣಗೆರೆ, ಶಿವಮೊಗ್ಗ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು, 227 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಮಾಜಿ ಸಿಎಂ ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ, ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್, ಅಣ್ಣಾಸಾಹೇಬ್ ಜೊಲ್ಲೆ, ಪ್ರಿಯಾಂಕಾ ಜಾರಕಿಹೊಳಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಳಿಯ ರಾಧಾಕೃಷ್ಣ ದೊಡ್ಡಮನಿ, ಭಗವಂತ ಖೂಬಾ, ಸಾಗರ್ ಖಂಡ್ರೆ, ಶ್ರೀರಾಮುಲು, ಪ್ರಭಾ ಮಲ್ಲಿಕಾರ್ಜುನ, ಗಾಯತ್ರಿ ಸಿದ್ದೇಶ್ವರ್, ಬಿ.ವೈ.ರಾಘವೇಂದ್ರ, ಕೆ.ಎಸ್.ಈಶ್ವರಪ್ಪ, ಗೀತಾ ಶಿವರಾಜ್ ಕುಮಾರ್, ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿ ಪ್ರಮುಖರು ಚುನಾವಣಾ ಕಣದಲ್ಲಿದ್ದಾರೆ.