ಫುತ್ತೂರು: ಪುರುಷರಕಟ್ಟೆ, ಮುಂಡೂರು, ತಿಂಗಳಾಡಿಯಲ್ಲಿ ಮತಯಾಚನೆ ಬಳಿಕ ಕುಂಬ್ರದಲ್ಲಿ ಶನಿವಾರ ಸಂಜೆ ಕಾಂಗ್ರೆಸಿನ ಬೃಹತ್ ಚುನಾವಣಾ ಪ್ರಚಾರ ಸಭೆ ನಡೆಯಿತು.
ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಮಾತನಾಡಿ, ದಕ್ಷಿಣ ಕನ್ನಡದ ಶಕ್ತಿ ಕೇಂದ್ರ ಮಂಗಳೂರಿನಲ್ಲಿ ಉದ್ಯೋಗ ಸೃಷ್ಟಿಸಬೇಕು ಎಂಬ ಯೋಜನೆ ಇಟ್ಟುಕೊಂಡು ಚುನಾವಣೆ ಎದುರಿಸಲಿದ್ದೇವೆ. ನಮ್ಮ ಊರಿನ ಯುವಕರು ನಮ್ಮ ಊರಿನಲ್ಲೇ ಕೆಲಸ ಮಾಡುವಂತಾಗಬೇಕು. ಇದರಿಂದ
ಮಾನವ ಸಂಪನ್ಮೂಲದ ಸದ್ಭಳಕೆ ಮಾಡಿದಂತಾಗುತ್ತದೆ. ಸಂಧ್ಯಾಕಾಲದಲ್ಲಿ ಮಕ್ಕಳು ತಮ್ಮ ಜೊತೆಗಿರಬೇಕು ಎಂಬ ಪೋಷಕರ ಆಶಯವೂ ಈಡೇರಿದಂತಾಗುತ್ತದೆ ಎಂದರು.
ಅಡಿಕೆ, ರಬ್ಬರ್ ಬೆಳೆಗಾರರು ಯಾವ ರೀತಿಯ ಸಂಕಷ್ಟ ಅನುಭವಿಸುತ್ತಿದ್ದಾರೆ ಎನ್ನುವುದು ನಮಗೆ ತಿಳಿದಿದೆ. ನಮ್ಮೂರಲ್ಲೇ ಸಾಕಷ್ಟು ಬೆಳೆ ಬೆಳೆಯುತ್ತಿದ್ದರೂ ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿರುವುದು ಯಾಕೆ ಎಂದು ಪ್ರಶ್ನಿಸಿದ ಅವರು, ರೈತರಿಗೆ ಬೆಂಬಲ ನೀಡಲು ಕಾಂಗ್ರೆಸ್ ಸರ್ಕಾರ ಗ್ಯಾರೆಂಟಿ ಘೋಷಿಸಿದೆ. ಗ್ಯಾರೆಂಟಿ ಯೋಜನೆಗಳನ್ನು ಈಡೇರಿಸಿ ನುಡಿದಂತೆ ನಡೆದ ಸರ್ಕಾರ ಎಂಬುದನ್ನು ಸಾಧಿಸಿ ತೋರಿಸಿದ್ದೇವೆ. ಕಾಂಗ್ರೆಸ್ ಸರಕಾರ ಜನರಿಗೆ ಭದ್ರತೆಯ ಭಾವನೆಯನ್ನು ನೀಡಿದೆ. ಜಿಲ್ಲೆಯಲ್ಲಿ ಈ ಬಾರಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದರು.
ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಕಾಂಗ್ರೆಸ್ ಸರಕಾರದ ಗ್ಯಾರೆಂಟಿ ಯೋಜನೆಗಳು ಮನೆಮನೆಗೆ ತಲುಪಿವೆ. ಈಗ ಕಾಂಗ್ರೆಸ್ ಸರಕಾರ ನೀಡಿರುವ ಯೋಜನೆಗಳನ್ನು ಮತವಾಗಿ ಪರಿವರ್ತಿಸುವ ಕೆಲಸ ಆಗಬೇಕಿದೆ. ಇನ್ನುಳಿದ ಕೆಲ ದಿನಗಳಲ್ಲಿ ಕಾರ್ಯಕರ್ತರು, ಮುಖಂಡರು ಸರಿಯಾಗಿ ಕೆಲಸ ನಿರ್ವಹಿಸಿ, ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರನ್ನು ಗೆಲ್ಲಿಸಿಕೊಡಬೇಕಿದೆ ಎಂದರು.
ಚುನಾವಣಾ ಉಸ್ತುವಾರಿ ಕಾವು ಹೇಮನಾಥ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ವಿಶ್ವನಾಥ್ ರೈ, ಅನಿತಾ ಹೇಮನಾಥ ಶೆಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್. ಮಹಮ್ಮದ್, ಅಕ್ರಮ ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು, ಕೌಶಲ್ ಪ್ರಸಾದ್, ಕೃಷ್ಣ ಪ್ರಸಾದ್ ಆಳ್ವ, ಅಶೋಕ್ ಪೂಜಾರಿ, ಎ.ಕೆ. ಜಯರಾಂ ರೈ, ಮೌರೀಸ್ ಮಸ್ಕರೇನಸ್, ಯಾಕೂಬ್ ಮುಲಾರ್, ಬದ್ರು, ಪ್ರಮೋದ್, ಶಶಿಕಿರಣ್ ರೈ, ಶಾರದಾ, ಚಿತ್ರಾ, ಭರತ್, ಶೀನಪ್ಪ ನಾಯ್ಕ, ಸಿದ್ದೀಕ್ ಸುಲ್ತಾನ್, ವಿನೋದ್ ಶೆಟ್ಟಿ, ದುರ್ಗಾ ಪ್ರಸಾದ್ ರೈ ಕುಂಬ್ರ, ಹಾರೀಸ್, ಚೆನ್ನ, ಭರತ್, ಮುನೀರ್, ಮಹಮ್ಮದ್, ವಿಶ್ವಜಿತ್ ಅಮ್ಮುಂಜೆ, ಮನಮೋಹನ್ ರೈ ಮೊದಲಾದವರು ಉಪಸ್ಥಿತರಿದ್ದರು.