ಸುಳ್ಯ:ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದು ಗೆದ್ದು ಶಾಸಕನಾದರೆ ಸುಳ್ಯದ ಸಮಗ್ರ ಅಭಿವೃದ್ಧಿಗೆ ನೀಲಿ ನಕಾಶೆ ತಯಾರಿಸಲಾಗುವುದು. ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಯುವಜನತೆಗೆ ಉದ್ಯೋಗ ನೀಡಲು ಹೆಚ್ಚಿನ ಆದ್ಯತೆ ನೀಡುತ್ತೇವೆ ಎಂದು ಕೆಆರ್ಎಸ್ ಪಕ್ಷದ ಸುಳ್ಯ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಗಣೇಶ್ ಎಂ.(ಸುಧೀಶ್) ಹೇಳಿದ್ದಾರೆ. ಸುಳ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ
ಅವರು ಜನರಿಗೆ ಉತ್ತಮ ಆರೋಗ್ಯ ಮತ್ತು ಉತ್ತಮ ವಿದ್ಯೆ ಸಿಗಬೇಕು. ಆ ನಿಟ್ಟಿನಲ್ಲಿ ಮೊದಲ ಆದ್ಯತೆ ನೀಡಲಾಗುವುದು. ಲಂಚ ಭ್ರಷ್ಟಾಚಾರ ನಿರ್ಮೂಲನೆಯೇ ನಮ್ಮ ಗುರಿ.ಬಲಿಷ್ಠ ಲೋಕಾಯುಕ್ತ ಮತ್ತು ಕಾಲ್ ಸೆಂಟರ್ ಮೂಲಕ ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತೇವೆ. ಆನ್ಲೈನ್ ಮೂಲಕ ಮತ್ತು ಮನೆ ಬಾಗಿಲಿಗೆ ಎಲ್ಲಾ ಸರ್ಕಾರಿ ಸೇವೆಗಳು. ಮೊಬೈಲ್ ಕ್ಲಿನಿಕ್ ಮೂಲಕ ಆರೋಗ್ಯ ಸೇವೆ. ಜಿಲ್ಲೆಗೊಂದು ಮೆಡಿಕಲ್ ಕಾಲೇಜು ಮತ್ತು ತಾಲೂಕಿಗೊಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ. ಅತ್ಯತ್ತಮ ಗುಣಮಟ್ಟದ, ಸ್ಮಾರ್ಟ್ ಕೊಠಡಿಗಳುಳ್ಳ ಉಚಿತ ಸರ್ಕಾರಿ ಶಾಲೆಗಳು. ಖಾಲಿ ಇರುವ 3 ಲಕ್ಷ ಸರಕಾರಿ ಹುದ್ದೆಗಳನ್ನು ಪಾರದರ್ಶಕ ರೀತಿಯಲ್ಲಿ ನೇಮಕಾತಿ ಮಾಡುವುದು ಹೀಗೆ ಹಲವು ಯೋಜನೆಗಳನ್ನು ಮಾಡಲಾಗುವುದು. ಬಸ್ ಟಿಕೆಟ್ ದರ 50 ಶೇ ಕಡಿತ, ವಿದ್ಯುತ್ ದರ ಇಳಿಕೆ ಮಾಡಲಾಗುವುದು ಇತ್ಯಾದಿ ಯೋಜನೆಗಳನ್ನು ಹಾಕಿಕೊಂಡಿದ್ದೇವೆ ಎಂದು ಹೇಳಿದರು.
ನೀತಿ ತಂಡದ ರಾಜ್ಯಾಧ್ಯಕ್ಷ ಜಯಂತ್ ಟಿ.ಕೆ. ಮಾತನಾಡಿ ನೀತಿ ತಂಡ ಕೆಆರ್ ಎಸ್ ಪಕ್ಷವನ್ನು ಬೆಂಬಲಿಸಲಿದ್ದು, ಲಂಚ, ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ನಮ್ಮ ಗುರಿ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕೆಆರ್ಎಸ್ ಪಕ್ಷದ ಸುಳ್ಯ ತಾಲೂಕು ಅಧ್ಯಕ್ಷ ಅವಿನಾಶ್ ಕಾರಿಂಜ, ತಾಲೂಕು ಕಾರ್ಯದರ್ಶಿ ಜೀವನ್ ನಾರ್ಕೋಡು, ಪುತ್ತೂರು ವಿಧಾನ ಸಭಾ ಕ್ಷೇತ್ರದ ಪಕ್ಷದ ಅಭ್ಯರ್ಥಿ ಐವನ್ ಪೆರಾವೋ ಇದ್ದರು.