ಸುಳ್ಯ: ಸುಳ್ಯ ತಾಲೂಕಿನ ಅಡಿಕೆ ಕೃಷಿಕರಿಗೆ ದೊಡ್ಡ ಸಮಸ್ಯೆಯಾಗಿರುವ
ಅಡಿಕೆ ಹಳದಿ ರೋಗ ಮತ್ತು ಎಳೆಚುಕ್ಕಿ ರೋಗಕ್ಕೆ ಪರಿಹಾರ ಒದಗಿಸುವುದು ಮುಖ್ಯ ಧ್ಯೇಯ ಎಂದು ಸುಳ್ಯ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸುಳ್ಯ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಸುಂದರ ಮೇರ ಹೇಳಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸುಳ್ಯ ಕ್ಷೇತ್ರದ
ಸಮಗ್ರ ಅಭಿವೃದ್ಧಿ ನಡೆಸಿ ಕ್ಷೇತ್ರವನ್ನು ಮಾದರಿಯಾಗಿ ರೂಪಿಸುವುದು ಯೋಜನೆ. ಅದಕ್ಕಾಗಿ ಹಲವು ಯೋಜನೆಗಳನ್ನು ರೂಪಿಸಲಾಗಿದೆ. ಗೆದ್ದು ಶಾಸಕನಾದರೆ ಸುಳ್ಯದ ಸಮಗ್ರ ಅಭಿವೃದ್ಧಿ ಮಾಡಲಾಗುವುದು ಎಂದು ಹೇಳಿದರು. ಸುಳ್ಯ ತಾಲೂಕು ಸರ್ಕಾರಿ ಆಸ್ಪತ್ರೆಯನ್ನು ಆಧುನೀಕರಣಗೊಳಿಸಲಾಗುವುದು. ಹಳ್ಳಿಗಳ ರಸ್ತೆ,ಕಾಲು ಸಂಕಗಳ ನಿರ್ಮಾಣ, ನೀರಿನ ಸಮಸ್ಯೆ ಪರಿಹಾರ, ಮೂಲಭೂತ ಸೌರ್ಯಗಳ ಒದಗಿಸುವುದು, ವಸತಿ ಯೋಜನೆಯ ಅರ್ಹ ಫಲಾನುಭವಿಗಳಿಗೆ ನಿವೇಶನವನ್ನು ಒದಗಿಸುವುದು.
ಪ್ರಾಥಮಿಕ, ಪ್ರೌಢ, ಕಾಲೇಜು ಮತ್ತು ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ, ಪ್ರವಾಸೋದ್ಯಮ ಪ್ರದೇಶವನ್ನು ಅಭಿವೃದ್ಧಿಪಡಿಸುವುದು, ತುಳುನಾಡಿನ ಕಲೆ, ಸಂಸ್ಕೃತಿ ಮತ್ತು ಕ್ರೀಡಾ ಚಟುವಟಿಕೆಗಳಿಗೆ ಉತ್ತೇಜನ ನೀಡುವುದು, ಬಡವರ ವೈದ್ಯಕೀಯ ಆರೈಕೆಗಾಗಿ ಹೆಚ್ಚಿನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ತೆರೆಯಲು ಪ್ರಯತ್ನಿಸುವುದು, ಆಟೋ ಚಾಲಕರಿಗೆ ಪ್ರತೀ ಗ್ರಾಮದಲ್ಲಿ ರಿಕ್ಷಾ ನಿಲ್ದಾಣದ ವ್ಯವಸ್ಥೆ ಕಲ್ಪಿಸುವುದು, ಪಿಂಚಣಿ ವ್ಯವಸ್ಥೆ, ಕೈಗಾರಿಕೋದ್ಯಮವನ್ನು ಸ್ಥಾಪಿಸಿ ಸ್ಥಳೀಯರಿಗೆ ಉದ್ಯೋಗ ಅವಕಾಶವನ್ನು ಕಲ್ಪಿಸುವುದು.
ಸುಳ್ಯ ನಗರ ಅಭಿವೃದ್ಧಿ ಮತ್ತು ಬೈಪಾಸ್ ನಿರ್ಮಾಣ ಮಾಡುವುದು,ಕಟ್ಟಡ ಕಾರ್ಮಿಕರು ಮತ್ತು ಚಾಲಕರಿಗೆ ಆರೋಗ್ಯ ವಿಮೆಯನ್ನು ಕಲ್ಪಿಸುವುದು.ಅಡಿಕೆ ಬೆಳೆಗಾರರ ಹಳದಿ ರೋಗ ಮತ್ತು ಎಳೆಚುಕ್ಕಿ ರೋಗಕ್ಕೆ ಪರಿಹಾರ ಒದಗಿಸುವುದು, ಅರಣ್ಯ ಒತ್ತುವರಿಯಲ್ಲಿ ವಾಸಿಸುವ ಜನರಿಗೆ ಪ್ರದೇಶವನ್ನು ಸಕ್ರಮ ಮಾಡಿಸುವ ಬಗ್ಗೆ ಪ್ರಯತ್ನಿಸುವುದು. ದೇವಸ್ಥಾನ,ದೈವಸ್ಥಾನದ ಅಭಿವೃದ್ಧಿಗೆ ಹೆಚ್ಚಿನ ಆಧ್ಯತೆ ನೀಡುವುದು.ಸುಳ್ಯದ ಕ್ರೀಡಾಂಗಣವನ್ನು ಅಭಿವೃದ್ಧಿ ಪಡಿಸಿ ಸಾರ್ವಜನಿಕ ಉಪಯೋಗಕ್ಕೆ ಅವಕಾಶ ಕಲ್ಪಿಸುವುದು, ಸರಕಾರಿ ಐಟಿಐ, ಪಾಲಿಟೆಕ್ನಿಕ್ ಕಾಲೇಜುಗಳನ್ನು ತೆರೆಯುವುದು.ನೆಟ್ವರ್ಕ್ ಸಮಸ್ಯೆ ಸಮಸ್ಯೆಯನ್ನು ಬಗೆಹರಿಸುವುದು. 110 ಕೆ.ವಿ ವಿದ್ಯುತ್ ಕಾಮಗಾರಿ ಶೀಘ್ರ ಪೂರ್ಣಗೊಳಿಸುವುದಕ್ಕೆ ಮೊದಲ ಆದ್ಯತೆ ನೀಡಲಾಗುವುದು ಎಂದು ಅವರು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಪ್ರಮುಖರಾದ ಅಶೋಕ್ ಕೊಂಚಾಡಿ, ಕರುಣಾಕರ ಪಲ್ಲತ್ತಡ್ಕ, ಸುಂದರ ನಿಡ್ಪಳ್ಳಿ, ಸೀತಾರಾಮ ಕೊಂಚಾಡಿ, ಜಯಪ್ರಕಾಶ್ ಕನ್ಯಾಡಿ, ವಸಂತ ಛತ್ರಪ್ಪಾಡಿ ಉಪಸ್ಥಿತರಿದ್ದರು.