ಹೈದರಾಬಾದ್: ಐಪಿಎಲ್ ಟೂರ್ನಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು 5 ರನ್ಗಳಿಂದ ಮಣಿಸಿತು. ಕೈಯಲ್ಲಿ ಮೂರು ವಿಕೆಟ್ಗಳಿದ್ದರೂ ಕೊನೆಯ ಎಂಟು ಎಸೆತಗಳಲ್ಲಿ 10 ರನ್ ಗಳಿಸಲು ವಿಫಲವಾದ ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ ಐಪಿಎಲ್ ಟೂರ್ನಿಯಲ್ಲಿ ಆರನೇ ಸೋಲು ಎದುರಾಯಿತು.ಅಂತಿಮ ಓವರ್ನಲ್ಲಿ ಕೈಚಳಕ ಮೆರೆದ
ಸ್ಪಿನ್ನರ್ ವರುಣ್ ಚಕ್ರವರ್ತಿ ಅವರು ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಗೆಲುವಿಗೆ ಕಾರಣರಾದರು. ಕೋಲ್ಕತ್ತ ತಂಡವು 20 ಓವರ್ಗಳಲ್ಲಿ 9 ವಿಕೆಟ್ಗಳಿಗೆ 171 ರನ್ ಗಳಿಸಿತು. ನಾಯಕ ರಾಣಾ (42; 31ಎ) ಮತ್ತು ರಿಂಕು ಸಿಂಗ್ (46; 35ಎ) ಅವರು ಉಪಯುಕ್ತ ಕಾಣಿಕೆ ನೀಡಿದರು.
ಸನ್ರೈಸರ್ಸ್ ತಂಡದ ಹೋರಾಟ 8 ವಿಕೆಟ್ ನಷ್ಟಕ್ಕೆ 166 ರನ್ಗಳಿಗೆ ಕೊನೆಗೊಂಡಿತು. ವರುಣ್ (20ಕ್ಕೆ 1) ಅಲ್ಲದೆ ವೈಭವ್ ಅರೋರ (32ಕ್ಕೆ 2) ಮತ್ತು ಶಾರ್ದೂಲ್ ಠಾಕೂರ್ (23ಕ್ಕೆ 2) ಬಿಗುವಾದ ಬೌಲಿಂಗ್ ಮೂಲಕ ಗಮನ ಸೆಳೆದರು.
ಸಾಧಾರಣ ಗುರಿ ಬೆನ್ನಟ್ಟಿದ ಹೈದರಾಬಾದ್, 54 ರನ್ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು. ನಾಯಕ ಏಡನ್ ಮರ್ಕರಂ (41 ರನ್, 40 ಎ.) ಮತ್ತು ಹೆನ್ರಿಚ್ ಕ್ಲಾಸೆನ್ (36 ರನ್, 20 ಎ.) ಐದನೇ ವಿಕೆಟ್ಗೆ 70 ರನ್ ಸೇರಿಸಿದರು.
ಆದರೆ ಇವರಿಬ್ಬರು ಔಟಾದ ಬಳಿಕ ಕೆಕೆಆರ್ ಬೌಲರ್ಗಳು ಹಿಡಿತ ಬಿಗಿಗೊಳಿಸಿದರು. ವರುಣ್ ಬೌಲ್ ಮಾಡಿದ ಕೊನೆಯ ಓವರ್ನಲ್ಲಿ 9 ರನ್ಗಳು ಬೇಕಿದ್ದವು. ಅಬ್ದುಲ್ ಸಮದ್ ಆ ಓವರ್ನಲ್ಲಿ ವಿಕೆಟ್ ಒಪ್ಪಿಸಿದರೆ, ಭುವನೇಶ್ವರ್ ಕುಮಾರ್, ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ವಿಫಲರಾದರು.ಕೆಕೆಆರ್ಗೆ ನಿತೀಶ್ ರಾಣಾ ಮತ್ತು ರಿಂಕು ಸಿಂಗ್ ಇನಿಂಗ್ಸ್ಗೆ ಬಲ ತುಂಬಿದರು. ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 61 ರನ್ ಸೇರಿಸಿದರು. ರಾಣಾ ಮೂರು ಬೌಂಡರಿ ಹಾಗೂ ಮೂರು ಸಿಕ್ಸರ್ಗಳನ್ನು ಸಿಡಿಸಿದರು.
ರಿಂಕು ನಾಲ್ಕು ಬೌಂಡರಿ ಹಾಗೂ ಒಂದು ಸಿಕ್ಸರ್ ಹೊಡೆದರು.