ಸುಳ್ಯ: ಸುಳ್ಯಕ್ಕೊಂದು ಸುಂದರ ಗೋಶಾಲೆ ಬೇಕು, ಬಿಡಾಡಿ ಜಾನುವಾರುಗಳಿಗೆ, ಅಶಕ್ತ ಗೋವುಗಳಿಗೆ ಆಸರೆಯಾಗಲು ಒಂದು ಆಶ್ರಯ ತಾಣ ಬೇಕು ಎಂಬುದು ಸುಳ್ಯದ ಬಹು ಕಾಲದ ಬೇಡಿಕೆ. ಈ ಬೇಡಿಕೆ ಇದೀಗ ಈಡೇರುವ ಹಂತಕ್ಕೆ ಬಂದಿದೆ. ಸುಳ್ಯ ನಗರ ಸಮೀಪ ಕೊಡಿಯಾಲಬೈಲಿನ ಪಶುಪಾಲನಾ ಇಲಾಖೆಯ 7.7 ಎಕ್ರೆಯ ವಿಶಾಲ ಪ್ರದೇಶದಲ್ಲಿ ಪ್ರಕೃತಿಯ ಮಧ್ಯೆ, ಸುಂದರ ಹಾಗೂ
ಸುಸಜ್ಜಿತ ಗೋಶಾಲೆ ನಿರ್ಮಾಣವಾಗಲಿದೆ.100 ಗೋವುಗಳಿಗೆ ಆಶ್ರಯ ತಾಣವಾಗಬಲ್ಲ ಗೋಶಾಲೆ ತಲೆ ಎತ್ತಲಿದೆ. ದ.ಕ.ಜಿಲ್ಲಾಡಳಿತ, ಪ್ರಾಣಿ ದಯಾ ಸಂಘ ದ.ಕ ಜಿಲ್ಲೆ , ಪಶು ಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಸುಳ್ಯ ಇವುಗಳ ಆಶ್ರಯದಲ್ಲಿ 50 ಲಕ್ಷ ವೆಚ್ಚದಲ್ಲಿ ನೂತನ ಗೋಶಾಲೆಗೆ ನಿರ್ಮಾಣ ಮಾಡಲಾಗುತ್ತದೆ.
100 ಗೋವುಗಳಿಗೆ ತಂಗಬಹುದಾದ ವಿಶಾಲವಾದ ಶೆಡ್, ಸ್ಥಳಕ್ಕೆ ಸುತ್ತಲೂ ಬೇಲಿ, 50 ಸಾವಿರ ಲಿಟರ್ನ ನೀರಿನ ಟ್ಯಾಂಕ್ ಮತ್ತಿತರ ಕಾಮಗಾರಿ ನಡೆಯಲಿದೆ. ಅಲ್ಲದೆ ನೀರಿಗಾಗಿ ಬೋರ್ವೆಲ್ ಕೊರೆಯಲಾಗುವುದು. ಗೋಶಾಲೆ ನಿರ್ಮಾಣಕ್ಕಾಗಿ ಜಾಗ ಸಮತಟ್ಟು ಮಾಡಲಾಗಿದೆ. ನೀರಿನ ಟ್ಯಾಂಕ್ ನಿರ್ಮಾಣ ಕಾರ್ಯ ಆರಂಭವಾಗಿದೆ. ಒಟ್ಟಿನಲ್ಲಿ ಒಂದೆರಡು ತಿಂಗಳಲ್ಲಿ ಗೋಶಾಲೆ ನಿರ್ಮಾಣ

ಪೂರ್ಣಗೊಳ್ಳಲಿದೆ.ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ. ಈ ಗೋಮಾಳ ಪ್ರದೇಶದಲ್ಲಿ ಗೋವುಗಳಿಗಾಗಿ ಹುಲ್ಲು ಬೆಳೆಯುವ ಯೋಜನೆಯೂ ಇದೆ. ವಾರೀಸುದಾರರಿಲ್ಲದ ಬಿಡಾಡಿ ಜಾನುವಾರುಗಳು, ಅಶಕ್ತ ಗೋವುಗಳನ್ನು ಆದ್ಯತೆಯ ಮೇರೆಗೆ ಇಲ್ಲಿ ಆಶ್ರಯ ನೀಡಿ ಸಾಕಿ ಸಲಹಲಾಗುವುದು ಎಂದು ಪಶು ಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಆಡಳಿತ ವೈದ್ಯಾಧಿಕಾರಿ ಡಾ.ನಿತಿನ್ ಪ್ರಭು ಹೇಳುತ್ತಾರೆ.

ಬೆಳೆದು ನಿಂತಿದೆ 1600 ಕ್ಕೂ ಹೆಚ್ಚು ಗಿಡಗಳು:
ಪಶು ಪಾಲನಾ ಇಲಾಖೆಯ 7.7 ಎಕ್ರೆ ಜಾಗದಲ್ಲಿ ಇಲಾಖೆ ಹಾಗು ಸುಳ್ಯದ ಗಾಂಧಿ ಚಿಂತನ ವೇದಿಕೆಯ ನೇತೃತ್ವದಲ್ಲಿ ಗಿಡ ಬೆಳೆಸುವ ಯೋಜನೆಯನ್ನು ಕಳೆದ ಕೆಲವು ವರ್ಷಗಳಿಂದ ಹಮ್ಮಿಕೊಂಡಿದೆ.ಇಲ್ಲಿ 1600 ಕ್ಕೂ ಹೆಚ್ಚು ಗಿಡಗಳು ಬೆಳೆದು ನಿಂತಿದೆ. ಹಣ್ಣು, ಹಂಪಲು, ಫಲ ವಸ್ತುಗಳ ಗಿಡಗಳು ಸೇರಿದಂತೆ ಹಲವು ಪ್ರಭೇದಗಳ ಗಿಡಗಳನ್ನು ಬೆಳೆಸಲಾಗಿದೆ. ಪಶುಪಾಲನಾ ಇಲಾಖೆಯ ಡಾ.ನಿತಿನ್ ಪ್ರಭು ಹಾಗು ಗಾಂಧಿಚಿಂತನ ವೇದಿಕೆಯ ಸಂಚಾಲಕ ಪತ್ರಕರ್ತ ಹರೀಶ್ ಬಂಟ್ವಾಳ್ ನೇತೃತ್ವದಲ್ಲಿ ಗಿಡಗಳನ್ನು ಬೆಳೆಸಲಾಗಿದೆ.ಮುಂದೆ ಈ ಗಿಡಗಳು ಬೆಳೆದು ಮರಗಳಾದರೆ ಗೋಶಾಲೆಗೆ ಹಾಗು ಈ ಗೋವುಗಳಿಗೆ ನೆರಳಿನ ಮತ್ತು ಆಹಾರದ ಆಸರೆಯ ಜೊತೆಗೆ ಸುಂದರ ಪರಿಸರವೂ ನಿರ್ಮಾಣವಾಗಲಿದೆ.

“ಸುಳ್ಯಕ್ಕೆ ಒಂದು ಗೋಶಾಲೆ ಆಗಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದ ಇದೆ. ಈ ಹಿನ್ನಲೆಯಲ್ಲಿ ಸರಕಾರ ಅನುದಾನ ಬಿಡುಗಡೆ ಮಾಡಿದೆ. ಇಲ್ಲಿ ಸುಸಜ್ಜಿತ ಗೋಶಾಲೆ ನಿರ್ಮಾಣ ಆಗಲಿದೆ”
-ಎಸ್.ಅಂಗಾರ
ಬಂದರು,ಮೀನುಗಾರಿಕೆ ಮತ್ತು ಒಳನಾಡು ಜಲ ಸಾರಿಗೆ ಸಚಿವರು.