*ಗಂಗಾಧರ ಕಲ್ಲಪಳ್ಳಿ.
ಸುಳ್ಯ:ಪ್ರಶಾಂತ ಸುಂದರ ಪರಿಸರದಲ್ಲಿ ಪಯಸ್ವಿನಿ ತಟದಲ್ಲಿ ವಿಶಾಲವಾಗಿ ವಿರಾಜಮಾನವಾಗಿರುವ ಸುಂದರ ಶಿಲಾಮಯ ದೇಗುಲ ಶ್ರೀ ಗುತ್ಯಮ್ಮ ದೇವಿ ಮತ್ತು ಸಹಪರಿವಾರ ಕ್ಷೇತ್ರ. ವರ್ಷದಲ್ಲಿ ಒಂದು ದಿನ ಮಾತ್ರ ಗರ್ಭಗುಡಿಯ ಬಾಗಿಲು ತೆರೆಯುವುದು ಈ ಕ್ಷೇತ್ರದ ವಿಶೇಷತೆ.ವಾರ್ಷಿಕ ಉತ್ಸವದ ಸಂದರ್ಭದಲ್ಲಿ ಅಂದರೆ ಜ.31ರಂದು ಒಂದು ದಿನ ಮಾತ್ರ ಈ ಕ್ಷೇತ್ರದ ಗರ್ಭಗುಡಿಯ ಬಾಗಿಲು ತೆರೆದು ಪೂಜೆ ಸಲ್ಲಿಸಲಾಗುತ್ತದೆ.ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ.ರೇಣುಕಾಪ್ರಸಾದ್ ಕೆ.ವಿ. ಧರ್ಮದರ್ಶಿಗಳಾಗಿರುವ ಕ್ಷೇತ್ರದಲ್ಲಿ ಇಂದಿನಿಂದ 3 ದಿನಗಳ ಕಾಲ
ವಾರ್ಷಿಕ ಉತ್ಸವ ನಡೆಯಲಿದೆ.ಸಂಪೂರ್ಣ ಶಿಲಾಮಯವಾಗಿ ಕಂಗೊಳಿಸುತ್ತಿರುವ ಕ್ಷೇತ್ರದಲ್ಲಿ ಶ್ರೀ ಗುತ್ಯಮ್ಮ ದೇವಿ ಹಾಗು ಸಹ ಪರಿವಾರ ದೈವಗಳ ಗುಡಿಗಳು ಹಾಗು ಸಾನ್ನಿಧ್ಯ ಇದೆ. ಕ್ಷೇತ್ರವನ್ನು ಸಂಪೂರ್ಣ ಶಿಲೆಯಿಂದಲೇ ನಿರ್ಮಿಸಲಾಗಿದ್ದು ವೈಭವಪೂರ್ಣವಾಗಿ ಕಂಗೊಳಿಸುತಿದೆ. ಜ.29 ಮತ್ತು 30 ರಂದು ವಿವಿಧ ದೈವಿಕ ಕಾರ್ಯಕ್ರಮಗಳು ನಡೆದು ಜ.31ರಂದು ಬೆಳಿಗ್ಗೆ 8 ರಿಂದ ಸ್ವಸ್ತಿ ಪುಣ್ಯಾಹವಾಚನ, ನಿರ್ಮಾಲ್ಯ ವಿಸರ್ಜನೆ, ರುದ್ರ ಹೋಮ, ನವಗ್ರಹ ಹೋಮ, ಚಂಡಿಕಾ ಹೋಮ, ದೈವ ದೇವರ ಆರಾಧನೆ ನಡೆಯಲಿದೆ. ಸಂಜೆ ಸಂಧ್ಯಾಕಾಲ ಗುತ್ಯಮ್ಮ ದೇವಿಗೆ ರಂಗ ಪೂಜಾ ಸೇವೆ ನೆರವೇರಲಿದೆ.
ಸ್ಥಳ ಪುರಾಣ:
ಪುರಾಣದಲ್ಲಿ ಉಲ್ಲೇಖಿಸಿದಂತೆ, ದಕ್ಷಿಣ ಭಾರತದ ಕರಾವಳಿ ಭಾಗವು ಪರಶುರಾಮನ ಸೃಷ್ಟಿ ಎಂಬುದು ಪ್ರತೀತಿ ಇಂತಹ ಸೃಷ್ಟಿಯ ಪ್ರಕೃತಿ ರಮಣೀಯವಾದ ಪ್ರದೇಶಗಳಲ್ಲಿ ಸುಳ್ಯವು ಕೂಡಾ ಒಂದು.ಇಲ್ಲಿ ಮೈ ತುಂಬಿ ಹರಿಯುವ ಪಯಸ್ವಿನಿ ನದಿ ತಟದಲ್ಲಿ ಸುಮಾರು 500 ವರ್ಷಗಳ ಹಿಂದೆ ವೈಭವದಿಂದ ಮೆರೆದು ಇತಿಹಾಸ ಪುಟದಲ್ಲಿ ಸೇರಿದ ಜೈನರ ಆಳ್ವಿಕೆಗೆ ಒಳಪಟ್ಟು ಒಂದು ಪ್ರದೇಶವೇ ಕಾಂತಮಂಗಲ.ಅನಾದಿಯಲ್ಲಿ ಇದು ಗುತ್ಯಮ್ಮ ಕ್ಷೇತ್ರವಾಗಿದ್ದು, ಇದರ ದಕ್ಷಿಣ ಆಯದಲ್ಲಿ ಜೈನ ಅರಮನೆ ಇತ್ತು.ಇಲ್ಲಿಯ ಪ್ರಧಾನ ವ್ಯಕ್ತಿಗೆ ಸೊರಬದ ಚಂದ್ರಗುತ್ತಿ ಅರಸು ಮನೆತನದಿಂದ ವಿವಾಹ ಸಂಬಂಧ ಏರ್ಪಟ್ಟು ಅಲ್ಲಿಯ ಪರಂಪರೆಯ ಅಳಿಯ ಕಟ್ಟಿನ ಪ್ರಕಾರ,ಅವರು ಆರಾಧನೆ ಮಾಡುತ್ತಿದ್ದ ಪ್ರೀತಿಯ ದೇವರಾದ ಗುತ್ಯಮ್ಮ ದೇವಿ ಬಳುವಳಿಯಾಗಿ, ವಿವಾಹಿತಯೊಂದಿಗೆ ಬಂದಿರುವರು ಇದರೊಂದಿಗೆ ದೈವಗಳಾದ ಧೂಮಾವತಿ, ಪಿಲಿಚಾಮುಂಡಿ, ಅಪ್ಪಪಂಜುರ್ಲಿ, ನಂದಿಕೋಣ, ಸಿರಿಕುಮಾರರು, ಕಲ್ಲುರ್ಟಿ, ಪಂಜುರ್ಲಿ, ನೀಚ ಬೊಬ್ಬರ್ಯ ಹಾಗೂ ದೈವಗಳಿಗೆ
ಯಜಮಾನ ಸ್ಥಾನ ಪಡೆದಿರುವ ಬಲ್ಲಾಳ ಬಲ್ಲಾಳ್ತಿ, ಜೈನ ವಂಶಸ್ಥರ ದೇವರಾದ ಬ್ರಹ್ಮ ದೇವರು. ಜೈನರ ಆಳ್ವಿಕೆಯ ಸಮಯದಲ್ಲಿ ದೈವಗಳು ಹಾಗೂ ಗುತ್ಯಮ್ಮ ದೇವಿಯನ್ನು ಈ ಕಾಂತಮಂಗಲದ ಪುಣ್ಯ ಸ್ಥಳದಲ್ಲಿ ಅದ್ಭುತವಾಗಿ ಪ್ರತಿಷ್ಠಾಪಿಸಿ ನೇಮ ನಡಾವಳಿ ನಡೆಯುತ್ತಿದ್ದು, ಅದರಂತೆ ಶ್ರೀ ದೇವಿ – ದೈವಗಳು ಜನರ ಕಷ್ಟ ಕಾರ್ಪಣ್ಯಗಳಿಗೆ ಹಾಗೂ ಭಕ್ತಾದಿಗಳ ಇಷ್ಟಾರ್ಥಗಳಿಗೆ ಸದಾ ಬೆಳಕಾಗಿ ಅದ್ಭುತ ಪವಾಡಗಳೇ ನಡೆದಿತ್ತು. ಗುತ್ಯಮ್ಮ ಎಂದರೆ ಪುರಾಣದ ಪ್ರಕಾರ ಪರಶುರಾಮ ದೇವರ ತಾಯಿ ಇವಳನ್ನು ರೇಣುಕಾಂಬ ಎಂದು ಹೆಸರಿನಿಂದಲೂ ಕರೆಯುತ್ತಾರೆ,ಇವಳು ಚಂದ್ರಗುತ್ತಿ ಬೆಟ್ಟದಲ್ಲಿ ನಿಂತ ಕಾರಣ ಅಂದರೆ “ಗುತ್ತಿನ ತಾಯಿ” ಎಂದು ಕರೆಯಲಾಗುತ್ತಿದೆ. ಈ ದೈವದ ಕೈಯಲ್ಲಿ ಕಡ್ತಲೆ ಇರುವುದರಿಂದ ಇವಳನ್ನು ದೈವ ಎಂದು ಪ್ರತಿಪಾದಿಸಲಾಯಿತು. ಇಲ್ಲಿ ನಿತ್ಯ ಪೂಜೆ ಮಾಡದೆ ವರ್ಷಕೊಮ್ಮೆ ಪೂಜೆ ಮಾಡುವುದರಿಂದ ದೇವಾಲಯ ವಾಗಿರದೆ ದೈವಾಲಯವಾಗಿ ಪರಿವರ್ತನೆ ಹೊಂದಿತು. ಕಾಲಾಂತರದಲ್ಲಿ ಕ್ಷೇತ್ರದ ಸಾನ್ನಿಧ್ಯಗಳು ಕಣ್ಮರೆಯಾಯಿತು.ಈ ಮಧ್ಯೆ ಗುತ್ಯಮ್ಮ ಹಾಗೂ ಸಹಪರಿವಾರ ದೈವಗಳಿಗೆ ಸಂಬಂಧಪಟ್ಟ ಸ್ಥಳಗಳು ಆಕಸ್ಮಿಕವಾಗಿ ಕುರುಂಜಿ ಮನೆತನದವರ ಸುಪರ್ದಿಗೆ ಬಂದವು.ಕುರುಂಜಿ ಮನೆತನದವರು ಡಾ.ಕೆ.ವಿ.ರೇಣುಕಾಪ್ರಸಾದ್ ನೇತೃತ್ವದಲ್ಲಿ ದೈವಜ್ಞರಾದ ಕಾರ್ಕಳದ ಕೊಂಡೆಜಾಲು ಸೀತಾರಾಮ ಉಪಾಧ್ಯಾಯರ ಮಾರ್ಗದರ್ಶದಂತೆ ಪುನರ್ ನಿರ್ಮಾಣ ಮಾಡಿದರು.ಈ ಭಾಗವನ್ನು
ಶೋಧಿಸಿದಾಗ, ಗುತ್ಯಮ್ಮ ದೇವಿಯ ಮೂಲ ವಿಗ್ರಹ, ದೈವ ದೇವರುಗಳ ಆಯುಧಗಳು ಮತ್ತು ವರಸೆಗಳು ಕಂಡು ಬಂದವು. ಪ್ರಶ್ನೆ ಚಿಂತನೆ ಮಾಡಿದಾಗ ಆ ಶಕ್ತಿಗಳನ್ನು ಜೀರ್ಣೋದ್ಧಾರ ಮಾಡಿ ಪುನರ್ ಪ್ರತಿಷ್ಠೆ ಮಾಡಿ ಬ್ರಹ್ಮಕಲಶ ನೆರವೇರಿಸಿದಲ್ಲಿ ಪರಿಸರದ ಜನರೆಲ್ಲರಿಗೂ ಸುಖ, ಶಾಂತಿ,ಹಾಗೂ ಸಮೃದ್ಧಿ ಪ್ರಾಪ್ತಿಯಾಗುತ್ತದೆ ಎಂಬುದಾಗಿ ಕಂಡು ಬಂದಿತು. ಆ ಪ್ರಕಾರ ಕುರುಂಜಿ ಮನೆತನದ ಡಾ.ರೇಣುಕಾಪ್ರಸಾದ್ ಕೆ.ವಿ ಅವರು ಕ್ಷೇತ್ರದ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡು ಜೀರ್ಣೋದ್ಧಾರ ಮಾಡಿ ಶ್ರೀ ಗುತ್ಯಮ್ಮ ದೇವಿಯ ಮೂಲ ವಿಗ್ರಹ ಮತ್ತು ಪರಿವಾರ ದೈವಗಳ ಪುನರ್ ಪ್ರತಿಷ್ಠೆ ಮಾಡಿಸಿ 2019 ಏಪ್ರಿಲ್ ತಿಂಗಳಲ್ಲಿ ಬ್ರಹ್ಮಕಲಶೋತ್ಸವ ನಡೆಸಿದ್ದಾರೆ. ಬಳಿಕ ಕ್ಷೇತ್ರದಲ್ಲಿ ದೈವಗಳ ಪೂಜಾ ವಿಧಿಗಳನ್ನು, ಕ್ಷೇತ್ರದ ಅಭಿವೃದ್ಧಿ, ವಾರ್ಷಿಕ ಉತ್ಸವವನ್ನು ನಡೆಸಿಕೊಂಡು ಬರುತ್ತಿದ್ದಾರೆ.ದೈವಜ್ಞರು ಹಾಗು ಹಿರಿಯರ ಸೂಚನೆಯಂತೆ ಡಾ.ರೇಣುಕಾಪ್ರಸಾದ್ ಕೆ.ವಿ. ಅವರು ಕ್ಷೇತ್ರದ ಧರ್ಮದರ್ಶಿಗಳಾಗಿ ಕ್ಷೇತ್ರವನ್ನು ಮುನ್ನಡೆಸುತ್ತಿದ್ದಾರೆ.
ಶ್ರೀ ಕ್ಷೇತ್ರದಲ್ಲಿರುವ ಸಾನಿಧ್ಯಗಳು:
ಶ್ರೀ ದೇವಿ ಗುತ್ಯಮ್ಮನವರು, ಶ್ರೀ ಬ್ರಹ್ಮರು,ನಾಗ ನಾಗಬ್ರಹ್ಮ, ಪಿಲಿಚಾಮುಂಡಿ, ಧೂಮಾವತಿ,ಅಣ್ಣಪ್ಪ ಪಂಜುರ್ಲಿ, ಸಿರಿ ಕುಮಾರರು,ಕಲ್ಲುರ್ಟಿ ಪಂಜುರ್ಲಿ,ಬಳ್ಳಾಳ ಬಳ್ಳಾಲ್ತಿ,
ನಂದಿ ಕೋಣ, ಕ್ಷೇತ್ರಪಾಲ,ನೀಚ ಬೊಬ್ಬರ್ಯ
ಶ್ರೀ ಗುತ್ಯಮ್ಮ ದೇವಿಯ ಪ್ರಾಕಾರದಲ್ಲಿರುವ ಸ್ಥಾನ ವೈಶಿಷ್ಟ್ಯತೆಗಳು:
ತೀರ್ಥಮಂಟಪ, ತೀರ್ಥಬಾವಿ ಅಯ್ಯಂಗಾಯಿ,ಪೆರಿಂಬಲಿ ಕಲ್ಲು, ಧ್ವಜಕಟ್ಟೆ