ಸುಳ್ಯ: ಮನುಷ್ಯನಾಗಿ ಹುಟ್ಟಿದ ಮಾತ್ರಕ್ಕೆ ಶ್ರೇಷ್ಠ ವ್ಯಕ್ತಿಯಾಗಲು ಸಾಧ್ಯವಿಲ್ಲ. ಸಂಸ್ಕಾರಯುತ ಶಿಕ್ಷಣದಿಂದ ಶ್ರೇಷ್ಠ ವ್ಯಕ್ತಿತ್ವ ರೂಪಿಸಿ ಉತ್ತಮ ಮನುಷ್ಯನಾಗಲು ಸಾಧ್ಯ ಎಂದು ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಹೇಳಿದ್ದಾರೆ. ಸುಳ್ಯ ಹಳೆಗೇಟು ವಿದ್ಯಾನಗರದ ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಆಶ್ರಯದಲ್ಲಿ ಶ್ರೀ ಕೇಶವಕೃಪಾ ವೇದ-ಯೋಗ-ಕಲಾ ಶಿಬಿರದ ಸಮಾರೋಪ ಹಾಗೂ ಶ್ರೀಕೇಶವ ಸ್ಮೃತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು. ಮಕ್ಕಳಿಗೆ ಕಾಲ ಕಾಲಕ್ಕೆ
ಸಂಸ್ಕಾರಯುತ ಮತ್ತು ಮೌಲ್ಯಯುತ ಶಿಕ್ಷಣವನ್ನು ಕೊಡಬೇಕು. ಭಾರತೀಯ ಸಂಸ್ಕೃತಿಯನ್ನು ತಿಳಿಸುವ ಶಿಕ್ಷಣವನ್ನು ನೀಡಬೇಕು.
ಮಕ್ಕಳಿಗೆ ವಿದ್ಯೆಯೊಂದಿಗೆ ಈ ರೀತಿಯ ಶಿಬಿರಗಳಲ್ಲಿ ಭಾಗವಹಿಸಿ ವೇದಪಾಠ, ಯೋಗ,ಮತ್ತು ಕಲಾ ಶಿಕ್ಷಣ ನೀಡುವುದರಿಂದ ಮಕ್ಕಳನ್ನು ಉತ್ತಮ ವ್ಯಕ್ತಿಗಳಾಗಿ ರೂಪಿಸಲು ಸಾಧ್ಯ. ಸಂಸ್ಕಾರಯುತ ವಿದ್ಯೆಯಿಂದ ಮನುಷ್ಯನ ಜೀವನ ಸಾರ್ಥಕವಾಗುತ್ತದೆ ಎಂದು ಅವರು ಹೇಳಿದರು.
ತಿಮ್ಮಯ್ಯ ಭಟ್ಟ ಸಂಪ್ರತಿಷ್ಠಾನಕ್ಕೆ ಕೇಶವ ಸ್ಮೃತಿ ಪ್ರಶಸ್ತಿ
ಶ್ರೀ ಕೇಶವಕಿರಣ ಸಭಾಂಗಣದಲ್ಲಿ ನಡೆದ ಸಮಾರಂಭದ ಅಧ್ಯಕ್ಷತೆಯನ್ನು ರಾಜ್ಯ ಯೋಗ ಸಂಪನ್ಮೂಲ ವ್ಯಕ್ತಿ ಎಂ.ಎಸ್.ನಾಗರಾಜ ರಾವ್ ವಹಿಸಿದ್ದರು. ಬೆಳಾಲು ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ರಾಮಕೃಷ್ಣ ಭಟ್ ಚೂಂತಾರು ಅಭಿನಂದನಾ ಭಾಷಣ ಮಾಡಿದರು. ಇಡ್ಕಿದು ಬ್ರಹ್ಮ ಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ ಸಂಪ್ರತಿಷ್ಠಾನಕ್ಕೆ ಕೇಶವ ಸ್ಮೃತಿ ಪ್ರಶಸ್ತಿ 2023 ನೀಡಿ ಗೌರವಿಸಲಾಯಿತು. ಸಂಪ್ರತಿಷ್ಠಾನದ ಅಧ್ಯಕ್ಷ ರಮೇಶ್ ಭಟ್ ಬೈಪದವು ಪ್ರಶಸ್ತಿ ಸ್ವೀಕರಿಸಿದರು.ಕಂಚಿ ಕಾಮಕೋಟಿ ಪೀಠ ಆಸ್ಥಾನದ ವಿದ್ವಾಂಸ, ವಯಲಿನ್ ಕಲಾವಿದ ವಿದ್ವಾನ್ ರಾಜೇಶ್ ಕುಂಭಕ್ಕೋಡು ಅವರಿಗೆ “ಶ್ರೀ ಕೃಶವ ಸ್ಮೃತಿ ಕಲಾ 2023 ಪ್ರಶಸ್ತಿ” ನೀಡಿ ಗೌರವಿಸಲಾಯಿತು.
ರಾಜೇಶ್ ಕುಂಭಕ್ಕೋಡು ಅವರಿಗೆ ಪ್ರಶಸ್ತಿ
ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 3ನೇ ಸ್ಥಾನ ಪಡೆದ ಕೆಶವ ಕೃಪಾ ಶಿಬಿರದ ವಿದ್ಯಾರ್ಥಿ ಆದಿತ್ಯನಾರಾಯಣ ಅವರನ್ನು ಸನ್ಮಾನಿಸಲಾಯಿತು.
ಸ್ವಾತಂತ್ರ್ಯದ ಅಮೃತಮಹೋತ್ಸವ ಅಂಗವಾಗಿ ಕೇಂದ್ರ ಸರಕಾರದಿಂದ ನಡೆಸಲಾದ ವೇದ ಪಾಠ, ಕಲಾ ಪಾಠಗಳ ಪದಕ ಹಾಗೂ ಷರ್ಟಿಫಿಕೇಟ್ ಪ್ರದಾನ ಮಾಡಲಾಯಿತು. ಕೇಶವ ಸರ್ವ ಪ್ರಥಮ ಪ್ರಶಸ್ತಿಯನ್ನು ಶ್ರೇಯಸ್ ಪಿದಮಲೆ, ಆರ್ಯನ್ .ಎ.ಕೆ,
ಕೇಶವ ಕೃಪಾ ಪ್ರತಿಭಾ ಪುರಸ್ಕಾರವನ್ನು ಚಿನ್ಮಯ ಭಟ್ ಅವರಿಗೆ ನೀಡಲಾಯಿತು. ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಅಧ್ಯಕ್ಷ ಪುರೋಹಿತ ನಾಗರಾಜ ಭಟ್ ಸನ್ಮಾನ ಕಾರ್ಯಕ್ರಮ ನಿರ್ವಹಿಸಿದರು.
ಪ್ರತಿಷ್ಠಾನದ ಗೌರವಾಧ್ಯಕ್ಷ ಎಂ.ಗೋಪಾಲಕೃಷ್ಣ ಭಟ್ ವಗೆನಾಡು ಉಪಸ್ಥಿತರಿದ್ದರು. ಶಿಬಿರಾಧಿಕಾರಿ ಅಕ್ಷತಾ, ಶಿಬಿರದ ಸಂಚಾಲಕ ಅಭಿರಾಮ ಶರ್ಮಾ ಸರಳಿಕುಂಜ, ಸುದರ್ಶನ ಭಟ್ ಉಜಿರೆ, ಬಲರಾಮ ಭಟ್ ಮತ್ತಿತರರು ಉಪಸ್ಥಿತರಿದ್ದರು. ಶ್ರೀವತ್ಸ ಭಾರದ್ಬಾಜ್ ಸ್ವಾಗತಿಸಿದರು. ಶ್ರೀದೇವಿ ನಾಗರಾಜ ಭಟ್ ಕಾರ್ಯಕ್ರಮ ನಿರೂಪಿಸಿದರು.