ಚೆನ್ನೈ: ಬೌಲಿಂಗ್ ಹಾಗೂ ಬ್ಯಾಟಿಂಗ್ನಲ್ಲಿ ಅಮೋಘ ಪ್ರದರ್ಶನ ನೀಡಿದ ಮುಂಬಯಿ ಇಂಡಿಯನ್ಸ್ ತಂಡ ಐಪಿಎಲ್ 16ನೇ ಆವೃತ್ತಿಯ ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೊ ಸೂಪರ್ ಜೈಂಟ್ಸ್ ವಿರುದ್ಧ 81ರನ್ಗಳ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ರೋಹಿತ್ ಶರ್ಮಾ ಬಳಗ ಎರಡನೇ ಕ್ವಾಲಿಫೈಯರ್ ಪಂದ್ಯಕ್ಕೆ ಎಂಟ್ರಿ ಪಡೆದುಕೊಂಡಿದೆ. ಮೇ.26 ನಡೆಯಲಿರುವ ಪಂದ್ಯದಲ್ಲಿ
ಗುಜರಾತ್ ಟೈಟನ್ಸ್ ತಂಡವನ್ನು ಎದುರಿಸಲಿದೆ. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಮುಂಬಯಿ ಇಂಡಿಯನ್ಸ್ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 182 ರನ್ ಬಾರಿಸಿತು. ಲಕ್ನೊ ತಂಡ 16.3 ಓವರ್ಗಳಲ್ಲಿ 101 ರನ್ ಬಾರಿಸಿ ಆಲ್ಔಟ್ ಆಯಿತು.
ಪಂದ್ಯದಲ್ಲಿ ಮಾರಕ ದಾಳಿ ಸಂಘಟಿಸಿದ ಮುಂಬಯಿ ವೇಗದ ಬೌಲರ್ ಆಕಾಶ್ ಮಧ್ವಲ್ ಕೇವಲ 5 ರನ್ ನೀಡಿ 5 ವಿಕೆಟ್ ಪಡೆಯುವ ಮೂಲಕ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿದರು. ಮುಂಬಯಿ ತಂಡದ ಪರ ಕ್ಯಾಮರೂನ್ ಗ್ರೀನ್ 23 ಎಸೆತಗಳಲ್ಲಿ 41 ರನ್ ಗಳಿಸಿದರು ಮತ್ತು ಸೂರ್ಯಕುಮಾರ್ ಯಾದವ್ 20 ಎಸೆತಗಳಲ್ಲಿ 33 ರನ್ ಬಾರಿಸಿದರು.
ಲಕ್ನೊ ಪರ ಮಾರ್ಕ್ ಸ್ಟೊಯ್ನಿಸ್ (40) ಹಾಗೂ ಕೈಲ್ ಮೇಯರ್ಸ್ (18) ಹೊರತುಪಡಿಸಿದರೆ ಉಳಿದವರು ನಿರಾಸೆ ಮೂಡಿಸಿದರು.
ಲಕ್ನೊ ತಂಡದ ಪರ ನವೀನ್ ಉಲ್ ಹಖ್ 4, ಯಶ್ ಠಾಕೂರ್ ಮೂರು ವಿಕೆಟ್ ಕಬಳಿಸಿದರು. ಮೊಹ್ಸಿನ್ ಖಾನ್ 1 ವಿಕೆಟ್ ತಮ್ಮದಾಗಿಸಿಕೊಂಡರು.