ಹೈದರಾಬಾದ್: ಸೋಮವಾರ ನಡೆದ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ 7 ರನ್ಗಳಿಂದ ಆತಿಥೇಯ ಸನ್ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಗೆದ್ದಿತು.
ಟಾಸ್ ಗೆದ್ದ ಡೆಲ್ಲಿ 20 ಓವರ್ಗಳಲ್ಲಿ 9 ವಿಕೆಟ್ಗಳಿಗೆ 144 ರನ್ ಗಳಿಸಿತು. ಹೈದರಾಬಾದ್ ತಂಡವು ನಿಗದಿತ ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 137 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಸಾಧಾರಣ ಗುರಿ ಬೆನ್ನತ್ತಿದ ಹೈದರಾಬಾದ್ ತಂಡದ ಪರ ಹ್ಯಾರಿ ಬ್ರೂಕ್ (7) ಹಾಗೂ ಮಯಂಕ್ ಅಗರ ವಾಲ್ (49, 39ಎ, 4X7) ಮೊದಲ
ವಿಕೆಟ್ ಜೊತೆಯಾಟದಲ್ಲಿ 31 ರನ್ ಸೇರಿಸಿದರು.ಬ್ರೂಕ್ ಅವರನ್ನು ಬೌಲ್ಡ್ ಮಾಡಿದ ಎನ್ರಿಚ್ ನಾಕಿಯಾ (33ಕ್ಕೆ 2) ಈ ಜೊತೆಯಾಟ ಮುರಿದರು. ಮಧ್ಯಮ ಕ್ರಮಾಂಕದಲ್ಲಿ ಹೆನ್ರಿಚ್ ಕ್ಲಾಸೆನ್ (31, 19ಎ, 4X3, 6X1) ಅವರ ಹೋರಾಟ ವ್ಯರ್ಥವಾಯಿತು.ಮುಕೇಶ್ ಕುಮಾರ್ ಮಾಡಿದ ಕೊನೆಯ ಓವರ್ನಲ್ಲಿ ಹೈದರಾಬಾದ್ ತಂಡಕ್ಕೆ 13 ರನ್ ಬೇಕಿತ್ತು. ವಾಷಿಂಗ್ಟನ್ ಸುಂದರ್ (ಔಟಾಗದೆ 24, 15ಎ) ಹಾಗೂ ಮಾರ್ಕೊ ಜೆನ್ಸೆನ್ (2) ಅವರನ್ನು ನಿಯಂತ್ರಿಸಿದ ಮುಕೇಶ್ ಈ ಓವರ್ನಲ್ಲಿ ಕೇವಲ 5 ರನ್ ನೀಡಿದರು. ಎರಡು ವಿಕೆಟ್ ಉರುಳಿಸಿದ ಅಕ್ಷರ್ ಪಟೇಲ್ (34) ತಮ್ಮ ತಂಡಕ್ಕೆ ಬ್ಯಾಟಿಂಗ್ನಲ್ಲಿಯೂ ಕಾಣಿಕೆ ನೀಡಿದ್ದರು. ಇದಕ್ಕೂ ಮುನ್ನ ಸನ್ರೈಸರ್ಸ್ ಹೈದರಾಬಾದ್ ತಂಡದ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಮತ್ತು ಮಧ್ಯಮವೇಗಿ ಭುವನೇಶ್ವರ್ ಕುಮಾರ್ ತಮ್ಮ ಅಮೋಘ ಬೌಲಿಂಗ್ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸಾಧಾರಣ ಮೊತ್ತಕ್ಕೆ ನಿಯಂತ್ರಿಸಿದ್ದರು. ವಾಷಿಂಗ್ಟನ್ ಮೂರು ವಿಕೆಟ್ ಗಳಿಸಿದರು. ಅಲ್ಲದೇ ಡೆಲ್ಲಿ ತಂಡದ ಇನಿಂಗ್ಸ್ಗೆ ಬಲ ತುಂಬಲು ಪ್ರಯತ್ನಿಸುತ್ತಿದ್ದ ಮನೀಷ್ ಪಾಂಡೆ (34; 27ಎ, 4X2) ಅವರು ರನ್ಔಟ್ ಆಗಲೂ ವಾಷಿಂಗ್ಟನ್ ಕಾರಣರಾದರು.
ಡೆಲ್ಲಿ ತಂಡಕ್ಕೆ ಮೊದಲ ಓವರ್ನಲ್ಲಿಯೇ ಭುವನೇಶ್ವರ್ ಕುಮಾರ್ ಆಘಾತ ನೀಡಿದರು. ಮೂರನೇ ಎಸೆತದಲ್ಲಿ ಫಿಲಿಪ್ ಸಾಲ್ಟ್ ಔಟಾದರು. ಇನ್ನೊಂದು ಕಡೆಯಿದ್ದ ನಾಯಕ ಡೇವಿಡ್ ವಾರ್ನರ್ (21; 20ಎ) ಮತ್ತು ಮಿಚೆಲ್ ಮಾರ್ಷ್ (25; 15ಎ) ಇನಿಂಗ್ಸ್ ಉತ್ತಮಗೊಳಿಸಲು ಪ್ರಯತ್ನಿಸಿದರೂ ಹೆಚ್ಚು ಹೊತ್ತು ನಿಲ್ಲಲಿಲ್ಲ. ಈ ಹಂತದಲ್ಲಿ ಪಾಂಡೆ ಮತ್ತು ಅಕ್ಷರ್ ಪಟೇಲ್. ಪಾಂಡೆ ತಾಳ್ಮೆಯಿಂದ ಆಡಿ ರನ್ ಗಳಿಸಿದರು. ಅಕ್ಷರ್ ಕೂಡ ದೊಡ್ಡ ಹೊಡೆತಗಳಿಗೆ ಕೈಹಾಕಲಿಲ್ಲ. ಅಕ್ಷರ್ ಅವರ ಆಟದ್ದಲ್ಲಿ ನಾಲ್ಕು ಬೌಂಡರಿಗಳಿದ್ದವು. ಆದರೆ, ಉಳಿದ ಬ್ಯಾಟರ್ಗಳೂ ನಿರೀಕ್ಷೆಗೆ ತಕ್ಕಂತೆ ಆಡಲಿಲ್ಲ. ಇದರಿಂದಾಗಿ ಕೊನೆಯ ಹಂತದಲ್ಲಿ ಹೆಚ್ಚು ರನ್ಗಳು ತಂಡದ ಖಾತೆಗೆ ಸೇರಲಿಲ್ಲ.