ಸುಳ್ಯ:ಸುಳ್ಯ ನಗರದ ಶಾಂತಿನಗರದ ತಾಲೂಕು ಕ್ರೀಡಾಂಗಣದ ಕಾಮಗಾರಿ ನಡೆಸಿದಾಗ ಗ್ರೌಂಡ್ನ ಕೆಳ ಭಾಗದಲ್ಲಿ ಹಾಕಿದ ಬೆಟ್ಟದೆತ್ತರದ ಮಣ್ಣು ಮೊದಲ ಮಳೆಗೆ ಕುಸಿಯ ತೊಡಗಿದ್ದು ಕೆಳ ಭಾಗದಲ್ಲಿರುವ ಜನತೆ ಆತಂಕಕ್ಕೆ ಒಳಗಾಗಿದ್ದಾರೆ. ಮಳೆಯ ನೀರೆಲ್ಲಾ ಮಣ್ಣಿನ ಮೇಲೆಯೇ ಹರಿದಿದ್ದು ಮಣ್ಣು ಕೊಚ್ಚಿಕೊಂಡು ಬಂದು ಕೆಳಭಾಗದ ಚರಂಡಿ ಮತ್ತಿತರ ಪ್ರದೇಶದಲ್ಲಿ ತುಂಬಿದೆ. ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ಕ್ರೀಡಾಂಗಣದ
ಮೇಲ್ಭಾಗದಲ್ಲಿದ್ದ ಮಣ್ಣಿನ ರಾಶಿ ಕೊಚ್ಚಿ ಕೆಳಭಾಗಕ್ಕೆ ಬಂದಿದೆ. ಮಣ್ಣಿನ ಮೇಲೆ ಮಳೆ ನೀರು ಕೊಚ್ಚಿ ಹರಿದು ಭಾರೀ ಗಾತ್ರದ ಕೆಡ್ಡದ ಮಾದರಿ ನಿರ್ಮಾಣವಾಗಿದೆ. ಇದೇ ರೀತಿ ಮುಂದುವರಿದರೆ ಮಣ್ಣು ಕುಸಿದು ಕೆಳಗೆ ಬರುವ ಅಪಾಯ ಇದೆ ಎಂದು ಸ್ಥಳಿಯರು ಆತಂಕ ವ್ಯಕ್ತಪಡಿಸಿದ್ದಾರೆ. ಕ್ರೀಡಾಂಗಣದ ಒಂದು ಬದಿಯಲ್ಲಿ ತುಂಬಿದ ಮಣ್ಣನ್ನು ಕುಸಿಯದಂತೆ ನೋಡಿಕೊಳ್ಳಲು ಸ್ಟೆಪ್ ನಿರ್ಮಿಸಲಾಗಿತ್ತು. ಆದರೆ ನಿನ್ನೆ ಸುರಿದ ಭಾರಿ ಮಳೆಗೆ ಆ ಸ್ಟೆಪ್ ಗಳು ಕೂಡ ಜರಿದು ಬಿದ್ದಿದೆ. ಇಲ್ಲಿ ನಡೆಸಲಾಗುತ್ತಿದ್ದ ಕಟಮಗಾರಿಯೂ ಕೆಲವು ದಿನಗಳಿಂದ ಸ್ಥಗಿತಗೊಂಡಿದೆ. ಇಲ್ಲಿ ವಾಸಿಸಲು ಸಾಧ್ಯವಾಗದ ರೀತಿಯ ಸ್ಥಿತಿ ನಿರ್ಮಾಣ ಆಗಿದೆ ಎಂದು ಸ್ಥಳೀಯರು ಹೇಳುತ್ತಾರೆ.
ಭರವಸೆಯಲ್ಲಿಯೇ ಉಳಿದ ತಡೆಗೋಡೆ:
ಮಣ್ಣು ಕುಸಿಯದಂತೆ ಇಲ್ಲಿ ತಡೆಗೋಡೆ ನಿರ್ಮಿಸಬೇಕು ಎಂದು ಬೇಡಿಕೆ ಇಟ್ಟರು ಇದಕ್ಕೆ ಸಂಬಂಧಪಟ್ಟ ಜನಪ್ರತಿನಿಧಿಗಳು ಅಧಿಕಾರಿಗಳು ಸ್ಪಂದಿಸಿಲ್ಲ. ಕೇವಲ ಭರವಸೆ ಮಾತ್ರ ಸಿಕ್ಕಿದೆ.
ವರ್ಷ ಒಂದು ಸರಿದು ಮತ್ತೊಂದು ಮಳೆಗಾಲ ಸಮೀಪಿಸುತ್ತಿದ್ದು ಗ್ರೌಂಡ್ನ ಕೆಳ ಭಾಗದಲ್ಲಿ ವಾಸಿಸುವ ಜನರಲ್ಲಿ ಮತ್ತೆ ಆತಂಕದ ಕರಿಮೋಡ ಉಂಟಾಗಿದೆ. ಕಳೆದ ವರ್ಷದ ಬೇಸಿಗೆ ಕಾಲದಲ್ಲಿ ಕ್ರೀಡಾಂಗಣ ಅಭಿವೃದ್ಧಿ ಕಾಮಗಾರಿ ನಡೆದ ಸಂದರ್ಭದಲ್ಲಿ ತೆಗೆಯಲಾದ ಭಾರೀ
ಪ್ರಮಾಣದ ಮಣ್ಣನ್ನು ಗ್ರೌಂಡ್ನ ಕೆಳ ಭಾಗದಲ್ಲಿ ಬೆಟ್ಟದಂತೆ ಎತ್ತರದಲ್ಲಿ ಅವೈಜ್ಞಾನಿಕವಾಗಿ ತುಂಬಿಡಲಾಗಿತ್ತು.ಇದರಿಂದ ಆತಂಕಗೊಂಡ ಜನರು ಮಳೆಗಾಲದಲ್ಲಿ ಮಣ್ಣು ಕುಸಿಯುವ ಅಪಾಯ ಇದೆ ಎಂದು ಸಚಿವರುಗಳಿಗೆ, ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಗ್ರೌಂಡ್ನ ಕೆಳ ಭಾಗದಲ್ಲಿ ಈ ರೀತಿ ಮಣ್ಣು ತುಂಬಿರುವುದು ದೊಡ್ಡ ವಿವಾದವೇ ಉಂಟಾಗಿ ರಾಜಕೀಯ ಆರೋಪ ಪ್ರತ್ಯಾರೋಪಗಳಿಗೂ ಕಾರಣವಾಗಿತ್ತು. ಈ ಸಂದರ್ಭದಲ್ಲಿ ಮಣ್ಣು ಕುಸಿಯದಂತೆ ತಡೆಗೋಡೆ ನಿರ್ಮಾಣ ಮಾಡುವುದಾಗಿ ಘೋಷಿಸಲಾಗಿತ್ತು. ಕಳೆದ ಮಳೆಗಾಲದಲ್ಲಿ ಈ ಮಣ್ಣಿನ ಗುಡ್ಡ ಕುಸಿಯದಂತೆ ತಾತ್ಕಾಲಿಕವಾಗಿ ಮಣ್ಣಿನ ಮೇಲೆ ಪ್ಲಾಸ್ಟಿಕ್ ಹೊದಿಕೆಯನ್ಬು ಹಾಸಲಾಗಿತ್ತು. ಮಳೆಗಾಲ ಮುಗಿದ ಕೂಡಲೇ
ತಡೆಗೋಡೆ ನಿರ್ಮಾಣ ಮಾಡುವುದಾಗಿ ಹೇಳಿದ್ದರು. ಭಾರೀ ಮಳೆ, ಗಾಳಿಗೆ ಪ್ಲಾಸ್ಟಿಕ್ ಹೊದಿಕೆ ಕೆಲವೇ ತಿಂಗಳಲ್ಲಿ ಹರಿದು ಹೋಗಿತ್ತು. ಇದೀಗ ಒಂದು ವರ್ಷ ಕಳೆದರೂ ತಡೆಗೋಡೆ ನಿರ್ಮಾಣ ಆಗುವ ಲಕ್ಷಣಗಳು ಕಾಣುತ್ತಿಲ್ಲ. ಕೆಲವು ದಿನಗಳ ಹಿಂದೆ ಇಲ್ಲಿ ಕೆಲವು ಕಾಮಗಾರಿ ನಡೆಸಿದ್ದು ಮಣ್ಣಿನ ದಿಬ್ಬವನ್ನು ಕಡಿದು ‘ಪ್ಲಾಟ್ಫಾರಂ’ಗಳಂತೆ ಮಾಡಲಾಗಿದೆ. ಆದರೆ ಮಳೆ ಬಂದಾಗ ನೀರು ಇಳಿದು ಮಣ್ಣು ಕುಸಿಯುವುದನ್ನು ತಡೆಯಲು ಇದು ಪೂರಕವಾಗಿಲ್ಲ. ಗುಡ್ಡ ಅಲ್ಲಲ್ಲಿ ಕಡಿದು ಹಾಕಿದ್ದು ಕೆಲವು ದಿನಗಳಿಂದ ಆ ಕೆಲಸವೂ ಸ್ಥಗಿತಗೊಂಡಿದೆ. ಇದೀಗ ಮೊದಲ ಮಳೆಗೇ ಆ ಮಣ್ಣು ಕುಸಿಯಲು ಆರಂಭಿಸಿದೆ. ಮಳೆಗಾಲದಲ್ಲಿ ಗ್ರೌಂಡ್ನ ಕೆಳ ಭಾಗದಲ್ಲಿ
ಯಾವುದೇ ಸುರಕ್ಷತೆ ಇಲ್ಲದೆ ಹಾಕಿದ ಮಣ್ಣು ಕುಸಿಯದಂತೆ ಕಲ್ಲು ಅಥವಾ ಕೆಂಪುಕಲ್ಲಿನ ತಡೆಗೋಡೆ ನಿರ್ಮಿಸಲಾಗುವುದು. ಅದಕ್ಕೆ ಅನುದಾನ ಬಿಡುಗಡೆ ಮಾಡಿದ್ದೇವೆ ಎಂದು ಸಚಿವರು ಸೇರಿ ಜನಪ್ರತಿನಿಧಿಗಳು ನಮಗೆ ತಿಳಿಸಿದ್ದರು. ಆದರೆ ತಡೆಗೋಡೆ ನಿರ್ಮಾಣ ಇನ್ನೂ ಆರಂಭ ಆಗಿಲ್ಲ. ಕೆಲವು ದಿನಗಳಿಂದ ಅಲ್ಲಲ್ಲಿ ಕಡಿದು ಹಾಕಲಾಗಿದ್ದು ಅದು ಈಗ ಮೊದಲ ಮಳೆಗೆ ಕುಸಿಯುತಿದೆ ಎಂದು ಸ್ಥಳೀಯರು ಹೇಳುತ್ತಾರೆ. ಇದೀಗ ಕೆಲವೇ ದಿನದಲ್ಲಿ ಮಳೆಗಾಲ ಅರಂಭವಾಗಲಿದ್ದು ಗ್ರೌಂಡ್ನ ಕೆಳ ಭಾಗದ ಜನರಲ್ಲಿ ಆತಂಕ ಹೆಚ್ಚಾಗಿದ್ದು ಭಯದ ನೆರಳು ಆವರಿಸಿದೆ.