ಸುಳ್ಯ: ಚುನಾವಣಾ ಸಂದರ್ಭದಲ್ಲಿ ಸಹಕಾರ ನೀಡಿದ ಪ್ರತಿಯೊಬ್ಬರಿಗೂ, ಮತ ನೀಡಿದ ಮತದಾರರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಮುಂದೆಯೂ ಸುಳ್ಯದಲ್ಲಿ ಪಕ್ಷ ಸಂಘಟನೆ, ಸಮಾಜ ಸೇವಾ ಕೆಲಸಗಳನ್ನು ಮುಂದುವರಿಸುತ್ತೇನೆ ಎಂದು ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಕೆಪಿಸಿಸಿ ಸಂಯೋಜಕ ಜಿ.ಕೃಷ್ಣಪ್ಪ ಹೇಳಿದ್ದಾರೆ. ಸುಳ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸುಳ್ಯದಲ್ಲಿ ಕೆಲಸ ಮಾಡಲು ಖುಷಿ ಆಗುತ್ತದೆ. ಕಾಂಗ್ರೆಸ್ನ ಎಲ್ಲಾ ನಾಯಕರು, ಕಾರ್ಯಕರ್ತರು ಪೂರ್ಣ ಸಹಕಾರ ನೀಡಿದ್ದಾರೆ. ಎಲ್ಲರಿಗೂ
ಕೃತಜ್ಞತೆ ಸಲ್ಲಿಸುತ್ತೇನೆ.63 ಸಾವಿರಕ್ಕೂ ಅಧಿಕ ಮಂದಿ ಮತ ನೀಡಿದ್ದಾರೆ. ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಜನಾದೇಶಕ್ಕೆ ತಲೆ ಬಾಗುತ್ತೇವೆ. ನೂತನ ಶಾಸಕರಿಗೆ ಶುಭಾಶಯ ಸಲ್ಲಿಸುತ್ತೇನೆ ಎಂದು ಅವರು ಹೇಳಿದರು.
ಆತ್ಮಾವಲೋಕನ ಮಾಡಿ ತಪ್ಪು ಸರಿಪಡಿಸುತ್ತೇವೆ: ಪಿ.ಸಿ.ಜಯರಾಮ
ಚುನಾವಣೆಯಲ್ಲಿ ಕಾಂಗ್ರೆಸ್ಗೆ ಆದ ಸೋಲಿನ ಬಗ್ಗೆ ಪಕ್ಷ ಕೂಲಂಕುಷವಾಗಿ ಪರಿಶೀಲನೆ ನಡೆಸಿ ಆತ್ಮಾವಲೋಕನ ಮಾಡುತ್ತೇವೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ ಹೇಳಿದ್ದಾರೆ. ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ. ಸರಕಾರದ ಎಲ್ಲಾ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತೇವೆ. ಅಭಿವೃದ್ಧಿ ಕೆಲಸಗಳಿಗೆ ನೂತನ ಶಾಸಕರಿಗೆ ಸಹಕಾರ ನೀಡುತ್ತೇವೆ. ನೆನೆಗುದಿಗೆ ಬಿದ್ದಿರುವ ಸುಳ್ಯದ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನ ಮಾಡುವ ಕೆಲಸ ನೂತನ ಶಾಸಕರಿಂದ ಆಗಲಿ ಎಂದು ಅವರು ಹೇಳಿದರು.
ಜನತೆ ಭಾವನಾತ್ಮಕವಾಗಿ ಮತ ಚಲಾಯಿಸಿದ ಕಾರಣ ದ.ಕ.ದಲ್ಲಿ ಕಾಂಗ್ರೆಸ್ಗೆ ಹಿನ್ನಡೆ: ಭರತ್ ಮುಂಡೋಡಿ
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಭೂತಪೂರ್ವ ಗೆಲುವು ದಾಖಲಿಸಿದರೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ಗೆ ನಿರೀಕ್ಷಿತ ಸ್ಥಾನ ಸಿಕ್ಕಿಲ್ಲ. ಜನರು ಭಾವನಾತ್ಮಕವಾಗಿ ಮತ ಚಲಾಯಿಸಿದ ಕಾರಣ ನಿರೀಕ್ಚಿತ ಫಲಿತಾಂಶ ಬಂದಿಲ್ಲ ಎಂದು ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ಹೇಳಿದ್ದಾರೆ. ಇಲ್ಲಿಯೂ ಅಭಿವೃದ್ಧಿ ಮತ್ತು ಜನಪರ ಯೋಜನೆಗಳ ಮೂಲಕ ಜನರ ವಿಶ್ವಾಸ ಗಳಿಸಲು ಪಕ್ಷ ಶ್ರಮಿಸಲಿದೆ. ಕರಾವಳಿಗೆ ಕಾಂಗ್ರೆಸ್ ಘೋಷಿಸಿದ ಪ್ರತ್ಯೇಕ ಪ್ರಣಾಳಿಕೆ ಸೇರಿ ಕಾಂಗ್ರೆಸ್ನ ಎಲ್ಲಾ ಘೋಷಣೆಗಳನ್ನೂ ಅನುಷ್ಠಾನ ಮಾಡಲಿದೆ ಎಂದ ಅವರು ಸುಳ್ಯದ ಅಭಿವೃದ್ಧಿಗೆ ಸರಕಾರದ ಅನುದಾನ ತರುವ ಪ್ರಯತ್ನವನ್ನು ನಿರಂತರ ಮಾಡಲಿದೆ. ಅದಕ್ಕಾಗಿ ಕೋರ್ ಕಮಿಟಿ ರಚಿಸಲಾಗುವುದು. ತಾಲೂಕಿನಲ್ಲಿ ಕಳಪೆ ಕಾಮಗಾರಿ, ಭ್ರಷ್ಟಾಚಾರ ನಡೆಯದಂತೆ ಸದಾ ಕಣ್ಗಾವಲಿರಿಸಲಿದೆ ಎಂದು ಅವರು ಹೇಳಿದರು. 110 ಕೆವಿ ಸಬ್ ಸ್ಟೇಷನ್ ಕಾಮಗಾರಿ ಅನುಷ್ಠಾನಕ್ಕೆ ಅಡಿಕೆ ಹಳದಿ ರೋಗ ಬಾದೆಯಿಂದ ಕೃಷಿ ನಾಶವಾದ ಅಡಿಕೆ ಕೃಷಿಕರಿಗೆ ಪರಿಹಾರ ದೊರಕಿಸಲು ಪ್ರಯತ್ನ ನಡೆಸುತ್ತೇವೆ ಎಂದು ಅವರು ಹೇಳಿದರು.
ಎಲ್ಲರೂ ಒಟ್ಟಾಗಿ ಕೆಲಸ ಮಾಡಿದ್ದಾರೆ: ಟಿ.ಎಂ.ಶಹೀದ್ ತೆಕ್ಕಿಲ್
ಸುಳ್ಯ ಸೇರಿ ರಾಜ್ಯದಾದ್ಯಂತ ಕಾಂಗ್ರೆಸ್ ಮುಖಂಡರು ಹಾಗು ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡಿದ್ದಾರೆ. ಅದರ ಪರಿಣಾಮದಿಂದ ರಾಜ್ಯದಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ್ದೇವೆ ಎಂದು ಕೆಪಿಸಿಸಿ ವಕ್ತಾರ ಟಿ.ಎಂ.ಶಹೀದ್ ತೆಕ್ಕಿಲ್ ಹೇಳಿದ್ದಾರೆ. ಸುಳ್ಯದಲ್ಲಿಯೂ ಉತ್ತಮ ಗೆಲುವಿನ ವಾತಾವರಣ ಇತ್ತು. ಆದರೆ ಗೆಲುವು ಸಾಧ್ಯವಾಗಲಿಲ್ಲ. ಮುಂದೆ ಬರುವ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್, ಲೋಕಸಭಾ ಚುನಾವಣೆಯನ್ನು ಒಟ್ಟಾಗಿ ಎದುರಿಸುತ್ತೇವೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸುಳ್ಯ ವಿಧಾನಸಭಾ ಚುನಾವಣೆಯ ಪ್ರಚಾರ ಸಮಿತಿ ಅಧ್ಯಕ್ಷ ಸದಾನಂದ ಮಾವಜಿ, ಕೆಪಿಸಿಸಿ ಸಂಯೋಜಕ ಎಸ್.ಸಂಶುದ್ದೀನ್, ರಾಜೀವಿ ಆರ್.ರೈ, ಕೆ.ಎಂ.ಮುಸ್ತಫ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ, ಕಳಂಜ ವಿಶ್ವನಾಥ ರೈ, ಎನ್ಎಸ್ಯುಐ ಅಧ್ಯಕ್ಷ ಕೀರ್ತನ್ ಕೊಡಪಾಲ ಮತ್ತಿತರರು ಉಪಸ್ಥಿತರಿದ್ದರು.