ಸುಳ್ಯ:ಬಿಜೆಪಿ ಯಾವತ್ತೂ ಅಧಿಕಾರಕ್ಕಾಗಿ ಹುಟ್ಟಿದ ಪಕ್ಷ ಅಲ್ಲಾ ರಾಷ್ಟ್ರೀಯ ವಿಚಾರಧಾರೆಗಳಿಗಾಗಿ ಹುಟ್ಟಿದ ಪಕ್ಷ ಬಿಜೆಪಿ. ಆದುದರಿಂದ ಬಿಜೆಪಿಗೆ ಅಧಿಕಾರ ಯಾವತ್ತೂ ಮುಖ್ಯ ಅಲ್ಲಾ. ವಿಚಾರಧಾರೆಗಳೇ ಜೀವಾಳ. ಕಾರ್ಯಕರ್ತರೇ ನಮ್ಮ ಶಕ್ತಿ. ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡಿದ್ದೇವೆ ಎಂದು ಯಾರೂ ಧೃತಿಗೆಡಬೇಕಾಗಿಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡಬಿದ್ರೆ ಹೇಳಿದ್ದಾರೆ.ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಭರ್ಜರಿ ಗೆಲುವು ದಾಖಲಿಸಿರುವ
ಚಿತ್ರಗಳು: ಸ್ಟುಡಿಯೋ ಗೋಪಾಲ್ ಸುಳ್ಯ
ಹಿನ್ನಲೆಯಲ್ಲಿ ಕೇರ್ಪಳ ಬೂಡು ಬಂಟರ ಭವನದಲ್ಲಿ ಬಿಜೆಪಿ ಮಂಡಲ ಸಮಿತಿ ವತಿಯಿಂದ ನಡೆದ ಕಾರ್ಯಕರ್ತರಿಗೆ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬಿಜೆಪಿಗೆ ರಾಜ್ಯದಲ್ಲಿ ಆಗಿರುವ ಸೋಲು ಕ್ಷಣಿಕ.ಮುಂದೆ ಪ್ರಬಲ ವಿರೋಧ ಪಕ್ಷವಾಗಿ ಬಿಜೆಪಿ ಕೆಲಸ ಮಾಡಲಿದೆ. ದೇಶದಲ್ಲಿ ಅಂಬೇಡ್ಕರ್ ವಿಚಾರಧಾರೆಗಳನ್ನು ಅನುಷ್ಠಾನ ಮಾಡಿದ್ದು ಬಿಜೆಪಿ ಸರಕಾರ ಎಂದ ಅವರು ಸುಳ್ಯದಲ್ಲಿ ಬೂತ್ ಮಟ್ಟದಲ್ಲಿ ಪಕ್ಷ ಅತ್ಯಂತ ಬಲಿಷ್ಠವಾಗಿದೆ. ಲಾಲ್ ಕೃಷ್ಣ ಅಡ್ವಾನಿ ಅವರಿಂದಲೇ ಶಹಭಾಷ್ಗಿರಿ ಪಡೆದಿದ್ದ ಸುಳ್ಯ ಕ್ಷೇತ್ರ ಮತ್ತೊಮ್ಮೆ ಬಿಜೆಪಿಯ ಭದ್ರ ಕೋಟೆ ಎಂಬುದನ್ನು ಸಾಬೀತು ಮಾಡಿದೆ. ಕಳೆದ 6 ಅವಧಿಯಲ್ಲಿ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಅಂಗಾರ ಅವರ ಸಜ್ಜನ ರಾಜಕಾರಣ ಹಾಗೂ ಅಭಿವೃದ್ಧಿ ಕಾರ್ಯಗಳಿಂದ ಭಾಗೀರಥಿ ಅವರಿಗೆ ಗೆಲುವಾಗಿದೆ ಎಂದರು.
ಗೆದ್ದಾಗ ಹಿಗ್ಗದೆ, ಸೋತಾಗ ಕುಗ್ಗದೆ ಕೆಲಸ ಮಾಡಿ:ಪ್ರತಾಪ ಸಿಂಹ ನಾಯಕ್:
ಕಾರ್ಯಕರ್ತರ ತ್ಯಾಗ, ಬಲಿದಾನ, ತಪಸ್ಸಿನಿಂದ ಬಿಜೆಪಿ ಬೆಳೆದು ಬಂದಿದೆ. ಅಂತಹಾ ಪಕ್ಷದ ಕಾರ್ಯಕರ್ತರು ಗೆದ್ದಾಗ ಹಿಗ್ಗದೆ, ಸೋತಾಗ ಕುಗ್ಗದೆ ನಿರಂತರ ಪಕ್ಷಕ್ಕಾಗಿ ಕೆಲಸ ಮಾಡಬೇಕು ಎಂದು ಅಭಿನಂದನಾ ಭಾಷಣ ಮಾಡಿದ ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ಹೇಳಿದರು. ವಿಚಾರಧಾರೆಯನ್ನು ಒಳಗೊಂಡು ಪಕ್ಷ ಸಂಘಟನೆ ನಮ್ಮ ಜವಾಬ್ದಾರಿ ಎಂದು ತಿಳಿದು ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಬೇಕು ಎಂದು ಅವರು ಕರೆ ನೀಡಿದರು. ಭಾರತವನ್ನು ಪರಮ ವೈಭವದೆಡೆಗೆ ಕೊಂಡೊಯ್ಯುವುದು ಮತ್ತು ಸಮಾಜದ ಕಟ್ಟಕಡೆಯ ವ್ಯಕ್ತಿಯ ಕ್ಷೇಮವನ್ನೂ ಕಾಪಾಡುವುದು ಬಿಜೆಪಿಯ ಗುರಿ.ಸೋಲು, ಗೆಲುವಿನ ಆತ್ಮಾವಲೋಕನ ಮಾಡಿ ಮುಂದಿನ ಚುನಾವಣೆಗೆ ಸಿದ್ಧರಾಗುತ್ತೇವೆ ಎಂದು ಅವರು ಹೇಳಿದರು.
ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿದರು.
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಪುತ್ತೂರು ಕ್ಷೇತ್ರದ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸುಳ್ಯ ವಿಧಾನಸಭಾ ಕ್ಷೇತ್ರದ ಚುನಾವಣಾ ನಿರ್ವಹಣಾ ಸಮಿತಿಯ ಅಧ್ಯಕ್ಷ ಎ.ವಿ.ತೀರ್ಥರಾಮ, ಜಿಲ್ಲಾ ಉಪಾಧ್ಯಕ್ಷರಾದ ಬೂಡಿಯಾರು ರಾಧಾಕೃಷ್ಣ ರೈ, ವೆಂಕಟ್ ವಳಲಂಬೆ, ಪ್ರಧಾನ ಕಾರ್ಯದರ್ಶಿ ರಾಮ್ದಾಸ್ ಬಂಟ್ವಾಳ,ಕಾರ್ಯದರ್ಶಿಗಳಾದ ಮುಳಿಯ ಕೇಶವ ಭಟ್, ಕಸ್ತೂರಿ ಪಂಜ, ಬಿಜೆಪಿ ಮಂಡಲ ಸಮಿತಿ ಮಾಜಿ ಅಧ್ಯಕ್ಷರಾದ ಎಸ್.ಎನ್.ಮನ್ಮಥ, ವೆಂಕಟ್ ದಂಬೆಕೋಡಿ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಸುಬೋದ್ ಶೆಟ್ಟಿ ಮೇನಾಲ, ರಾಕೇಶ್ ರೈ ಕೆಡೆಂಜಿ, ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಗುರುದತ್ ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿನಯಕುಮಾರ್ ಕಂದಡ್ಕ ವಂದೇ ಮಾತರಂ ಹಾಡಿದರು. ಸುಳ್ಯ ವಿಧಾನಸಭಾ ಕ್ಷೇತ್ರದ ಚುನಾವಣಾ ನಿರ್ವಹಣಾ ಸಮಿತಿಯ ಅಧ್ಯಕ್ಷ ಎ.ವಿ.ತೀರ್ಥರಾಮ ಸ್ವಾಗತಿಸಿದರು. ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಸುಬೋದ್ ಶೆಟ್ಟಿ ಮೇನಾಲ ವಂದಿಸಿ, ರಾಕೇಶ್ ರೈ ಕೆಡೆಂಜಿ ಕಾರ್ಯಕ್ರಮ ನಿರೂಪಿಸಿದರು.