ಸುಳ್ಯ:ಕಾಡಾನೆ ಹಾವಳಿಯಿಂದ ನಲುಗಿರುವ ಸುಳ್ಯ ತಾಲೂಕಿನ ಗಡಿ ಗ್ರಾಮಗಳಲ್ಲಿ ಆನೆ ಹಾವಳಿ ತಡೆಯಲು ಹೊಸ ಯೋಜನೆಗೆ ಇಂದು ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ದೇವರಗುಂಡದಲ್ಲಿ ಚಾಲನೆ ನೀಡಲಾಗಿದೆ.ಆನೆಗಳು ಬರುವ ದಾರಿಯಲ್ಲಿ ಜೇನು ಪೆಟ್ಟಿಗೆಗಳನ್ನು ಇರಿಸಿ ತೋಟಕ್ಕೆ ಆನೆ ಬರದಂತೆ ತಡೆಯುವುದು. ಆ ಮೂಲಕ ಆನೆ ಮಾನವ ಸಂಘರ್ಷಕ್ಕೆ ತಡೆ ಒಡ್ಡುವುದು ಹೊಸ ಯೋಜನೆ.ತೋಟದ ಬದಿಯಲ್ಲಿ ಜೇನು ಪೆಟ್ಟಿಗೆಗಳನ್ನು ಸಾಲಾಗಿ ಇರಿಸಲಾಗಿದೆ. ಸಾಲಾಗಿ ಪೆಟ್ಟಿಗೆಗಳನ್ನು
ಇರಿಸಿ ಅದಕ್ಕೆ ಒಂದನ್ನೊಂದು ಬಂಧಿಸುವಂತೆ, ಹಗ್ಗ ತಂತಿಗಳನ್ನು ಕಟ್ಟಲಾಗಿದೆ. ಆನೆಗಳು ದಾಂಗುಡಿಯಿಡುವ ಸಂದರ್ಭದಲ್ಲಿ ಜೇನು ಪೆಟ್ಟಿಗೆಗೆ ಅಥವಾ ತಂತಿಗೆ ತಾಗಿದರೆ ಪೆಟ್ಟಿಗೆಗಳು ವೈಬ್ರೇಷನ್ ಆಗಿ ಜೇನು ನೊಣಗಳು ಏಳುತ್ತವೆ. ಜೇನು ನೊಣಗಳು ಗುಯಿಂ ಗುಟ್ಟಿ ಗುಂಪಾಗಿ ಏಳುವ ಕಾರಣ ಆನೆಗಳಿಗೆ ಕಿರಿ ಕಿರಿ ಉಂಟಾಗುತ್ತದೆ. ಇದರಿಂದ ಆನೆಗಳು ಮತ್ತೆ ಆ ಕಡೆ ಬರುವ ಸಾಧ್ಯತೆ ಇಲ್ಲಾ ಎಂದು ಅಂದಾಜಿಸಲಾಗಿದೆ. ದೇವರಗುಂಡದ ಡಿ.ಸಿ.ಬಾಲಚಂದ್ರ ಅವರ ತೋಟದಲ್ಲಿ ಜೇನು ಪೆಟ್ಟಿಗೆಗಳನ್ನು ಇರಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಪ್ರಾಯೋಗಿಕವಾಗಿ ಅಳವಡಿಸಿದ ಜೇನು ಪೆಟ್ಟಿಗೆಗಳನ್ನು ನಿರೀಕ್ಷಿಸಲು ಸಿಸಿ ಕ್ಯಾಮರಾ ಅಳವಡಿಸಲಾಗಿದೆ.
ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ವತಿಯಿಂದ
ದ.ಕ.ಉಡುಪಿ ಜೇನು ವ್ಯವಸಾಯಗಾರರ ಸಹಕಾರ ಸಂಘದ ನೇತೃತ್ವದಲ್ಲಿ ಹನಿಮಿಷನ್ ಯೋಜನೆಯಡಿಯಲ್ಲಿ 35 ಮಂದಿ ಕೃಷಿಕರಿಗೆ ಜೇನು ಕೃಷಿ ತರಬೇತಿ ನೀಡಲಾಗಿದೆ. ಈ ತರಬೇತಿ ಪಡೆದವರಿಗೆ ಜೇನು ಕೃಷಿ ಮಾಡಲು ತಲಾ 10 ಪೆಟ್ಟಿಗೆಯನ್ನು ಜೇನು ಕುಟುಂಬ ಸಮೇತ ವಿತರಣೆ ಮಾಡಲಾಗಿದೆ.ಕಳೆದ ಅನೇಕ ದಿನಗಳಿಂದ ಕಾಡಾನೆ ಹಾವಳಿಯಿಂದ ನಲುಗಿರುವ ದೇವರಗುಂಡ ಭಾಗದಲ್ಲಿ ಈ ಪ್ರಯೋಗ ಮೊದಲು ಆರಂಭವಾಗಿದೆ. ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಹನಿ ಮಿಷನ್ ಯೋಜನೆಯಲ್ಲಿ ನಾಗರಹೊಳೆಯಲ್ಲಿ ಈ ಪ್ರಯೋಗವನ್ನು ಪೊನ್ನಂಪೇಟೆಯ ಫಾರೆಸ್ಟ್ರಿ ಕಾಲೇಜ್ ವತಿಯಿಂದ ಪ್ರಾಜೆಕ್ಟ್ ಮೂಲಕ ಪ್ರಯೋಗ ನಡೆಸಲಾಗಿದೆ. ಕಾಪಿ ತೋಟಕ್ಕೆ ಕಾಡಾನೆಗಳು ಬರುವ ದಾರಿಯಲ್ಲಿ ಜೇನು ಪೆಟ್ಟಿಗೆ ಇರಿಸಲಾಯಿತು. ಆ ಪ್ರಯೋಗದ ವೀಡಿಯೋ ಪ್ರದರ್ಶಿಸಲಾಯಿತು.
ಅಲ್ಲಿ ಆನೆಗಳು ಬರುವುದು ಶೇ. 70ರಷ್ಟು ಕಡಿಮೆಯಾಗಿದೆ ಎಂದು ಪ್ರಯೋಗದಿಂದ ಗೊತ್ತಾಗಿದೆ ಎನ್ನುತ್ತಾರೆ ಪೊನ್ನಂಪೇಟೆ ಫಾರೆಸ್ಟ್ರಿ ಕಾಲೇಜಿನ ಉಪನ್ಯಾಸಕ ಡಾ. ಕೆಂಚರೆಡ್ಡಿ. ಆದರೆ ಆನೆಗಳು ದಾರಿ ಬದಲಿಸಿ ಬರುತ್ತವೆ. ಆ ದಾರಿಯಲ್ಲಿಯೂ ಪೆಟ್ಟಿಗೆ ಇಡಬೇಕು. ಈ ರೀತಿ ಜೇನು ಪೆಟ್ಟಿಗೆ ಇರಿಸುವುದರಿಂದ ಆನೆ ಹಾವಳಿ ಕಡಿಮೆ ಮಾಡಬಹುದು ಎಂಬುದು ಅಧಿಕಾರಿಗಳ ಮತ್ತು ಕೃಷಿಕರ ನಿರೀಕ್ಷೆ.
ಕಳೆದ ಒಂದು ದಶಕಗಳಿಂದ ಸುಳ್ಯ ತಾಲೂಕಿನ ಹಲವು ಗ್ರಾಮಗಳಲ್ಲಿ ಕಾಡಾನೆ ಹಾವಳಿ ತೀವ್ರವಾಗಿದೆ. ಮಂಡೆಕೋಲು, ಅಜ್ಜಾವರ, ಆಲೆಟ್ಟಿ, ಸಂಪಾಜೆ ಹೀಗೆ ಹಲವು ಗ್ರಾಮಗಳು ಕಾಡಾನೆ ಹಾವಳಿಯಿಂದ ನಲುಗಿ ಹೋಗಿದೆ. ಆನೆ ಹಾವಳಿ ತಡೆಯಲು ಹಲವಾರು ಯೋಜನೆಗಳನ್ನು ಜಾರಿ ಮಾಡಿದರೂ ಯಾವುದೂ ನಿರೀಕ್ಷಿತ ಫಲಿತಾಂಶ ನೀಡಿಲ್ಲ. ಆನೆ ಕಂದಕ,ಸೋಲಾರ್ ಬೇಲಿ ಅಳವಡಿಕೆ, ಆನೆ ಬರುವ ದಾರಿಗೆ ಸಿಮೆಂಟ್ ಸ್ಲಾಬ್ಗಳ ಅಳವಡಿಕೆ ಹೀಗೆ ಅರಣ್ಯ ಇಲಾಖೆ, ಸರಕಾರ ಹಲವು ಯೋಜನೆಗಳನ್ನು ಜಾರಿ ಮಾಡಿದರೂ ಇದರಿಂದ ಆನೆ ಹಾವಳಿ ತಡೆಯಲು ಸಾಧ್ಯವಾಗಿಲ್ಲ. ಇದೀಗ ಜೇನು ಪೆಟ್ಟಿಗೆ ಇರಿಸುವ ಸರಳ ಪ್ರಯೋಗಕ್ಕೆ ನಡೆಸುವ ಯೋಜನೆ ರೂಪಿಸಲಾಗಿದೆ. ಜೇನು ಕೃಷಿ ಆದಾಯದ ಜೊತೆಗೆ
ಆನೆಗಳ ಹಾವಳಿ ತಪ್ಪಿದರೆ ಇದೊಂದು ವರದಾನವಾಗಲಿದೆ ಎಂಬುದು ಕೃಷಿಕರ ನಿರೀಕ್ಷೆ. ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಅಧ್ಯಕ್ಷ ಮನೋಜ್ ಕುಮಾರ್ ಮಂಡೆಕೋಲಿನ ದೇವರಗುಂಡದಲ್ಲಿ ಚಾಲನೆ ನೀಡಿದರು. ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ದಕ್ಷಿಣ ವಲಯ ಉಪ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರ್.ಎಸ್.ಪಾಂಡೆ, ನಿರ್ದೇಶಕರಾದ ಸಂಜೀವ್ ಪೊಸ್ವಾಲ್, ಡಾ.ಮೋಹನ್ ರಾವ್, ಜೇನು ವ್ಯವಸಾಯಗಾರರ ಸಹಕಾರಿ ಸಂಘದ ಅಧ್ಯಕ್ಷ ಚಂದ್ರ ಕೋಲ್ಚಾರ್, ಪೊನ್ನಂಪೇಟೆ ಫಾರೆಸ್ಟ್ರಿ ಕಾಲೇಜಿನ ಉಪನ್ಯಾಸಕ ಡಾ. ಕೆಂಚರೆಡ್ಟಿ, ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಸಹಾಯಕ ನಿರ್ದೇಶಕ ಪಿ.ಎಸ್.ಬಾಲಕೃಷ್ಣನ್ ಉಪನಿರ್ದೇಶಕ
ಸೆಂಥಿಲ್ ಕುಮಾರ್ ರಾಮಸ್ವಾಮಿ, ರೈತ ಉತ್ಪಾದಕ ಕಂಪೆನಿಯ ಅಧ್ಯಕ್ಷ ವೀರಪ್ಪ ಗೌಡ ಕಣ್ಕಲ್, ಮಂಡೆಕೋಲು ಗ್ರಾಮ ಪಂಚಾಯತ್ ಅಧ್ಯಕ್ಷೆ ವಿನುತಾ ಪಾತಿಕಲ್ಲು, ಜೇನು ಸೊಸೈಟಿ ನಿರ್ದೇಶಕ ಶಂಕರ್ ಪೆರಾಜೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ತಿಮ್ಮಯ್ಯ ಪಿಂಡಿಮನೆ, ವ್ಯವಸ್ಥಾಪಕಿ ಚೈತ್ರ, ಬಾಲಚಂದ್ರ ಡಿ.ಸಿ ಮೊದಲಾದವರು ಉಪಸ್ಥಿತರಿದ್ದರು.