ಸುಳ್ಯ:ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕಲ್ಪನೆಯಂತೆ ಖಾದಿ ಮತ್ತು ಗ್ರಾಮೋದ್ಯೋಗ ಕ್ಷೇತ್ರವನ್ನು ಪುನರುಜ್ಜೀವನ ಗೊಳಿಸಲಾಗಿದ್ದು ಈ ಕ್ಷೇತ್ರದಲ್ಲಿ ಕ್ರಾಂತಿ ಉಂಟಾಗಿದೆ ಎಂದು ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಅಧ್ಯಕ್ಷ ಮನೋಜ್ ಕುಮಾರ್ ಹೇಳಿದ್ದಾರೆ.
ಖಾದಿ ಗ್ರಾಮೋದ್ಯೋಗ ಆಯೋಗದ ವತಿಯಿಂದ ಹಮ್ಮಿಕೊಳ್ಳಲಾದ ಹನಿ ಮಿಷನ್ ಯೋಜನೆಯಡಿ ತರಬೇತಿ ಪಡೆದ ಫಲಾನುಭವಿಗಳಿಗೆ ಜೇನು ಪೆಟ್ಟಿಗೆಗಳನ್ನು ವಿತರಿಸಿ, ಆನೆ ಮಾನವ ಸಂಘರ್ಷ ಕಡಿಮೆ ಮಾಡುವ ನಿಟ್ಟಿನಲ್ಲಿ ಆನೆ ಬರುವ ಪ್ರದೇಶಗಳಿಗೆ ಜೇನು ಪೆಟ್ಟಿಗೆಗಳನ್ನು ಅಳವಡಿಸುವ ಯೋಜನೆ ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ
ದೇವರಗುಂಡದಲ್ಲಿ ಉದ್ಘಾಟಿಸಿ ಕೃಷಿಕರಾದ ಡಿ.ಸಿ.ಬಾಲಚಂದ್ರ ಅವರ ಮನೆಯಂಗಳದಲ್ಲಿ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು.
ಖಾದಿ ಗ್ರಾಮೋದ್ಯೋಗ ಕ್ಷೇತ್ರವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ. ಖಾದಿ ಮತ್ತು ಗ್ರಾಮೋದ್ಯೋಗ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ಸಾಧ್ಯವಾಗಿದೆ ಎಂದು ಅವರು ಹೇಳಿದರು.ಜೇನು ಉತ್ಪಾದನಾ ಕ್ಷೇತ್ರದಲ್ಲಿ ಉಜ್ವಲ ಭವಿಷ್ಯ ಇದೆ.ಕೃಷಿಕರಿಗೆ ತರಬೇತಿಗಳನ್ನು ನೀಡಿ ಜೇನು ಪೆಟ್ಟಿಗೆಗಳನ್ನು

ಉಚಿತವಾಗಿ ನೀಡಲಾಗುತಿದೆ.ಈ ಜೇನು ಪೆಟ್ಟಿಗೆಗಳನ್ನು ಇರಿಸಿ ಆನೆಗಳು ಕೃಷಿ ತೋಟಗಳಿಗೆ ನುಗ್ಗುವುದನ್ನು ತಡೆಯಲು ಪ್ರಾಯೋಗಿಕ ಯೋಜನೆ ರೂಪಿಸಲಾಗಿದೆ ಎಂದು ಅವರು ಹೇಳಿದರು. ಜನರ ಭಾವನೆಗಳಿಗೆ, ಬೇಡಿಕೆಗಳಿಗೆ ತಕ್ಕಂತೆ ಕಾರ್ಯನಿರ್ವಹಿಸಲು ಬದ್ಧವಾಗಿದೆ ಎಂದು ಅವರು ಹೇಳಿದರು. ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ದಕ್ಷಿಣ ವಲಯ ಉಪ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರ್.ಎಸ್.ಪಾಂಡೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ನಿರ್ದೇಶಕರಾದ ಸಂಜೀವ್ ಪೊಸ್ವಾಲ್, ಡಾ.ಮೋಹನ್ ರಾವ್, ಜೇನು ವ್ಯವಸಾಯಗಾರರ ಸಹಕಾರಿ ಸಂಘದ ಅಧ್ಯಕ್ಷ ಚಂದ್ರ ಕೋಲ್ಚಾರ್,ಪೊನ್ನಂಪೇಟೆ ಫಾರೆಸ್ಟ್ರಿ ಕಾಲೇಜಿನ ಉಪನ್ಯಾಸಕ ಡಾ. ಕೆಂಚರೆಡ್ಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಸಹಾಯಕ ನಿರ್ದೇಶಕ ಪಿ.ಎಸ್.ಬಾಲಕೃಷ್ಣನ್ ಸ್ವಾಗತಿಸಿದರು. ಉಪನಿರ್ದೇಶಕ
ಸೆಂಥಿಲ್ ಕುಮಾರ್ ರಾಮಸ್ವಾಮಿ ವಂದಿಸಿದರು. ಸಾಗರಿಕಾ ದೇವರಗುಂಡ ಪ್ರಾರ್ಥಿಸಿದರು.ರೈತ ಉತ್ಪಾದಕ ಕಂಪೆನಿಯ ಅಧ್ಯಕ್ಷ ವೀರಪ್ಪ ಗೌಡ ಕಣ್ಕಲ್ ಕಾರ್ಯಕ್ರಮ ನಿರೂಪಿಸಿದರು.

ಮಂಡೆಕೋಲು ಗ್ರಾಮ ಪಂಚಾಯತ್ ಅಧ್ಯಕ್ಷೆ ವಿನುತಾ ಪಾತಿಕಲ್ಲು, ಜೇನು ಸೊಸೈಟಿ ನಿರ್ದೇಶಕ ಶಂಕರ್ ಪೆರಾಜೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ತಿಮ್ಮಯ್ಯ ಪಿಂಡಿಮನೆ, ವ್ಯವಸ್ಥಾಪಕಿ ಚೈತ್ರ ಮೊದಲಾದವರು ಉಪಸ್ಥಿತರಿದ್ದರು. ಖಾದಿ ಮತ್ತು ಕೇಂದ್ರ ಸರಕಾರದ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ವತಿಯಿಂದ, ದ.ಕ. ಜೇನು ವ್ಯವಸಾಯಗಾರರ ಸಂಘದ ಸಹಕಾರದೊಂದಿಗೆ 35 ಮಂದಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ಅವರಿಗೆ ಜೇನು ತರಬೇತಿ ನೀಡಲಾಗಿದೆ. ಪ್ರತೀ ಫಲಾನುಭವಿಗಳಿಗೆ 10 ಜೇನು ಪೆಟ್ಟಿಗಳನ್ನು ನೀಡಲಾಗಿದೆ. ಈ ಪೆಟ್ಟಿಗೆಗಳನ್ನು ವಿತರಿಸಲಾಯಿತು. ಈ ಪೆಟ್ಟಿಗಳನ್ನು ಆನೆಗಳು ಬರುವ ದಾರಿಯಲ್ಲಿ ಅಳವಡಿಸಲಾಗಿದೆ.