ಕಾಸರಗೋಡು:ಮಧೂರು ಶ್ರೀಮದನಂತೇಶ್ವರ ಸಿದ್ಧಿವಿನಾಯಕ ಕ್ಷೇತ್ರದ ಮೂಡಪ್ಪ ಸೇವೆಯ ದಿನದಂದು ಕರ್ನಾಟಕ ಉಪಮುಖ್ಯಮಂತ್ರಿ, ಡಿ.ಕೆ.ಶಿವಕುಮಾರ್ ಸಪತ್ನೀಕರಾಗಿ ಮಧೂರಿಗೆ ಭೇಟಿ ನೀಡಿದರು. ಮಧೂರು ಸಿದ್ಧಿವಿನಾಯಕನ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ನಡೆಸಿ, ಪ್ರಸಾದ ಸ್ವೀಕರಿಸಿದ ಅವರು ಬಳಿಕ ಬ್ರಹ್ಮಕಲಶ – ಮೂಡಪ್ಪ ಸೇವೆಯಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡರು. ದೇವರಿಂದ ಮಾನವರ ತನಕ ಭಾರತದ ನಂಬಿಕೆಯ
ಆಚಾರಗಳು ಮಹಿಳೆಯರಿಗೆ ಗೌರವದ ಸ್ಥಾನಮಾನವನ್ನಿತ್ತಿವೆ. ಶಿವ ಗೌರೀಶಂಕರ ಎನಿಸಿಕೊಂಡರೆ, ವಿಷ್ಣು ಲಕ್ಷ್ಮೀ ನಾರಾಯಣ ಎನಿಸಿಕೊಂಡದ್ದೆ ಅಧಿಕ. ಇದು ಮಾತೃಸಂಸ್ಕೃತಿಯ ಅಡಿಗಲ್ಲು. ಈ ನಂಬಿಕೆಯನ್ನು ಕೈದಾಟಿಸುವ ಸಂದೇಶ ವಾಹಕರು ನಾವಾಗಬೇಕು ಎಂದು ಡಿ.ಕೆ. ಶಿವಕುಮಾರ್ ನುಡಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಮಾಜಿ ಸಂಸದ, ಬಿಜೆಪಿ ನಾಯಕ ನಳಿನ್ ಕುಮಾರ್ ಕಟೀಲು ಅವರಿಗೆ ಡಿಕೆಶಿ ಅವರು ಶುಭ ಹಾರೈಸಿದರು. ನಳಿನ್ ಅವರನ್ನು ಭಾಷಣಕ್ಕೆ ಕರೆದಾಗ ಉದ್ಘೋಷಿಸಕರು

ಅವರು ಮಾಜಿ ಅಧ್ಯಕ್ಷರೆನ್ನದೇ ಅಧ್ಯಕ್ಷರೆಂದೇ ಬಾಯ್ತಪ್ಪಿನಿಂದ ಬಂತು. ಈ ವೇಳೆ ನಳಿನ್ ನಾನು ಮಾಜಿ ಅಧ್ಯಕ್ಷ ಎಂದರು.. ಬಳಿಕ ಡಿ.ಕೆ.ಶಿ ಅವರು ಮಾತನಾಡುವಾಗ ಇದನ್ನುಲ್ಲೇಖಿಸಿ ನಾನು ಕೆಪಿಸಿಸಿ ಅಧ್ಯಕ್ಷನಾಗಿದ್ದಾಗ ನಳಿನ್ ಕುಮಾರ್ ಕಟೀಲು ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದರು. ಈಗ ನಾವು ಮಧೂರು ಮಹಾಗಣಪತಿಯ ಸನ್ನಿಧಿಯಲ್ಲಿ ಒಂದೇ ವೇದಿಕೆಯಲ್ಲಿ ಅಕ್ಕ ಪಕ್ಕ ಇದ್ದೇವೆ. ರಾಜಕೀಯದಲ್ಲಿ ಅಧಿಕಾರ, ಹುದ್ದೆ ಶಾಶ್ವತವಲ್ಲ. ಅವರು ಮಧೂರು ಸಿದ್ಧಿವಿನಾಯಕನ ಅನುಗ್ರಹದಿಂದ ಮತ್ತೆ ರಾಜ್ಯಾಧ್ಯಕ್ಷನಾಗಲಿ, ಮಾಜಿ ಆಗದೇ ಇರಲಿ ಎಂದು ಶುಭಹಾರೈಸಿದರು.
ಉಡುಪಿ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಸಭಾ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನವಿತ್ತರು.ಕೊಲ್ಯ ಮೂಕಾಂಬಿಕಾ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಮಧುಸೂಧನ ಆಯರ್ ಅಧ್ಯಕ್ಷತೆ ವಹಿಸಿದರು.ಕರ್ನಾಟಕ ವಿ.ಹಿಂ.ಪ ಧರ್ಮ ಪ್ರಸಾರ ಪ್ರಮುಖ್ ಸೂರ್ಯನಾರಾಯಣ ರಾವ್ ಪ್ರಧಾನ ಧಾರ್ಮಿಕ ಭಾಷಣ ಮಾಡಿದರು. ಮಾಣಿಲ ಶ್ರೀಧಾಮದ ಮೋಹನದಾಸ ಸ್ವಾಮೀಜಿ ಆಶೀರ್ವಚನವಿತ್ತರು.
ಕರ್ನಾಟಕ ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್, ಸುಳ್ಯದ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ನ ಅಧ್ಯಕ್ಷ ಕೆ.ವಿ.ಚಿದಾನಂದ, ಧಾರ್ಮಿಕ ಮುಂದಾಳು ವಸಂತ ಪೈ ಬದಿಯಡ್ಕ ಮುಖ್ಯ ಅತಿಥಿಗಳಾಗಿದ್ದರು.ಬ್ರಹ್ಮಕಲಶೋತ್ಸವ ಜತೆ ಕಾರ್ಯದರ್ಶಿ ಗುರುಪ್ರಸಾದ ಕೋಟೆಕಣಿ ಸ್ವಾಗತಿಸಿದರು. ಪತ್ರಕರ್ತ ಎಂ.ನಾ.ಚಂಬಲ್ತಿಮಾರ್ ನಿರೂಪಿಸಿದರು. ಜಗದೀಶ ಆಚಾರ್ಯ ಕಂಬಾರ್ ವಂದಿಸಿದರು.
ವರದಿ:ಎಂ.ನಾ.ಚಂಬಲ್ತಿಮಾರ್.