ಸುಳ್ಯ: ಗ್ರಾಮಗಳ ಅಭಿವೃದ್ಧಿಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಸಹಕಾರಿ ಸಂಘಗಳು ಇಂದು ಜನರ ಎಲ್ಲಾ ಅಗತ್ಯತೆಗಳನ್ನು ಪೂರೈಸುವ ಕೇಂದ್ರಗಳಾಗಿ ಮಾರ್ಪಾಡಾಗಿರುವುದು ಹೆಮ್ಮೆಯ ವಿಷಯ ಎಂದು
ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ಸಹಕಾರ ರತ್ನ ಡಾ.ಎಂ.ಎನ್.ರಾಜೇಂದ್ರ ಹೇಳಿದ್ದಾರೆ. ಸುಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ(ಸಿ.ಎ ಬ್ಯಾಂಕ್) ಶತಮಾನೋತ್ತರ ದಶಮಾನೋತ್ಸವದ ಅಂಗವಾಗಿ ಮೂರುವರೆ ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಂಡಿರುವ
ನೂತನ ಕಟ್ಟಡ ಸಿ.ಎ. ಬ್ಯಾಂಕ್ ಕಾಂಪ್ಲೆಕ್ಸ್ನ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ದೇಶಕ್ಕೆ ಮಾದರಿಯಾಗಿ ಸಹಕಾರ ಸಂಘಗಳು ಬೆಳೆದಿದೆ. ಎಲ್ಲಾ ಸಹಕಾರಿ ಸಂಘಗಳಿಗೆ ಸುಳ್ಯ ಸಿಎ ಬ್ಯಾಂಕ್ ಮಾದರಿಯಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಸಹಕಾರಿ ಕ್ಷೇತ್ರವನ್ನು ಬೆಳೆಸಿರುವುದರ ಜೊತೆಗೆ ಮಹಿಳೆಯರನ್ನು ಸಂಘಟಿಸಿದ ಕೀರ್ತಿಯೂ ದ.ಕ.ಜಿಲ್ಲೆಗೆ ಇದೆ. ನವೋದಯ ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರು

ಸ್ವಾವಲಂಬಿಗಳಾಗಿದ್ದಾರೆ. ಇದು ಸಹಕಾರಿ ಕ್ಷೇತ್ತಕ್ಕೆ ಇನ್ನಷ್ಟು ಬಲ ತುಂಬಿದೆ ಎಂದು ಅವರು ಹೇಳಿದರು. ಸಿಎ ಬ್ಯಾಂಕಿನ ಎ.ಎಸ್.ವಿಜಯಕುಮಾರ್ ಅವರ ಹೆಸರಿನ ಸಭಾಂಗಣಕ್ಕೆ 5 ಲಕ್ಷ ರೂ ಆರ್ಥಿಕ ನೆರವು ನೀಡುವುದಾಗಿ ಅವರು ಘೋಷಿಸಿದರು.
ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಸದ ಕ್ಯಾ.ಬ್ರಿಜೇಶ್ ಚೌಟ ಸಹಕಾರಿ ಮನೋಭಾವವನ್ನು ಮುಂದಿನ ತಲೆಮಾರಿಗೂ ಹಸ್ತಾಂತರ ಮಾಡುವ ಕೆಲಸ ಆಗಬೇಕಾಗಿದೆ ಎಂದು ಹೇಳಿದರು. ಮೂಲ ಉದ್ದೇಶವನ್ನು ನಿರಂತರವಾಗಿ ಕಾಪಾಡಿಕೊಂಡು ಯಶಸ್ಸು ಸಾಧಿಸುವುದು ಸವಾಲಿನ ಕೆಲಸ. ಈ ನಿಟ್ಟಿನಲ್ಲಿ ಶತಮಾನೋತ್ತರ ದಶಮಾನವನ್ನು ಆಚರಿಸುವುದು ಸಿಎ ಬ್ಯಾಂಕ್ನ ದೊಡ್ಡ ಸಾಧನೆ ಎಂದು ಹೇಳಿದರು. ಕೇಂದ್ರ ಸರಕಾರ ಸಹಕಾರಿ ಕ್ಷೇತ್ರವನ್ನು ಆದ್ಯತಾ ವಲಯವಾಗಿ ಮಾಡಿ ಅದರ ಅಭಿವೃದ್ಧಿಗೆ ನಿರಂತರ ಪ್ರಯತ್ನ ನಡೆಸುತಿದೆ. ಸಹಕಾರಿ ವಿಶ್ವ ವಿದ್ಯಾಲಯವನ್ನು ಸ್ಥಾಪಿಸಿ ಪ್ರತಿ ವರ್ಷ 8 ಲಕ್ಷ ಜನರನ್ನು ಸಹಾಕಾರಿ ತರಬೇತಿ ನೀಡುವ ಯೋಜನೆ ಇದೆ. ಸಹಕಾರಿ ಕ್ಷೇತ್ರವನ್ನು ಅಭಿವೃದ್ಧಿ ಮಾಡಿ ಸಹಕಾರಿ ಕ್ಷೇತ್ರದ ಮೂಲಕ ದೇಶ ಕಟ್ಟುವ ಕೆಲಸ ನಡೆಯುತಿದೆ ಎಂದು ಹೇಳಿದರು.

ಮಾಜಿ ಅಧ್ಯಕ್ಷರನ್ನು, ಮಾಜಿ ಸಿಬ್ಬಂದಿಗಳನ್ನು ಸನ್ಮಾನಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಡಿ.ವಿಸದಾನಂದ ಗೌಡರು ದೇಶದ ಶೇ.29ರಷ್ಟು ಜನರು ಸಹಕಾರಿ ಕ್ಷೇತ್ರದಲ್ಲಿದ್ದಾರೆ ಎಂಬುದು ಹೆಮ್ಮೆಯ ವಿಷಯ. ಕರ್ನಾಟಕ ರಾಜ್ಯವೊಂದರಲ್ಲೇ 2.3 ಕೋಟಿ ಜನರು ಸಹಕಾರಿ ಕ್ಷೇತ್ರದಲ್ಲಿದ್ದಾರೆ ಎಂದರು. ಕೆಲ ವರ್ಷಗಳ ಹಿಂದೆ ಇಡೀ ಜಗತ್ತೇ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದರೂ ಸಹಕಾರಿ ಕ್ಷೇತ್ರ ಗಟ್ಟಿಯಾಗಿರುವ ಕಾರಣ ಭಾರತ ದೇಶಕ್ಕೆ ಯಾವುದೇ ಆರ್ಥಿಕ ಹೊಡೆತ ನೀಡಿಲ್ಲ. ಆದುದರಿಂದ ಪ್ರತಿಯೊಬ್ಬರೂ ಸಹಕಾರಿ ಕ್ಷೇತ್ರದಲ್ಲಿ ತೊಡಗಿಸಿಕೊಂಡು ದೇಶದ ಆರ್ಥಿಕ ವ್ಯವಸ್ಥೆಯನ್ನು ಸದೃಢಗೊಳಿಸಬೇಕು ಎಂದರು.

ಸಿ.ಎ. ಬ್ಯಾಂಕ್ ಅಧ್ಯಕ್ಷ ವಿಕ್ರಮ್ ಎ.ವಿ. ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೋಟ್ಟು, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾದ ಎಸ್.ಎನ್. ಮನ್ಮಥ, ಎಸ್.ಬಿ.ಜಯರಾಮ ರೈ,
ಸುಳ್ಯ ನ.ಪಂ. ಅಧ್ಯಕ್ಷೆ ಶಶಿಕಲಾ ಎ. ನೀರಬಿದಿರೆ ಅತಿಥಿಗಳಾಗಿ ಭಾಗವಹಿಸಿದ್ದರು.
ಸಿಎ ಬ್ಯಾಂಕ್ ಅಧ್ಯಕ್ಷ ವಿಕ್ರಮ್ ಎ.ವಿ.ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.ಉಪಾಧ್ಯಕ್ಷ ಚಂದ್ರಶೇಖರ ಸೋಣಂಗೇರಿ ವಂದಿಸಿದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಎಸ್.ಪಿ, ನಿರ್ದೇಶಕರಾದ ಎನ್.ಎ.ರಾಮಚಂದ್ರ, ಪ್ರಬೋದ್ ಶೆಟ್ಟಿ ಮೇನಾಲ, ವೆಂಕಟ್ರಮಣ ಮುಳ್ಯ, ಶಿವರಾಮ ಕೇರ್ಪಳ, ವಾಸುದೇವ ನಾಯಕ್ ಪುತ್ತಿಲ, ಹರಿಣಾಕ್ಷಿ ರೈ ಬೇಲ್ಯ, ಕೇಶವ ಸಿ.ಎ.ಹೊಸಗದ್ದೆ, ಚಂದ್ರಶೇಖರ ಡಿ.ಕೆ, ಬಾಲಗೋಪಾಲ ಸೇರ್ಕಜೆ, ಹೇಮಂತ್ ಕುಮಾರ್ ಕಂದಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸ್ವಸಹಾಯ ಸಂಘಗಳಿಗೆ ಸಮವಸ್ತ್ರ ವಿತರಿಸಲಾಯಿತು. ಸಹಕಾರಿ ಮಹಾಮಂಡಲದ ನಿರ್ದೇಶಕರಾಗಿ ಆಯ್ಕೆಯಾದ ಚಂದ್ರಾ ಕೋಲ್ಚಾರ್, ಸಿಎ ಬ್ಯಾಂಕ್ನ ಮಾಜಿ ಅಧ್ಯಕ್ಷರನ್ನು, ಮಾಜಿ ಸಿಬ್ಬಂದಿಗಳನ್ನು, ಕಟ್ಟಡ ನಿರ್ಮಾಣಕ್ಕೆ ಸಹಕರಿಸಿದವರನ್ನು ಸನ್ಮಾನಿಸಲಾಯಿತು.

110 ವರ್ಷಗಳನ್ನು ಪೂರೈಸುತ್ತಿರುವ ಸಹಕಾರಿ ಸಂಘದ ಶತಮಾನೋತ್ತರ ದಶಮಾನೋತ್ಸವದ ಪ್ರಯುಕ್ತ ನೂತನ ಕಟ್ಟಡ ನಿರ್ಮಾಣ ಮಾಡಲಾಗಿದೆ.
ಸುಮಾರು ಮೂರುವರೆ ಕೋಟಿ ರೂ. ವೆಚ್ಚದಲ್ಲಿ ನೂತನ ಕಟ್ಟಡ ‘ಸಿ.ಎ.ಬ್ಯಾಂಕ್ ಕಾಂಪ್ಲೆಕ್ಸ್’ ನ್ನು ನಿರ್ಮಿಸಲಾಗಿದ್ದು ಎಲ್ಲಾ ರೀತಿಯ ಆಧುನಿಕ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಮೂರು ಮಹಡಿಯ ಈ ಕಟ್ಟಡದಲ್ಲಿ ನೆಲಮಹಡಿಯಲ್ಲಿ ಸುಸಜ್ಜಿತ ರಸಗೊಬ್ಬರ ದಾಸ್ತಾನು ವ್ಯವಸ್ಥೆ ಮತ್ತು ಮಾರಾಟ ವಿಭಾಗವನ್ನು ತೆರೆಯಲಾಗಿದೆ. ಮೊದಲನೇ

ಮಹಡಿಯಲ್ಲಿ ವಾಣಿಜ್ಯ ಸಂಕೀರ್ಣ ಹಾಗೂ ಬಾಡಿಗೆಗೆ ವ್ಯವಹಾರದ ಅಂಗಡಿ ಕೊಠಡಿ ಗಳಿಗೆ ಅವಕಾಶ ನೀಡಲಾಗಿದೆ. ಎರಡನೇ ಮಹಡಿಯಲ್ಲಿ ಸುಸಜ್ಜಿತ ಸಿ.ಎ. ಬ್ಯಾಂಕ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಮಾಡಲು ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಮೂರನೇ ಮಹಡಿಯಲ್ಲಿ ಆಧುನಿಕ – ವಿನ್ಯಾಸದ ಸುಮಾರು 400 ಮಂದಿ ಕುಳಿತುಕೊಳ್ಳುವ ಸುಸಜ್ಜಿತ ಸಭಾಭವನ ವ್ಯವಸ್ಥೆಯನ್ನು ಮಾಡಲಾಗಿದೆ. ಕಟ್ಟಡಕ್ಕೆ ಆಧುನಿಕ ಸ್ಪರ್ಶ ನೀಡಲಾಗಿದ್ದು, 10 ಮಂದಿ ಏಕ ಕಾಲಕ್ಕೆ ಹೋಗಬಹುದಾದ ಲಿಫ್ಟ್ ವ್ಯವಸ್ಥೆಯೊಂದಿಗೆ ಕಟ್ಟಡ ನಿರ್ಮಾಣ ಮಾಡಲಾಗಿದೆ.












