ಸುಳ್ಯ:ಮನೆ ನಿರ್ಮಾಣ ಸೇರಿದಂತೆ ವಿವಿಧ ಕಟ್ಟಡಗಳ ನಿರ್ಮಾಣಕ್ಕೆ ಅನುಮತಿ ನೀಡುವಲ್ಲಿ ಉಂಟಾಗುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ನಿಯಮಗಳನ್ನು ಸರಳೀಕರಿಸುವ ಬಗೆ ನಗರಾಭಿವೃದ್ಧಿ ಸಚಿವರೊಂದಿಗೆ ಚರ್ಚಿಸುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.ಅವರು ಬುಧವಾರ ಸುಳ್ಯದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದರು.ನಿವೇಶನಗಳ ನೋಂದಣಿ, ನಕ್ಷೆ ಮಂಜೂರಾತಿ, ಖಾತೆ, 9/11, ಏಕ ನಿವೇಶನ ಸೇರಿದಂತೆ ಕಟ್ಟಡ ನಿರ್ಮಾಣ ಸಂದರ್ಭದಲ್ಲಿ ಹಲವಾರು ನಿಯಮಗಳನ್ನು ಪಾಲಿಸಬೇಕಿರುವುದರಿಂದ ಸಾರ್ವಜನಿಕರಿಗೆ
ಮನೆ ನಿರ್ಮಿಸಲು ವಿಳಂಬವಾಗುತ್ತಿರುವ ಬಗ್ಗೆ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರಿಂದ ಹಲವಾರು ಅಹವಾಲುಗಳು ಬಂದಿದೆ. ಯಾವುದೇ ನಗರವನ್ನು ವೈಜ್ಞಾನಿಕವಾಗಿ ಅಭಿವೃದ್ಧಿ ಪಡಿಸಲು ನಗರ ಯೋಜನಾ ಪ್ರಾಧಿಕಾರ ಅಗತ್ಯವಾಗಿದೆ. ಆದರೂ ಇದರಿಂದ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗಬಾರದೆಂದು ಸರಕಾರದ ಕಾಳಜಿಯಾಗಿದೆ. ಈ ನಿಟ್ಟಿನಲ್ಲಿ ನಿಯಮಗಳನ್ನು ಸರಳೀಕರಿಸಿ ತ್ವರಿತವಾಗಿ ಇಂತಹ ಮಂಜೂರಾತಿ ನೀಡುವ ಬಗ್ಗೆ ಸರಕಾರ ಗಮನ ಹರಿಸಲಿದೆ ಎಂದು ಅವರು ತಿಳಿಸಿದರು. ನಿವೇಶನ ಮಂಜೂರಾತಿ ಸಂದರ್ಭದಲ್ಲಿ ಕಂದಾಯ ಮತ್ತು ಅರಣ್ಯ ಭೂಮಿಯ ಬಗ್ಗೆ ತಕರಾರು ಉದ್ಭವಿಸಿ ಪ್ರಕ್ರಿಯೆಗಳು
ವಿಳಂಬವಾಗುತ್ತಿವೆ. ಈ ನಿಟ್ಟಿನಲ್ಲಿ ಕಂದಾಯ ಮತ್ತು ಅರಣ್ಯ ಇಲಾಖೆಗಳು ಜಂಟಿಯಾಗಿ ಸರ್ವೆ ಕಾರ್ಯವನ್ನು ತ್ವರಿತವಾಗಿ ನಡೆಸಬೇಕೆಂದು ಅವರು ಸೂಚಿಸಿದರು.94 ಸಿ ಪ್ರಕರಣದಲ್ಲಿ ಭೂ ಮಂಜೂರಾತಿ ಕಡತಗಳನ್ನು ಯಾವುದೇ ಸಕಾರಣಗಳಿಲ್ಲದೆ ವಿಳಂಬಿಸುವುದನ್ನು ಸರಕಾರ ಸಹಿಸುವುದಿಲ್ಲ. ಕಾಲಮಿತಿಯಲ್ಲಿ ಈ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕೆಂದು ಸಚಿವರು ಸೂಚಿಸಿದರು.
ತಾಲೂಕು ಆಸ್ಪತ್ರೆಯಲ್ಲಿ ಬ್ಲಡ್ ಬ್ಯಾಂಕ್ ಸ್ಥಾಪಿಸುವ ಬೇಡಿಕೆ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು ತಾಲೂಕು ಆಸ್ಪತ್ರೆಯಲ್ಲಿ ಪ್ಲಾಸ್ಮಾ ಸ್ಟೋರೇಜ್ ಸ್ಥಾಪಿಸಲಾಗುವುದು ಎಂದು ಹೇಳಿದರು. ಸುಳ್ಯ ತಾಲೂಕಿನಲ್ಲಿ ಕಚೇರಿಗಳಲ್ಲಿ ಖಾಲಿ ಹುದ್ದೆಗಳ ಕುರಿತು ಕೇಳಲಾದ ಪ್ರಶ್ನಗೆ ಉತ್ತರಿಸಿದ ಸಚಿವರು ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ಈ ಕುರಿತು ಕ್ರಮ ಕೈಗೊಳ್ಳಲಾಗುವುದು. ಸುಳ್ಯದಲ್ಲಿ ಆಧಾರ್ ಕೇಂದ್ರ ಸ್ಥಾಪನೆ ಮತ್ತು ಪುರಭವನ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ ಸಚಿವರು ಈ ಕುರಿತು ಸಂಪೂರ್ಣ ತನ್ನ ಕಚೇರಿಗೆ ಮಾಹಿತಿ ನೀಡುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.