ಸುಳ್ಯ:ಕಾಂಕ್ರೀಟೀಕರಣ ಮಾಡಲಾದ ಸುಳ್ಯ ನಗರದ ನಾವೂರು ರಸ್ತೆ ಎರಡೇ ತಿಂಗಳಲ್ಲಿ ಎಕ್ಕುಟ್ಟಿ ಹೋಗಿರುವ ಘಟನೆ ವರದಿಯಾಗಿದೆ. ಈ ಕುರಿತು ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ ನಗರ ಪಂಚಾಯತ್ ಮುಖ್ಯಾಧಿಕಾರಿ ಹಾಗೂ ಇಂಜಿನಿಯರ್ಗಳಿಗೆ ದೂರು ನೀಡಿದ್ದಾರೆ. ಈ ಹಿನ್ನಲೆಯಲ್ಲಿ
ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ, ಜಿಲ್ಲಾ ನಗರಾಭಿವೃದ್ಧಿ ಕೋಶದ ಇಂಜಿನಿಯರ್ ಅರುಣ್ ಕುಮಾರ್ ಮತ್ತಿತರರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ನಾವೂರು ರಸ್ತೆಯನ್ನು ನಗರೋತ್ಥಾನ ಹಂತ – 4 ರಲ್ಲಿ 4 ಮೀಟರ್ ಅಗಲಕ್ಕೆ ಅಂದಾಜು 180 ಮೀಟರ್ ಕಾಂಕ್ರೀಟೀಕರಣ ನಡೆಸಿ ಅಭಿವೃದ್ಧಿಪಡಿಸಲಾಗಿರುತ್ತದೆ. ಆದರೆ ಇದೀಗ ರಸ್ತೆ ಪೂರ್ಣಗೊಂಡು ಕೇವಲ 2 ತಿಂಗಳಲ್ಲಿಯೇ ರಸ್ತೆಯು ಅಲ್ಲಲ್ಲಿ ಹಾಳಾಗಿದ್ದು ಇದರಲ್ಲಿ ಕಾಮಗಾರಿಯ ಗುಣಮಟ್ಟದ ಕುರಿತು ಸಾರ್ವಜನಿಕರಲ್ಲಿ ಅನುಮಾನ ಉಂಟಾಗಿದೆ. ಆದುದರಿಂದ ಈ ಕುರಿತು ತುರ್ತು ಪರಿಶೀಲನೆ ನಡೆಸಿ ಕಾಮಗಾರಿಯು ಲೋಪಗೊಂಡಿದ್ದಲ್ಲಿ ಕೂಡಲೇ ಸರಿಪಡಿಸಬೇಕಾಗಿ ನಗರ ಪಂಚಾಯತ್ ನಾವೂರು ವಾರ್ಡ್ ಸದಸ್ಯ ಶರೀಫ್ ಕಂಠಿ ದೂರು ನೀಡಿದ್ದರು. ಈ ಹಿನ್ನಲೆಯಲ್ಲಿ ಇಂಜಿನಿಯರ್ಗಳು ಆಗಮಿಸಿ ಪರಿಶೀಲನೆ ನಡೆಸಿ ಹಾಳಾದ ರಸ್ತೆಯನ್ನು ಸರಿಪಡಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ನ.ಪಂ.ಸದಸ್ಯ ಶರೀಫ್ ಕಂಠಿ ತಿಳಿಸಿದ್ದಾರೆ. ಕಾಂಕ್ರೀಟ್ ರಸ್ತೆ ಎರಡೇ ತಿಂಗಳಲ್ಲಿ ಹಾಳಾಗಿ ಹೋಗಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ