ಸುಳ್ಯ: ನದಿಗಳಲ್ಲಿ, ಮರಳು, ಹೂಳು ತುಂಬಿದ್ದು ಇದನ್ನು ತೆರವು ಮಾಡದ ಕಾರಣ ಸಂಪಾಜೆ ಗ್ರಾಮದಲ್ಲಿ ಮಳೆಗಾಲದಲ್ಲಿ ಪ್ರಳಯ ಭೀತಿ ಉಂಟಾಗಿದೆ. ಈ ಹಿನ್ನಲೆಯಲ್ಲಿ ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ ನೇತೃತ್ವದ ನಿಯೋಗ ಸುಳ್ಯ ತಹಶೀಲ್ದಾರ್ ಜಿ.ಮಂಜುನಾಥ್ ಅವರನ್ನು ಭೇಟಿಯಾಗಿ ಚರ್ಚಿ ನಡೆಸಿತು.
ಕಳೆದ ವರ್ಷ ಪ್ರವಾಹದಿಂದ ಸಂಕಷ್ಟಕ್ಕೀಡಾಗಿದ್ದ ಸಂಪಾಜೆ ಗ್ರಾಮಕ್ಕೆ
ಆಗಿನ ಮುಖ್ಯಮಂತ್ರಿಗಳು, ಸಚಿವರುಗಳು, ಜಿಲ್ಲಾಧಿಕಾರಿಗಳು ಆಗಮಿಸಿ ಗ್ರಾಮದ ಹೊಳೆಗಳ ಹೂಳೆತ್ತೆವುದರ ಕುರಿತಾಗಿ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದರು. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನಿಯೋಗ ತಹಶೀಲ್ದಾರ್ ಅವರ ಗಮನಕ್ಕೆ ತಂದರು.
ಕಡತವು ಜಿಲ್ಲಾಧಿಕಾರಿಗಳ ಹಂತದಲ್ಲಿದ್ದು, ಗಣಿ ಹಾಗೂ ಭೂವಿಜ್ಞಾನ ಇಲಾಖೆಯ ಕೋರಿಕೆಯ ಮೇರೆಗೆ ಸುಳ್ಯ ಭೂಮಾಪಕರು ಹಾಗೂ ಕಂದಾಯ ನಿರೀಕ್ಷಕರು ಸ್ಥಳ ವೀಕ್ಷಣೆಯನ್ನು ನಡೆಸಿ ಕಂದಾಯ ನಕಾಶೆಯನ್ನು ಗಣಿ ಹಾಗೂ ಭೂವಿಜ್ಞಾನ ಇಲಾಖೆಗೆ ಕಳುಹಿಸಿರುತ್ತೇವೆ ಎಂದು ತಹಶೀಲ್ದಾರ್ ಜಿ.ಮಂಜುನಾಥ್ ಅವರು ನಿಯೋಗಕ್ಕೆ ಮಾಹಿತಿಯನ್ನು ನೀಡಿದರು.
ಹೂಳೆತ್ತುವ ಕಡತವು ಜಿಲ್ಲಾಧಿಕಾರಿಗಳ ಹಂತದಲ್ಲಿದ್ದು, ಮುಂದಿನ ದಿನಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇಮಕವಾದ ನಂತರ ಅವರ ಮೂಲಕ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಕ್ರಮಕ್ಕೆ ಒತ್ತಾಯಿಸಲಾಗುವುದು ಎಂದು ಸೋಮಶೇಖರ ಕೊಯಿಂಗಾಜೆ ತಿಳಿಸಿದರು.ದ.ಕ.ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಕುಂಞಿ ಗೂನಡ್ಕ, ದ.ಕ.ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಎ.ಕೆ.ಇಬ್ರಾಹಿಂ, ಸಂಪಾಜೆ ವಲಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಟಿ.ಐ.ಲೂಕಾಸ್ ನಿಯೋಗದಲ್ಲಿದ್ದರು.