ಧರ್ಮಸ್ಥಳ:ಧರ್ಮಸ್ಥಳದ ವತಿಯಿಂದ ಉಜಿರೆಯಲ್ಲಿ ಈ ವರ್ಷ ನರ್ಸಿಂಗ್ ಕಾಲೇಜು ಪ್ರಾರಂಭಿಸಲಾಗುವುದು. ನೂರು ಎಕರೆ ಪ್ರದೇಶದಲ್ಲಿ ಕೃಷಿ ಕಾಲೇಜು ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಪ್ರಕಟಿಸಿದರು. ಕೃಷಿ ಕಾಲೇಜಿಗಾಗಿ ನೂರು ಎಕರೆ ಪ್ರದೇಶ ದೊರಕಿದಲ್ಲಿ ತಕ್ಷಣ ಕಾಲೇಜು ಸ್ಫಾಪನೆಯ ಪ್ರಕ್ರಿಯೆ ಪ್ರಾರಂಭಿಸಲಾಗುವುದು ಎಂದು
ಹೆಗ್ಗಡೆಯವರು ಹೇಳಿದರು.ಲಕ್ಷದೀಪೋತ್ಸವ ಪ್ರಾರಂಭದ ದಿನವಾದ ಶನಿವಾರ ಉಜಿರೆಯಿಂದ ಧರ್ಮಸ್ಥಳಕ್ಕೆ ಬಂದ ಸಾವಿರಾರು ಪಾದಯಾತ್ರಿಗಳನ್ನು ಅಮೃತವರ್ಷಿಣಿ ಸಭಾ ಭವನದಲ್ಲಿ ಉದ್ದೇಶಿಸಿ ಅವರು ಮಾತನಾಡಿದರು.
ಪಾದಯಾತ್ರಿಯು ಲಕ್ಷದೀಪೋತ್ಸವದ ಸಂಪ್ರದಾಯವಾಗಿ ಬೆಳೆದುಬಂದಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು. ಎಲ್ಲರಿಗೂ ಸನ್ಮಂಗಳವಾಗಿ ಲೋಕಕಲ್ಯಾಣವಾಗಲಿ ಎಂದು ಹೆಗ್ಗಡೆಯವರು ಹಾರೈಸಿದರು.
ಶಾಸಕ ಹರೀಶ್ ಪೂಂಜ,ವಿಧಾನಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಮಾತನಾಡಿದರು.

ಡಿ. ಹರ್ಷೇಂದ್ರ ಕುಮಾರ್, ಹೆಗ್ಗಡೆಯವರ ಕುಟುಂಬವರ್ಗದವರು, ಸೋನಿಯಾಯಶೋವರ್ಮ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿ.ಇ..ಒ. ಅನಿಲ್ ಕುಮಾರ್ ಮತ್ತು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ. ಶ್ರೀನಾಥ್ ಮೊದಲಾದವರು ಉಪಸ್ಥಿತರಿದ್ದರು.ಉಜಿರೆಯಲ್ಲಿ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ತಂದ ಪ್ರಸಾದವನ್ನು ಆಡಳಿತ ಮೊಕ್ತೇಸರ ಶರತ್ಕೃಷ್ಣ ಪಡ್ವೆಟ್ನಾಯ ಹೆಗ್ಗಡೆಯವರಿಗೆ ನೀಡಿ ಶುಭ ಹಾರೈಸಿದರು.

ಉಜಿರೆಯ ರಬ್ಬರ್ ಸೊಸೈಟಿಯ ಉಪಾಧ್ಯಕ್ಷ ಅನಂತ ಭಟ್ ಮಚ್ಚಿಮಲೆ ಸ್ವಾಗತಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಧನ್ಯವಾದವಿತ್ತರು. ಶ್ರೀನಿವಾಸ್ ರಾವ್ ಧರ್ಮಸ್ಥಳ ಕಾರ್ಯಕ್ರಮ ನಿರ್ವಹಿಸಿದರು.
ಉಜಿರೆಯಲ್ಲಿ ಆಡಳಿತ ಮೊಕ್ತೇಸರ ಶರತ್ಕೃಷ್ಣ ಪಡ್ವೆಟ್ನಾಯ ಮತ್ತು ಶಾಸಕ ಹರೀಶ್ ಪೂಂಜ ಪಾದಯಾತ್ರೆಗೆ ಚಾಲನೆ ನೀಡಿದರು.











