ಸುಳ್ಯ: ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪ ಅವರು ಸುಳ್ಯ ಕ್ಷೇತ್ರದಿಂದ ಈ ಬಾರಿ ಆಯ್ಕೆಯಾಗುವುದು ಖಚಿತ. ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯಾದರೆ ಸುಳ್ಯದ ಎಲ್ಲಾ ಮೂಲಭೂತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾಡಿಯೇ ಮಾಡುತ್ತೇವೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ ಹೇಳಿದ್ದಾರೆ. ಸುಳ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸುಳ್ಯ ನಗರದ ಜನರು ಅನೇಕ ವರ್ಷಗಳಿಂದ ಕೆಸರು ನೀರು ಕುಡಿಯುತ್ತಾ ಇದ್ದಾರೆ. ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ
ಮಾಡುವ ಮೂಲಕ ಅದಕ್ಕೆ ಅತೀ ಶೀಘ್ರ ಪರಿಹಾರ ಮಾಡುತ್ತೇವೆ. 110 ಕೆವಿ ಸಬ್ ಸ್ಟೇಷನ್ ಅನುಷ್ಠಾನ ಮಾಡಿ ಸುಳ್ಯದ ವಿದ್ಯುತ್ ಸಮಸ್ಯೆ ಪರಿಹರಿಸುತ್ತೇವೆ. ಎಲ್ಲೆಲ್ಲಾ ರಸ್ತೆ, ಕುಡಿಯುವ ನೀರು ಇಲ್ಲಾ ಎಂದು ಬ್ಯಾನರ್ ಅಳವಡಿಸಿದ್ದಾರೋ ಅಲ್ಲೆಲ್ಲಾ ಆದ್ಯತೆಯ ಮೇರೆಗೆ ಪರಿಹಾರ ಕಂಡು ಕೊಳ್ಳುತ್ತೇವೆ. ಕ್ಷೇತ್ತದ ಎಲ್ಲಾ ಪ್ರಮುಖ ರಸ್ತೆಗಳನ್ನು ಅಭಿವೃದ್ಧಿ ಮಾಡುತ್ತೇವೆ. ಅಡಿಕೆಯ ಹಳದಿ ರೋಗ, ಎಲೆ ಚುಕ್ಕಿ ರೋಗಕ್ಕೆ ಪರಿಹಾರ ಮತ್ತು ಪರ್ಯಾಯ ಹುಡುಕುತ್ತೇವೆ. ಪ್ರಯತ್ನ ಮಾಡುತ್ತೇವೆ ಎಂದು ಇದು ಕೇವಲ ಭರವಸೆ ಅಲ್ಲಾ ಮಾಡಿಯೇ ಮಾಡುತ್ತೇವೆ ಎಂಬ ದೃಢ ನಿರ್ಧಾರ ಎಂದು ಧನಂಜಯ ಅಡ್ಪಂಗಾಯ ಹೇಳಿದರು. ಬೆಳ್ತಂಗಡಿ ಕ್ಷೇತ್ರಕ್ಕೆ 3500 ಕೋಟಿ ಅನುದಾನ ಬಂದಿದೆ ಎಂದು ಹರೀಶ್ ಪೂಂಜಾ ಹೇಳುತ್ತಾರೆ, ಪುತ್ತೂರಿಗೆ 2500 ಕೋಟಿ ಅನುದಾನ ಬಂದಿದೆ ಎಂದು ಸಂಜೀವ ಮಠಂದೂರು ಹೇಳುತ್ತಾರೆ. ಆದರೆ ಸುಳ್ಯ ಕ್ಷೇತ್ರಕ್ಕೆ ಮಾತ್ರ ಯಾಕೆ ಅಸ್ಟು ಅನುದಾನ ಬಂದಿಲ್ಲಾ. ಸುಳ್ಯವನ್ನು ಯಾಕೆ ಅಷ್ಟು ಕಡೆಗಣನೆ, ಅಂಗಾರರಿಗೆ ಯಾಕೆ ಅಸ್ಟು ಅನುದಾನದ ಶಕ್ತಿ ಕೊಟ್ಟಿಲ್ಲಾ ಎಂದು ಅವರು
ಪ್ರಶ್ನಿಸಿದರು. ಸುಳ್ಯದವರೇ ಆದ ಡಿ.ವಿ.ಸದಾನಂದ ಗೌಡ, ನಳಿನ್ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ ಪ್ರಭಾವಿ ನಾಯಕರಾಗಿ ರಾಜ್ಯ ಹಾಗೂ ಕೇಂದ್ರದಲ್ಲಿ ಹಲವು ಅಧಿಕಾರವನ್ನು ಪಡೆದಿದ್ದರು. ಅವರು ಸುಳ್ಯ ಕ್ಷೇತ್ರಕ್ಕೆ ಯಾವ ಕೊಡುಗೆ ನೀಡಿದ್ದಾರೆ. ಸುಳ್ಯದ ರಸ್ತೆಗಳ ಅಭಿವೃದ್ಧಿಗೆ, ವಿದ್ಯುತ್, ಕುಡಿಯುವ ನೀರು, ಮೂಲಭೂತ ಅಭಿವೃದ್ಧಿಗೆ, ಕೃಷಿಕರ ಸಮಸ್ಯೆ ಪರಿಹಾರಕ್ಕೆ ಏನು ಕೊಡುಗೆ ನೀಡಿದ್ದಾರೆ ಎಂದು ಪ್ರಶ್ನಿಸಿದರು. ಬಿಜೆಪಿಗೆ ಅಗಾಧವಾದ ಶಕ್ತಿ, ಅಧಿಕಾರ ಇದ್ದರೂ ಸುಳ್ಯದ ಅಭಿವೃದ್ಧಿಗೆ ಏನೂ ಕೊಡುಗೆ ನೀಡಿಲ್ಲ. ಈ ಬಾರಿ ಸುಳ್ಯದ ಜನತೆ ಬದಲಾವಣೆ ಬಯಸಿದ್ದಾರೆ ಎಂದು ಅಡ್ಪಂಗಾಯ ಹೇಳಿದರು.
ಸಂವಿಧಾನವನ್ನು ಎತ್ತಿ ಹಿಡಿಯುವ ಪಕ್ಷ ಕಾಂಗ್ರೆಸ್:
ಕಾಂಗ್ರೆಸ್ ಯಾವತ್ತೂ ಈ ದೇಶದ ಸಂವಿಧಾನವನ್ನೂ ಕಾನೂನನ್ನು ಎತ್ತಿ ಹಿಡಿಯುವ ಪಕ್ಷ. ದೇಶದಲ್ಲಿ ಶಾಂತಿ, ಸುವ್ಯವಸ್ಥೆ, ಸೌಹಾರ್ಧತೆ, ಮಾನವೀಯ ಮೌಲ್ಯಗಳಿಗಾಗಿ ಕಾಂಗ್ರೆಸ್ ಹಲವಾರು ತ್ಯಾಗಗಳನ್ನು ಮಾಡಿದೆ. ದೇಶದ ಹಿತ ಕಾಯಲು, ಸಂವಿಧಾನವನ್ನು ರಕ್ಷಿಸಲು ಕಾಂಗ್ರೆಸ್ ಬದ್ಧವಾಗಿದೆ.ಸಂವಿಧಾನ ವಿರೋಧಿಯಾಗಿ ಯಾರು ಕೆಲಸ ಮಾಡಿದರೂ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಅದನ್ನು ಕಾಂಗ್ರೆಸ್ ಪ್ರಣಾಳಿಕೆಯಲ್ಲಿಯೂ ಸ್ಪಷ್ಟಪಡಿಸಿದ್ದೇವೆ. ರಾಜ್ಯದಲ್ಲಿ ಶಾಂತಿ, ನೆಮ್ಮದಿ ನೆಲೆ ನಿಲ್ಲಬೇಕು. ಗಲಭೆಗಳು, ಕೊಲೆಗಳು ಇನ್ನು ಮುಂದೆ ಎಲ್ಲಿಯೂ ನಡೆಯಬಾರದು. ಅದಕ್ಕಾಗಿ ಎಲ್ಲಾ ಕ್ರಮವನ್ನೂ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಾಡಲಿದೆ. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ದಿಟ್ಟ ಹೆಜ್ಜೆ ಇರಿಸಲಿದೆ ಎಂದು ಹೇಳಿದರು.
ಜನರು ಭ್ರಮ ನಿರಶನಗೊಂಡಿದ್ದಾರೆ: ಟಿ.ಎಂ.ಶಹೀದ್
ಬಿಜೆಪಿ ಆಡಳಿತದಲ್ಲಿ ಸುಳ್ಯ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿಗಳು ನಡೆದಿಲ್ಲಾ. ಅಭಿವೃದ್ಧಿಯಲ್ಲಿ ಆದ ಹಿನ್ನಡೆಯಿಂದ ಜನರು ಭ್ರಮ ನಿರಶನಗೊಂಡಿದ್ದಾರೆ. ಆದುದರಿಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಅಲೆ ಇದೆ ಎಂದು ಕೆಪಿಸಿಸಿ ವಕ್ತಾರ ಟಿ.ಎಂ.ಶಹೀದ್ ತೆಕ್ಕಿಲ್ ಹೇಳಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದಲ್ಲಿ ಸುಳ್ಯದ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಸದಾನಂದ ಮಾವಜಿ, ಮುಖಂಡರಾದ ಸುರೇಶ್ ಎಂ.ಎಚ್, ಮುತ್ತಪ್ಪ ಪೂಜಾರಿ ಉಪಸ್ಥಿತರಿದ್ದರು.