ಮಂಗಳೂರು: ಭಾರತೀಯ ಜನತಾ ಪಕ್ಷದ ಡಬಲ್ ಎಂಜಿನ್ ಸರಕಾರ ರೈತರ ಆದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳುವ ಮೂಲಕ ರೈತ ಸಮುದಾಯದ ಮನಗೆದ್ದಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಹೇಳಿದರು.
ಬಿಜೆಪಿ ಮಂಗಳೂರು ವಿಭಾಗ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮೋದಿ ಸರ್ಕಾರವು ರೈತರಿಗೆ ಕನಿಷ್ಠ ಜೆಂಬಲ ಬೆಲೆಯನ್ನು ಹೆಚ್ಚಿಸುವ ಮೂಲಕ ರೈತರ ಆದಾಯ ಏರಿದೆ, ರೈತರಲ್ಲಿ ಹೊಸ
ಭರವಸೆ ಮೂಡಿದೆ ಎಂದರು.ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ ಕೇಂದ್ರ ಸರಕಾರದಿಂದ 6,000 ರೂ ಮತ್ತು ರಾಜ್ಯ ಸರಕಾರದಿಂದ 4,000 ರೂ ಸೇರಿದಂತೆ ಒಟ್ಟು 10,000 ರೂ.ಗಳ ಗೌರವ ಧನದ ಮೊತ್ತವನ್ನು ನೇರ ನಗದು ವರ್ಗಾವಣೆ ಮೂಲಕ 54 ಲಕ್ಷ ಅರ್ಹ ರೈತರಿಗೆ ನೀಡಲಾಗಿದೆ. ರಸಗೊಬ್ಬರಗಳಲ್ಲಿನ ರಾಸಾಯನಿಕ ಅಂಶವನ್ನು ಕಡಿಮೆ ಮಾಡಲು ಮೋದಿ ಸರ್ಕಾರವು ಬೇವು ಲೇಪಿತ ಯೂರಿಯಾವನ್ನು ಪರಿಚಯಿಸಿತು. ಇದು ಮಣ್ಣಿನ ಆರೋಗ್ಯವನ್ನು ಸುಧಾರಿಸಿದ್ದಲ್ಲದೇ, ದೇಶದ ರೈತರ ಆದಾಯವನ್ನು ಹೆಚ್ಚಿಸಲು ನೆರವಾಯಿತು ಎಂದು ರಾಧಾಕೃಷ್ಣ ಬೊಳ್ಳೂರು ತಿಳಿಸಿದರು. ರೈತ ವಿದ್ಯಾನಿಧಿ ಯೋಜನೆಯ ಮೂಲಕ 725 ಕೋಟಿ ರೂ.ಗಳ ವಿದ್ಯಾರ್ಥಿ ವೇತನವನ್ನು ವಿತರಿಸಿ ಕೃಷಿಕರ ಮಕ್ಕಳ ಭವಿಷ್ಯವನ್ನು ಭದ್ರಪಡಿಸಿತು.
ಕರಾವಳಿ ಕರ್ನಾಟಕ ಮಲೆನಾಡು ಭಾಗದ ಪ್ರಮುಖ ಬೆಳೆ ಅಡಿಕೆ 2013 ರಲ್ಲಿ ನೆಲಕಚ್ಚಿ ಕೆ.ಜಿಗೆ 180 ರೂಪಾಯಿ ಇಳಿದಿತ್ತು. ಆ ಕರಾಳ ದಿನಗಳನ್ನು ಯಾರೂ ಮರೆತಿಲ್ಲ. ಇತ್ತೀಚಿನ ವರ್ಷಗಳಲ್ಲಿ ಕೆ.ಜಿಗೆ ಐತಿಹಾಸಿಕ 500 ರೂಪಾಯಿ ಗಡಿ ದಾಟಿ ಅಡಿಕೆ ಬೆಳೆ ಕರ್ನಾಟಕದ ಇತರೆ ಭಾಗಗಳಿಗೆ ಪಸರಿಸಿದ್ದು ಇತಿಹಾಸ.ಆಮದು ಅಡಕೆಗೆ 250 ರಿಂದ 350 ವರೆಗೆ ತೆರಿಗೆ ವಿಧಿಸಿ ರಾಜ್ಯದ ರೈತರಿಗೆ ನೆರವಾದ ಕೇಂದ್ರದ ನಿರ್ಧಾರವನ್ನು ಜನತೆ ಮರೆತಿಲ್ಲ ಎಂದು ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷರು ನುಡಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ದ.ಕ ಜಿಲ್ಲಾ ವಕ್ತಾರ ಜಗದೀಶ್ ಶೇಣವ, ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಭಟ್ ಪಿ, ಮಂಗಳೂರು ತಾಲೂಕು ರೈತ ಮೋರ್ಚಾ ಸದಸ್ಯ ಸತ್ಯಪ್ರಸಾದ ಪೊಳಿಮಾರಡ್ಕ, ಬಿಜೆಪಿ ಪ್ರಮುಖರಾದ ಸಂಜಯ ಪ್ರಭು, ರಾಜ್ಯ ಮಾಧ್ಯಮ ಸಮಿತಿ ಸದಸ್ಯ ರತನ್ ರಮೇಶ್ ಪೂಜಾರಿ ಉಪಸ್ಥಿತರಿದ್ದರು.