ಮುಂಬೈ: ಪಂಜಾಬ್ ಕಿಂಗ್ಸ್ ತಂಡವು ಐಪಿಎಲ್ ಪಂದ್ಯದಲ್ಲಿ 13 ರನ್ಗಳಿಂದ ಆತಿಥೇಯ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿತು.ಟಾಸ್ ಸೋತು ಬ್ಯಾಟಿಂಗ್ಗೆ ಕಳುಹಿಸಲ್ಪಟ್ಟ ಪಂಜಾಬ್ 20 ಓವರ್ಗಳಲ್ಲಿ 8 ವಿಕೆಟ್ಗಳಿಗೆ 214 ರನ್ ಗಳಿಸಿತು. ವೀರೋಚಿತ ಹೋರಾಟ ನಡೆಸಿದ ಮುಂಬೈ ಬ್ಯಾಟರ್ಗಳು ನಿಗದಿತ ಓವರ್ಗಳಲ್ಲಿ 6 ವಿಕೆಟ್ಗೆ 201 ರನ್ ಗಳಿಸಿದರು.ಮುಂಬೈ ಪರ ಆರಂಭಿಕ ಬ್ಯಾಟರ್
ಇಶಾನ್ ಕಿಶನ್ (1) ವಿಫಲರಾದರು. ನಾಯಕ ರೋಹಿತ್ ಶರ್ಮಾ (44) ಹಾಗೂ ಕ್ಯಾಮರಾನ್ ಗ್ರೀನ್ (67) ಎರಡನೇ ವಿಕೆಟ್ಗೆ 76 ರನ್ ಸೇರಿಸಿದರು. 10ನೇ ಓವರ್ನಲ್ಲಿ ರೋಹಿತ್ ಔಟಾದ ಬಳಿಕ, ಸೂರ್ಯಕುಮಾರ್ ಯಾದವ್ (57) ಜೊತೆಗೂಡಿದ ಗ್ರೀನ್ 75 ರನ್ ಕಲೆಹಾಕಿದರು. ಇವರಿಬ್ಬರು ಕ್ರೀಸ್ ನಲ್ಲಿದ್ದಾಗ ಮುಂಬೈ ಗೆಲುವಿನ ಆಸೆ ಚಿಗುರಿತ್ತು. ಆದರೆ ಇವರಿಬ್ಬರ ವಿಕೆಟ್ ಗಳಿಸಿದ ಆರ್ಷದೀಪ್ ಸಿಂಗ್ (29ಕ್ಕೆ 4) ಹಾಗೂ ನೇಥನ್ ಎಲಿಸ್ ಪಂಜಾಬ್ ತಂಡದ ಮೇಲುಗೈಗೆ ಕಾರಣರಾದರು.ಕೊನೆಯ ಓವರ್ನಲ್ಲಿ ಮುಂಬೈ ಗೆಲುವಿಗೆ 16 ರನ್ ಬೇಕಿತ್ತು. ಈ ಓವರ್ನಲ್ಲಿ ಅಮೋಘ ಬೌಲಿಂಗ್ ಸಾಮರ್ಥ್ಯ ತೋರಿದ ಆರ್ಷದೀಪ್ ಕೇವಲ ಎರಡು ರನ್ ನೀಡಿ ತಿಲಕ್ ವರ್ಮಾ ಹಾಗೂ ನೇಹಲ್ ವಧೇರಾ ಅವರ ವಿಕೆಟ್ ಗಳಿಸಿ ಪಂಜಾಬ್ ತಂಡಕ್ಕೆ ಗೆಲುವು ದೊರಕಿಸಿಕೊಟ್ಟರು.
ಇದಕ್ಕೂ ಮುನ್ನ ಇನಿಂಗ್ಸ್ ಕೊನೆಯ ಆರು ಓವರ್ಗಳಲ್ಲಿ ರನ್ಗಳ ಹೊಳೆ ಹರಿಸಿದ ಸ್ಯಾಮ್ ಕರನ್ ಹಾಗೂ ಹರಪ್ರೀತ್ (41) ಪಂಜಾಬ್ ಬೃಹತ್ ಮೊತ್ತ ಗಳಿಸಲು ಕಾರಣರಾದರು. ಸ್ಯಾಮ್ ಕರನ್ 29 ಎಸೆತಗಳಲ್ಲಿ 55 ರನ್ ಗಳಿಸಿದರು. ಅದರಲ್ಲಿ ಐದು ಬೌಂಡರಿ ಹಾಗೂ ನಾಲ್ಕು ಸಿಕ್ಸರ್ ಸಿಡಿಸಿದರು. ಪಂಜಾಬ್ ತಂಡವು 14 ಓವರ್ಗಳಲ್ಲಿ 4 ವಿಕೆಟ್ಗಳಿಗೆ 105 ರನ್ ಗಳಿಸಿತ್ತು. ಆದರೆ ಕೊನೆಯ 6 ಓವರ್ ಗಳಲ್ಲಿ 109 ರನ್ಗಳು ಹರಿದುಬಂದವು.ಕೊನೆಯಲ್ಲಿ ಜಿತೇಶ್ ಶರ್ಮಾ 7 ಎಸೆತಗಳಲ್ಲಿ 25 ರನ್ ಬಾರಿಸಿದರು.