*ಗಂಗಾಧರ ಕಲ್ಲಪಳ್ಳಿ.
ಸುಳ್ಯ:ಕಾಡಾನೆ ಹಾವಳಿಯಿಂದ ಸುಳ್ಯ ತಾಲೂಕಿನ ಗಡಿ ಗ್ರಾಮಗಳಾದ ಮಂಡೆಕೋಲು, ಅಜ್ಜಾವರ,ಆಲೆಟ್ಟಿ ಗ್ರಾಮಗಳಲ್ಲಿ ಕೃಷಿಕರು ಹೈರಾಣಾಗಿದ್ದಾರೆ. ಆನೆ ಹಾವಳಿಯನ್ನು ತಡೆಯಲು ಹಲವಾರು ಯೋಜನೆಗಳನ್ನು ರೂಪಸಿದರೂ ಆನೆ ಹಾವಳಿಯನ್ನು ತಡೆಯಲು ಸಾಧ್ಯವಾಗಿಲ್ಲ.ಮಾತ್ರವಲ್ಲದೆ ಆನೆ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತಿದೆ. ಇದೀಗ ಆನೆ ಬರುವ ದಾರಿಯಲ್ಲಿ ಜೇನು ಪೆಟ್ಟಿಗೆಗಳನ್ನು ಇರಿಸಿ ತೋಟಕ್ಕೆ ಆನೆ ಬರದಂತೆ ತಡೆಯುವ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ. ಕರ್ನಾಟಕ ರಾಜ್ಯದಲ್ಲಿಯೇ ಮೊದಲ ಬಾರಿಗೆ ಈ ಪ್ರಯೋಗ ಸುಳ್ಯ ತಾಲೂಕಿನ
ಮಂಡೆಕೋಲು ಗ್ರಾಮದ ದೇವರಗುಂಡ ಭಾಗದ ಕೃಷಿಕರ ತೋಟದಲ್ಲಿ ಅಳವಡಿಸಲಾಗುತ್ತಿದೆ.ಅಸ್ಸಾಂ ರಾಜ್ಯದಲ್ಲಿ ಕೃಷಿಕರು ಈ ಪ್ರಯೋಗವನ್ನು ಮಾಡಿ ಯಶಸ್ವಿಯಾಗಿದ್ದಾರೆ ಎಂದು ಹೇಳಲಾಗಿದೆ.
ತೋಟದ ಬದಿಯಲ್ಲಿ ಜೇನು ಪೆಟ್ಟಿಗೆಗಳನ್ನು ಸಾಲಾಗಿ ಇರಿಸಲಾಗುವುದು. ಸಾಲಾಗಿ ಪೆಟ್ಟಿಗೆಗಳನ್ನು ಇರಿಸಿ ಅದಕ್ಕೆ ಒಂದನ್ನೊಂದು ಬಂಧಿಸುವಂತೆ ತಂತಿಗಳನ್ನು ಕಟ್ಟಲಾಗುತ್ತದೆ. ಆನೆಗಳು ದಾಂಗುಡಿಯಿಡುವ ಸಂದರ್ಭದಲ್ಲಿ ಜೇನು ಪೆಟ್ಟಿಗೆಗೆ ಅಥವಾ ತಂತಿಗೆ ತಾಗಿದರೆ ಪೆಟ್ಟಿಗೆಗಳು ವೈಬ್ರೇಷನ್ ಆಗಿ ಜೇನು ನೊಣಗಳು ಏಳುತ್ತವೆ. ಜೇನು ನೊಣಗಳು ಗುಯಿಂ ಗುಟ್ಟಿ ಗುಂಪಾಗಿ ಏಳುವ ಕಾರಣ ಆನೆಗಳಿಗೆ ಕಿರಿ ಕಿರಿ ಉಂಟಾಗುತ್ತದೆ.ಇದರಿಂದ ಆನೆಗಳು ಮತ್ತೆ ಆ ಕಡೆ ಬರುವುದಿಲ್ಲ ಎಂಬುದು ಪ್ರಯೋಗದ ತಾತ್ಪರ್ಯ. ಜ.19 ರಂದು ಬೆಳಿಗ್ಗೆ 10ಕ್ಕೆ ದೇವರಗುಂಡದ ಡಿ.ಸಿ.ಬಾಲಚಂದ್ರ ಹಾಗು ಮತ್ತಿತರ ಕೃಷಿಕರ ತೋಟದಲ್ಲಿ ಜೇನು ಪೆಟ್ಟಿಗೆಗಳನ್ನು ಇರಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುತ್ತದೆ.

ಜೇನು ಕೃಷಿ ಬಗ್ಗೆ ತರಬೇತಿ:
ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ವತಿಯಿಂದ
ದ.ಕ.ಉಡುಪಿ ಜೇನು ವ್ಯವಸಾಯಗಾರರ ಸಹಕಾರ ಸಂಘದ ನೇತೃತ್ವದಲ್ಲಿ ಹನಿಮಿಷನ್ ಯೋಜನೆಯಡಿಯಲ್ಲಿ
35 ಮಂದಿ ಕೃಷಿಕರಿಗೆ ಜೇನು ಕೃಷಿ ತರಬೇತಿ ನೀಡಲಾಗಿದೆ. ಈ ತರಬೇತಿ ಪಡೆದವರಿಗೆ ಜೇನು ಕೃಷಿ ಮಾಡಲು ತಲಾ 10 ಪೆಟ್ಟಿಗೆಯನ್ನು ಜೇನು ಕುಟುಂಬ ಸಮೇತ ನೀಡಲಾಗುತ್ತದೆ. ಜೇನು ಪೆಟ್ಟಿಗೆಯನ್ನು ಆನೆಗಳು ಬರುವ ದಾರಿಗೆ ಜೋಡಿಸುವ ಮೂಲಕ ಹಾವಳಿಯನ್ನು ತಡೆಗಟ್ಟುವ ಒಂದು ಪ್ರಾಯೋಗಿಕ ಮಾದರಿಗೆ ಚಾಲನೆ ನೀಡಲಾಗುತ್ತದೆ. ಕಳೆದ ಅನೇಕ ದಿನಗಳಿಂದ ಕಾಡಾನೆ ಹಾವಳಿಯಿಂದ ನಲುಗಿರುವ ದೇವರಗುಂಡ ಭಾಗದಲ್ಲಿ ಈ ಪ್ರಯೋಗ ಮೊದಲು ಆರಂಭವಾಗಲಿದೆ. ಜ.19ರಂದು ಪೆಟ್ಟಿಗೆ ಅಳವಡಿಕೆಗೆ ಚಾಲನೆ, ಪರದೆಯ ಮೂಲಕ ಪ್ರಾತ್ಯಕ್ಷತೆ ಇರಲಿದೆ. ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಮನೋಜ್ ಕುಮಾರ್ ಇವರು ಚಾಲನೆ ನೀಡಲಿದ್ದಾರೆ ಎಂದು ಕೃಷಿಕರಾದ ಡಿ.ಸಿ.ಬಾಲಚಂದ್ರ ತಿಳಿಸಿದ್ದಾರೆ. ಯಾಜನೆಯ ಬಗ್ಗೆ ಮಾಹಿತಿ ನೀಡಿರುವ ಜೇನು ವ್ಯವಸಾಯಗಾರರ ಸಂಘದ ಅಧ್ಯಕ್ಷ ಚಂದ್ರ ಕೋಲ್ಚಾರ್
ಈ ರೀತಿಯ ಹೊಸತೊಂದು ಮಾದರಿ ಪ್ರಾಯೋಗಿಕವಾಗಿ ಮಾಡಲಾಗುತ್ತದೆ.ರಾಜ್ಯದಲ್ಲಿಯೇ ಈ ರೀತಿಯ ಹೊಸ ಪ್ರಯೋಗ ಮೊದಲ ಬಾರಿಗೆ ನಡೆಸಲಾಗುತ್ತಿದೆ. ಇದೊಂದು ಪ್ರಾಯೋಗಿಕ ಯೋಜನೆಯಾಗಿದೆ ಎಂದು ಹೇಳುತ್ತಾರೆ.

ಆನೆ ಹಾವಳಿ ತಡೆಗೆ ಶಾಶ್ವತ ಪರಿಹಾರ ಮರೀಚಿಕೆ:
ಕಳೆದ ಒಂದು ದಶಕಗಳಿಂದ ಈಚೆಗೆ ಸುಳ್ಯ ತಾಲೂಕಿನ ಹಲವು ಗ್ರಾಮಗಳಲ್ಲಿ ಕಾಡಾನೆ ಹಾವಳಿ ತೀವ್ರವಾಗಿದೆ. ಮಂಡೆಕೋಲು, ಅಜ್ಜಾವರ, ಆಲೆಟ್ಟಿ, ಸಂಪಾಜೆ ಹೀಗೆ ಹಲವು ಗ್ರಾಮಗಳು ಕಾಡಾನೆ ಹಾವಳಿಯಿಂದ ನಲುಗಿ ಹೋಗಿದೆ. ಆನೆ ಹಾವಳಿ ತಡೆಯಲು ಹಲವಾರು ಯೋಜನೆಗಳನ್ನು ಜಾರಿ ಮಾಡಿದರೂ ಯಾವುದೂ ನಿರೀಕ್ಷಿತ ಫಲಿತಾಂಶ ನೀಡಿಲ್ಲ. ಆನೆ ಕಂದಕ,ಸೋಲಾರ್ ಬೇಲಿ ಅಳವಡಿಕೆ, ಆನೆ ಬರುವ ದಾರಿಗೆ ಸಿಮೆಂಟ್ ಸ್ಲಾಬ್ಗಳ ಅಳವಡಿಕೆ ಹೀಗೆ ಅರಣ್ಯ ಇಲಾಖೆ, ಸರಕಾರ ಹಲವು ಯೋಜನೆಗಳನ್ನು ಜಾರಿ ಮಾಡಿದರೂ ಇದರಿಂದ ಆನೆ ಹಾವಳಿ ತಡೆಯಲು ಸಾಧ್ಯವಾಗಿಲ್ಲ. ಇದೀಗ ಜೇನು ಪೆಟ್ಟಿಗೆ ಇರಿಸುವ ಸರಳ ಪ್ರಯೋಗಕ್ಕೆ ನಡೆಸುವ ಯೋಜನೆ ರೂಪಿಸಲಾಗಿದೆ. ಜೇನು ಕೃಷಿ ಆದಾಯದ ಜೊತೆಗೆ ಆನೆಗಳ ಹಾವಳಿ ತಪ್ಪಿದರೆ ಇದೊಂದು ವರದಾನವಾಗಲಿದೆ ಎಂಬುದು ಕೃಷಿಕರ ನಿರೀಕ್ಷೆ.