ಚೆನ್ನೈ:ಬಿಗು ಬೌಲಿಂಗ್ ದಾಳಿ ಸಂಘಟಿಸಿದ ಭಾರತೀಯ ಬೌಲರ್ಗಳು ಏಕದಿನ ವಿಶ್ವಕಪ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಸಾಧಾರಣ ಮೊತ್ತಕ್ಕೆ ನಿಯಂತ್ರಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ಭಾರತದ ಗೆಲುವಿಗೆ 200 ರನ್ಗಳ ಸಾಧಾರಣ ಗುರಿ ನೀಡಿದೆ. ನಾಯಕ ಪ್ಯಾಟ್ ಕಮಿನ್ಸ್ ಮೊದಲು ಬ್ಯಾಟಿಂಗ್ ಆಯ್ದುಕೊಂಡ ನಿರ್ಧಾರ ಅವರಿಗೆ ಆಘಾತ ನೀಡಿತು. ಟೀಂ ಇಂಡಿಯಾದ ಬೌಲರ್ಗಳ
ಸಂಘಟಿತ ದಾಳಿಗೆ ಸಿಲುಕಿದ ಆಸೀಸ್ 49.3 ಓವರ್ಗಳಲ್ಲಿ 199 ರನ್ಗೆ ಆಲೌಟ್ ಆಯಿತು. ಆರಂಭಿಕ ಬ್ಯಾಟರ್ ಮಿಚೆಲ್ ಮಾರ್ಸ್ ಶೂನ್ಯ ರನ್ಗೆ ಬೂಮ್ರಾ ಬೌಲಿಂಗ್ನಲ್ಲಿ ಕೊಹ್ಲಿಗೆ ಕ್ಯಾಚ್ ನೀಡಿ ಮರಳಿದರು. ಡೇವಿಡ್ ವಾರ್ನರ್ ಮತ್ತು ಸ್ಟೀವನ್ ಸ್ಮಿತ್ ಎರಡನೇ ವಿಕೆಟ್ಗೆ 69 ರನ್ಗಳ ಜೊತೆಯಾಟ ನೀಡಿ ಸ್ವಲ್ಪ ಚೇತರಿಕೆ ನೀಡಿದರು. ಆದರೆ ಸ್ಕೋರಿಂಗ್ಗೆ ವೇಗ ಹೆಚ್ಚಲಿಲ್ಲ.ಬಳಿಕ ದಾಳಿಗಿಳಿದ ಆಲ್ರೌಂಡರ್ ರವೀಂದ್ರ ಜಡೇಜಾ ಸ್ಪಿನ್ ಬೌಲಿಂಗ್ ಮುಂದೆ ಆಸ್ಟ್ರೇಲಿಯಾ ಅಕ್ಷರಷಃ ತತ್ತರಿಸಿತು. ಜಡೇಜ ಪ್ರಮುಖ ಮೂರು ವಿಕೆಟ್ಗಳನ್ನು ಕಬಳಿಸಿ ಆಸ್ಟ್ರೇಲಿಯಾ ಬ್ಯಾಟಿಂಗ್ನ ಬೆಮ್ಮೆಲುಬು ಮುರಿದರು.
ಡೇವಿಡ್ ವಾರ್ನರ್ 41 ರನ್ ಗಳಿಸಿ ನಿರ್ಗಮಿಸಿದರು. ಸ್ಟೀವ್ ಸ್ಮಿತ್ 46 ರನ್ ಗಳಿಸಿದರೆ ಮಾರ್ನುಸ್ ಲಬುಶೇನ್ 27 ರನ್ ಗಳಿಸಿದರು. ಅಲೆಕ್ಸ್ ಕ್ಯಾರಿ ಕೂಡ ಶೂನ್ಯ ಸುತ್ತಿ ನಡೆದರು. ಗ್ಲೆನ್ ಮ್ಯಾಕ್ಸವೆಲ್ 15 ರನ್ ಗಳಿಸಿದರೆ, ಕ್ಯಾಮರೂನ್ ಗ್ರೀನ್ 8 ರನ್ ಮತ್ತು ಪ್ಯಾಟ್ ಕಮಿನ್ಸ್ 15 ರನ್, ಮಿಚೆಲ್ ಸ್ಟಾರ್ಕ್ 28 ರನ್ ಗಳಿಸಿ ಪೆವಿಲಿಯನ್ಗೆ ಮರಳಿದರು. ಸ್ಮಿತ್, ಮಾರ್ನೂಸ್ ಲಬುಶೇನ್, ಅಲೆಕ್ಸ್ ಕ್ಯಾರಿ ವಿಕೆಟ್ ಉರುಳಿಸಿದ ಜಡೇಜ ಆಸ್ಟ್ರೇಲಿಯಾಕ್ಕೆ ಶಾಕ್ ನೀಡಿದರು. ಡೇವಿಡ್ ವಾರ್ನರ್ ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ಗೆ ಕುಲ್ದೀಪ್ ಯಾದವ್ ಪೆವಿಲಿಯನ್ ಹಾದಿ ತೋರಿಸಿದರು. ಜಸ್ಪ್ರೀತ್ ಬೂಮ್ರಾ ಅವರು ಮಿಚೆಲ್ ಮಾರ್ಷ್ ಹಾಗೂ ಪ್ಯಾಟ್ ಕಮಿನ್ಸ್ ವಿಕೆಟ್ ಕಬಳಿಸಿದರು. ಕ್ಯಾಮರೂನ್ ಗ್ರೀನ್ ವಿಕೆಟ್ ಅಶ್ವಿನ್ ಪಾಲಾಯಿತು. ಒಟ್ಟಿನಲ್ಲಿ ರವೀಂದ್ರ ಜಡೇಜ 3 ವಿಕೆಟ್ ಉರುಳಿಸಿದರೆ, ಬುಮ್ರಾ, ಕುಲ್ದೀಪ್ ಯಾದವ್ ತಲಾ ಎರಡು ವಿಕೆಟ್ , ಅಶ್ವಿನ್, ಹಾರ್ದಿಕ್ ಪಾಂಡ್ಯ, ಮಹಮ್ಮದ್ ಸಿರಾಜ್ ತಲಾ ಒಂದು ವಿಕೆಟ್ ಪಡೆದರು.