ಮಡಿಕೇರಿ:ಐನ್ಮನೆ ಸಂಸ್ಕೃತಿ, ಸಂಪ್ರದಾಯ ಮತ್ತು ಸಂಸ್ಕಾರವನ್ನು ಉಳಿಸಿ ಬೆಳೆಸುವಲ್ಲಿ ಅರೆ ಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮೂಲಕ ದಾಖಲೀಕರಣ ಮಾಡುವಂತಾಗಬೇಕು ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂತರ್ಗೌಡ ಹೇಳಿದ್ದಾರೆ. ಅರೆ ಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಮಕ್ಕಂದೂರು ಗ್ರಾಮದ ಕುಂಭಗೌಡನ ಐನ್ಮನೆಯಲ್ಲಿ ಶನಿವಾರ ನಡೆದ
ಅರೆ ಭಾಷಿಕರ ‘ಐನ್ಮನೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಕುಂಭ ಗೌಡನ ಕುಟುಂಬಕ್ಕೆ ಐತಿಹಾಸಿಕ ಹಿನ್ನೆಲೆ ಇದ್ದು, ಅದನ್ನು ಸಂರಕ್ಷಿಸುವಂತಾಗಬೇಕು. ಪ್ರಾಚೀನ ಹಾಗೂ ಐತಿಹಾಸಿಕ ಐನ್ಮನೆ ಸಂಸ್ಕೃತಿಯನ್ನು ಉಳಿಸಿ ಬೆಳೆಸಿದಾಗ ನಾಡಿನ ಸಂಸ್ಕೃತಿ ಉಳಿಯಲು ಸಾಧ್ಯ. ಆ ನಿಟ್ಟಿನಲ್ಲಿ ಅರೆ ಭಾಷಿಕರ ಐನ್ಮನೆ ಕಾರ್ಯಕ್ರಮ ಹಮ್ಮಿಕೊಂಡಿರುವುದು ವಿಶೇಷವಾಗಿದೆ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯರಾದ ಶಾಂತೆಯಂಡ ವೀಣಾ ಅಚ್ಚಯ್ಯ ಮಾತನಾಡಿ ಅರೆ ಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಶ್ರೀಮಂತಿಕೆಯಿಂದ ಕೂಡಿದ್ದು, ಇದನ್ನು ಉಳಿಸಬೇಕು. ಕೊಡಗಿನ ಎಲ್ಲರೂ ಒಟ್ಟುಗೂಡಿದಾಗ ಸಮಾಜವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಸಾಧ್ಯ ಎಂದರು.
ಕರ್ನಾಟಕ ಅರೆ ಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಮಾತನಾಡಿ, ಅರೆ ಭಾಷೆ ಸಂಸ್ಕೃತಿ, ಸಂಸ್ಕಾರ ಕಲಿಸಲು ಐನ್ಮನೆ ಜಂಬರ ಸಹಕಾರಿಯಾಗಿದೆ. ಅರೆ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಕಡೆಗಳಲ್ಲಿ ಕಾರ್ಯಕ್ರಮಗಳನ್ನು
ಆಯೋಜಿಸಲಾಗುತ್ತಿದೆ ಎಂದರು.

ಶಿವಮೊಗ್ಗ ಅಬಕಾರಿ ಉಪ ಆಯುಕ್ತರಾದ ಸುಮಿತಾ ಕುಂಭಗೌಡ,ಮಕ್ಕಂದೂರು ವ್ಯವಸ್ಥಾಯ ಸಹಕಾರ ಸಂಘದ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ ಮಾತನಾಡಿದರು. ಅರೆ
ಭಾಷೆ ಕುಟುಂಬಗಳ ಐನ್ ಮನೆ ಕುರಿತು ಎ.ಕೆ.ಹಿಮಕರ ಮಾತನಾಡಿದರು. ಅರೆ ಭಾಷೆ ಸುಪ್ರಭಾತ ಸಿಡಿಯನ್ನು ಕೃಷಿಕರಾದ ಇಂದಿರಾ ದೇವಿ ಪ್ರಸಾದ್ ಸಂಪಾಜೆ ಬಿಡುಗಡೆ ಮಾಡಿದರು. ಕುಂಭಗೌಡನ ಕುಟುಂಬ ಲಾಂಛನವನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಸಾಧಕರನ್ನು ಸನ್ಮಾನಿಸಲಾಯಿತು. ಜಯಪ್ರಕಾಶ್ ಪೆರುಮುಂಡ ಮತ್ತು ತಂಡದವರಿಂದ ಅರೆ ಭಾಷೆ ಹಾಡುಗಳ ಗಾಯನ ರಂಜಿಸಿತು. ಆರ್ಜೆ ತ್ರಿಶೂಲ್ ಕಂಬಳನೊಟ್ಟಿಗೆ ನೀವು, ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಕುಂಭಗೌಡನ ಪಟ್ಟಿದಾರರಾದ ಕೆ.ಕೆ. ಓಂಕಾರಪ್ಪ, ಮಕ್ಕಂದೂರು ಗ್ರಾ.ಪಂ. ಅಧ್ಯಕ್ಷರಾದ ಬಿ.ಎನ್. ರಮೇಶ್, ಆನಂದ್ ಕರಂದ್ಲಾಜೆ, ಕೊಡಗು ಏಲಕ್ಕಿ ಮಾರಾಟ ಸಹಕಾರ ಸಂಘದ ನಿರ್ದೇಶಕರಾದ ಕೋಳುಮುಡಿಯನ ಅನಂತ ಕುಮಾರ್, ಮಕ್ಕಂದೂರು ಗೌಡ ಸಮಾಜದ ಅಧ್ಯಕ್ಷರಾದ ಲಕ್ಕಪ್ಪನ ಕೆ. ಹರೀಶ್, ಕಾರ್ಯಕ್ರಮ ಸಂಚಾಲಕರು ಹಾಗೂ ಅಕಾಡೆಮಿ ಸದಸ್ಯರಾದ ಸೂದನ ಎಸ್. ಈರಪ್ಪ, ಅಕಾಡೆಮಿ ಸದಸ್ಯರು ಇದ್ದರು.