ಸುಳ್ಯ: ಸಾಮಾನ್ಯರಲ್ಲಿ ಸಾಮಾನ್ಯರಾದ ಕಾರ್ಯಕರ್ತೆಯನ್ನು ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಿರುವುದು ಬಿಜೆಪಿಯ ಹೆಮ್ಮೆ. ಸಾಮನ್ಯ ಕಾರ್ಯಕರ್ತೆಯಾದ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಅವರನ್ನು ದಾಖಲೆಯ ಅಂತರದಲ್ಲಿ ಗೆಲ್ಲಿಸಲು ಎಲ್ಲಾ ಕಾರ್ಯಕರ್ತರು ಪಣ ತೊಡಬೇಕು ಎಂದು ಬಿಜೆಪಿ ತಮಿಳುನಾಡು ಘಟಕದ ಅಧ್ಯಕ್ಷ ಹಾಗು ರಾಜ್ಯ ಬಿಜೆಪಿ ಚುನಾವಣಾ ಸಹ ಪ್ರಭಾರಿ ಕೆ.ಅಣ್ಣಾಮಲೈ ಹೇಳಿದ್ದಾರೆ. ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಅವರ ನಾಮಪತ್ರ ಸಲ್ಲಿಕೆಯ
ಸಂದರ್ಭದಲ್ಲಿ ನಡೆದ ಬೃಹತ್ ಮೆರವಣಿಗೆಯಲ್ಲಿ ನೆರೆದ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು. ಬಿಜೆಪಿಗೆ ಹಲವಾರು ನಾಯಕರನ್ನು ಕೊಟ್ಟ, ಸಾವಿರಾರು ಕಾರ್ಯಕರ್ತರನ್ನು ಬೆಳೆಸಿದ ಕ್ಷೇತ್ರ ಸುಳ್ಯ.ಆದುದರಿಂದ ಸುಳ್ಯದಲ್ಲಿ ಅತೀ ಹೆಚ್ಚಿನ ಅಂತರದ ಗೆಲುವು ಆಗಬೇಕು. ಅದಕ್ಕಾಗಿ ಕಾರ್ಯಕರ್ತರು ಮನೆ ಮನೆ ತೆರಳಿ ಪ್ರಚಾರ ಮಾಡವೇಕು. ಕೇಂದ್ರ ಹಾಗು ರಾಜ್ಯ ಸರಕಾರದ ಸಾಧನೆಯನ್ನು ಮನೆ ಮನೆ ತಲುಪಿಸಬೇಕು ಎಂದರು. ಸುಳ್ಯದ ತಮಿಳು ಬಾಂಧವರು ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಅವರು ಕರೆ ನೀಡಿದರು. ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ,ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಸಚಿವ ಎಸ್.ಅಂಗಾರ, ಬಿಜೆಪಿ ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಮತ್ತಿತರರು ಮುಖಂಡರು ಉಪಸ್ಥಿತರಿದ್ದರು.