ಸುಳ್ಯ: ವಿಧಾನ ಸಭಾಕ ಚುನಾವಣೆಯಲ್ಲಿ ಕೆಪಿಸಿಸಿ ಸದಸ್ಯ ಹಾಗು ಕಡಬ ಬ್ಲಾಕ್ ಕಾಂಗ್ರೆಸ್ ಉಸ್ತುವಾರಿ ಹೆಚ್.ಎಂ.ನಂದಕುಮಾರ್ ಅವರು ಸ್ಪರ್ಧೆ ಮಾಡುವುದಿಲ್ಲ. ಕಾಂಗ್ರೆಸ್ ಟಿಕೆಟ್ ಸಿಗದ ಹಿನ್ನಲೆಯಲ್ಲಿ ನಂದಕುಮಾರ್ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ನಡೆಸುವುದಾಗಿ ಹೇಳಲಾಗಿದ್ದರೂ ಅವರು ಚುನಾವಣಾ ಕಣದಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ. ನಂದಕುಮಾರ್ ಅಭಿಮಾನಿ ಬಳಗದ ಕೋರ್ ಕಮಿಟಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ನಂದಕುಮಾರ್ ಬೆಂಬಲಿಗರಾದ
ಅಭಿಮಾನಿ ಬಳಗ ಚುನಾವಣಾ ಕಣದಲ್ಲಿ ತಟಸ್ಥರಾಗಿ ಇರಲು ನಿರ್ಧರಿಸಲಾಗಿದೆ. ಚುನಾವಣಾ ಕಣದಿಂದ ಹಿಂದೆ ಸರಿಯಲು ನಿರ್ಧರಿಸಲಾಗಿದೆ ಎಂದು ನಂದಕುಮಾರ್ ತಿಳಿಸಿದ್ದಾರೆ. ಪಕ್ಷೇತರರಾಗಿ ಸ್ಪರ್ಧೆ ಮಾಡದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸೂಚನೆ ನೀಡಿದ ಹಿನ್ನಲೆಯಲ್ಲಿ ಅವರ ಮಾತಿಗೆ ಬೆಲೆ ಕೊಟ್ಟು ಚುನಾವಣಾ ಕಣದಿಂದ ಹಿಂದೆ ಸರಿಯುತ್ತಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದರು.
ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ತಪ್ಪಿದರೂ ಹೆಚ್ ಎಂ ನಂದಕುಮಾರ್ ಅವರಿಗೆ ಬಿ ಫಾರಂ ಸಿಗಬೇಕು ಎಂದು ಹೈಕಮಾಂಡ್ ಬಳಿ ಬೇಡಿಕೆ ಇಟ್ಟು ಹೋರಾಟ ಮಾಡಿದ್ದೇವೆ. ಆದರೆ ಕೊನೆಯವರೆಗೆ ನಾವೆಲ್ಲರೂ ಬದಲಾವಣೆಯ ನಿರೀಕ್ಷೆಯಲ್ಲಿದ್ದೆವು.ಆದರೆ ಬಿ ಫಾರಂ ಕೈ ತಪ್ಪಿದೆ.
ಈ ಹಿನ್ನೆಲೆಯಲ್ಲಿ ಈ ಬಾರಿಯ ವಿಧಾನಸಭಾ ಚುನಾವಣೆಯ ಪಕ್ಷದ ಚಟುವಟಿಕೆಯಲ್ಲಿ ಪಾಲ್ಗೊಲ್ಲದೆ ತಟಸ್ಥರಾಗಿ ಉಳಿಯುವ ನಿರ್ಣಯಕ್ಕೆ ಬಂದಿರುತ್ತೇವೆ ಎಂದು ನಂದಕುಮಾರ್ ಅಭಿಮಾನಿ ಬಳಗದ ಪ್ರಕಟಣೆ ತಿಳಿಸಿದೆ.