ಸುಬ್ರಹ್ಮಣ್ಯ: ಜೆಡಿಎಸ್ ಈ ಬಾರಿ ಮಹತ್ವಾಕಾಂಕ್ಷಿ ಯೋಜನೆಗಳನ್ನು ಇರಿಸಿಕೊಂಡು ಚುನಾವಣೆಗೆ ಧುಮುಕಿದೆ.ಪಕ್ಷದ ರಾಜ್ಯಾಧ್ಯಕ್ಷರಾದ ಕುಮಾಸ್ವಾಮಿ ಅವರು ಪಂಚರತ್ನ ಯಾತ್ರೆ ಮೂಲಕ ಹಳ್ಳಿ ಹಳ್ಳಿಗೂ ತೆರಳಿ ಮತದಾರರ ಮನದಾಳ ಅರಿತಿದ್ದಾರೆ. ಜನತೆಯ ಆಶೋತ್ತರ ಈಡೇರಿಕೆಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ನಮ್ಮ ಸರಕಾರ ಬಂದರೆ ನೀಡಲಾಗುವುದು. ಜನತೆಯ ಅಭಿವೃದ್ಧಿಗೆ ಬೇಕಾದ ಪಂಚ ಯೋಜನೆಗಳನ್ನು ನುಷ್ಠಾನಗೊಳಿಸಲಾಗುವುದು ಎಂಬ ಭರವಸೆಯನ್ನು
ನೀಡಿದ್ದೇವೆ. ಈ ಹಿನ್ನಲೆಯಲ್ಲಿ ಈ ಬಾರಿ 120 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲುವು ಸಾಧಿಸಿ ಅಧಿಕಾರಕ್ಕೆ ಬರಲಿದೆ ಎಂದು ಯುವ ಜನತಾದಳದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಮಂಗಳವಾರ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.ಕಳೆದ ಎರಡು ಅವಧಿಯಲ್ಲಿ ಮುಖ್ಯಮಂತ್ರಿಗಳಾಗಿ ಕುಮಾರಸ್ವಾಮಿ ಅವರು ಈಡೇರಿಸಿದ ಜನಹಿತ ಕಾರ್ಯಗಳು ಜನತೆಯ ಮುಂದಿರಿಸಿದ್ದೇವೆ.ಈ ಕಾರ್ಯಗಳನ್ನು ಮುಂದುವರೆಸುವ ನಿಟ್ಟಿನಲ್ಲಿ ಈ ಬಾರಿ ಕರ್ನಾಟಕದ ಜನತೆ ಜೆಡಿಎಸ್ಗೆ ಅಭೂತಪೂರ್ವ ಬೆಂಬಲ ನೀಡುತ್ತಾರೆ ಎಂಬ ವಿಶ್ವಾಸ ಇದೆ ಎಂದರು.
ದೇಶದಲ್ಲಿ ಮತ್ತು ರಾಷ್ಟ್ರದಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಆಡಳಿತ ನಡೆಸಲು ಅವಕಾಶ ಮಾಡಿ ಕೊಟ್ಟಿದ್ದಾರೆ.ಆದರೆ ಪ್ರಾದೇಶಿಕ ಪಕ್ಷವಾದ ಜೆಡಿಎಸ್ಗೆ ಸ್ವಂತ ಬಲದಲ್ಲಿ ಸರಕಾರ ನಡೆಸಲು ಈ ಬಾರಿ ಈ ಅವಕಾಶವನ್ನು ಜನತೆ ಮಾಡಿಕೊಡುತ್ತಾರೆ ಎಂಬ ಆಶಾವಾದ ನಮ್ಮದು ಎಂದರು.ಈ ಸಂದರ್ಭ ಜೆಡಿಎಸ್ ರಾಜ್ಯ ವಕ್ತಾರ ಎಂ.ಬಿ.ಸದಾಶಿವ, ಸುಬ್ರಹ್ಮಣ್ಯ ಘಟಕದ ಅಧ್ಯಕ್ಷ ಕಿಶೋರ್ ಅರಂಪಾಡಿ, ಪ್ರಮುಖರಾದ ಕೇನ್ಯ ರವೀಂದ್ರನಾಥ ಶೆಟ್ಟಿ, ಡಾ.ತಿಲಕ್ ಎ.ಎ, ದುಗ್ಗಪ್ಪ ಎಚ್, ಚಂದ್ರಶೇಖರ್ ಚೆನ್ನಕಜೆ, ಜ್ಯೋತಿ ಪ್ರೇಮಾನಂದ, ಎಂ.ಪಿ.ದಿನೇಶ್ ಮಾಸ್ಟರ್ ಉಪಸ್ಥಿತರಿದ್ದರು. ಕುಕ್ಕೆ ದೇವಳಕ್ಕೆ ಭೇಟಿ ನೀಡಿದ ಯುವ ಜನತಾದಳದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಶ್ರೀ ದೇವರ ದರುಶನ ಪಡೆದು ಪ್ರಸಾದ ಸ್ವೀಕರಿಸಿದರು.ನಂತರ ದೇವಳದ ಆಡಳಿತ ಕಚೇರಿಗೆ ಆಗಮಿಸಿದ ನಿಖಿಲ್ ಕುಮಾರಸ್ವಾಮಿ ಅವರಿಗೆ ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ ಶಾಲು ಹೊದಿಸಿ ಶ್ರೀ ದೇವರ ಪ್ರಸಾದ ನೀಡಿ ಗೌರವಿಸಿದರು.ಈ ಸಂದರ್ಭ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವನಜಾ.ವಿ.ಭಟ್ ಮತ್ತು ಶೋಭಾ ಗಿರಿಧರ್ ಉಪಸ್ಥಿತರಿದ್ದರು.