*ಡಾ. ಸುಂದರ ಕೇನಾಜೆ.
ಎರಡು ಘಟನೆಗಳನ್ನು ನೆನಪಿಸುತ್ತಾ ವಿವರಿಸುವ ವಿಷಯ ಇಲ್ಲಿಯದು. ಇದು ವರ್ಷದ ಹಿಂದಿನ ಫೋನ್ ಸಂಭಾಷಣೆ, “ನಮ್ಮ ಇಂತಹಾ ಅಂತರಾಷ್ಟ್ರೀಯ ಸಂಸ್ಥೆ ನಿಮ್ಮನ್ನು ಇಂತಹಾ ಪ್ರತಿಷ್ಠಿತ ಪ್ರಶಸ್ತಿಯೊಂದಕ್ಕೆ ಆಯ್ಕೆ ಮಾಡಿದೆ. ಕಾರ್ಯಕ್ರಮ ಬೆಂಗಳೂರಿನ ಕಲಾ ಕ್ಷೇತ್ರದಲ್ಲಿ ಮುಂದಿನ ತಿಂಗಳು ನಡೆಯಲಿದೆ. ಕಾರ್ಯಕ್ರಮದಲ್ಲಿ ಜನಪ್ರಿಯ ನಟರು, ರಾಜಕಾರಣಿಗಳು, ಸ್ವಾಮೀಜಿಗಳು ಹಾಗೂ ಸಾಹಿತಿಗಳು ಭಾಗವಹಿಸಲಿದ್ದಾರೆ. ನೀವು ಬರಲೇಬೇಕು, ಪ್ರಶಸ್ತಿ ಸ್ವೀಕರಿಸಬೇಕು” ಎಂದು ಆರಂಭಿಸಿದ. ಒಂದೊಮ್ಮೆಗೆ ವಿಚಲಿತಗೊಂಡರೂ
ಸುಧಾರಿಸಿ, “ಅಲ್ಲ, ನೀವು ಯಾರಿಗೆ ಕರೆ ಮಾಡಿದ್ದೀರಿ? ನಂಬರ್ ಏನಾದರೂ ತಪ್ಪಿತೋ?” ಎಂದು ಕೇಳಿದೆ. “ಇಲ್ಲ…ಇಲ್ಲಾ.. ನೀವೇ… ಸಾಹಿತ್ಯ ಮತ್ತು ಸಂಘಟನಾ ಕ್ಷೇತ್ರದಲ್ಲಿ ಗುರುತಿಸಿ ನಿಮ್ಮನ್ನೇ ಆಯ್ಕೆ ಮಾಡಿದ್ದೇವೆ” ಎಂದಿತು ಆ ಕಡೆಯ ಉತ್ತರ. “ಓ.. ಹೌದಾ… ಇರಲಿ…., ಹೇಗೆ ನಿಮ್ಮೆಲ್ಲಾ ವ್ಯವಸ್ಥೆಗಳು?” ಎಂದು ಮತ್ತೆ ಕೇಳಿದೆ. ಆ ಪುಣ್ಯಾತ್ಮನಿಗೆ ಅರ್ಥವಾಗದಯೋ ಅಥವಾ ಮಾಮೂಲು ಕುದುರುವ ಲಕ್ಷಣ ಕಂಡೋ ಹೆಚ್ಚಿನ ಉತ್ಸಾಹದಿಂದ, “ಏನಿಲ್ಲ ಸರ್… ನಮ್ಮ ಸಂಸ್ಥೆಗೆ ಕರ್ನಾಟಕದಲ್ಲಿ ಒಳ್ಳೆಯ ಹೆಸರಿದೆ. ಪ್ರತೀ ವರ್ಷ ಅನೇಕ ಕಾರ್ಯಕ್ರಮ ನಡೆಸುತ್ತೇವೆ. ಈ ಬಾರಿ ನಾವು ಬೇರೇಬೇರೆ ಕ್ಷೇತ್ರದ ೧೦ ಜನರನ್ನು ಈ ಅಂತರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಮಾಡಿದ್ದೇವೆ. ಕೊರೋನಾ ನಂತರದ ಈ ವರ್ಷ ಅದ್ದೂರಿ ಸ್ವಲ್ಪ ಹೆಚ್ಚೇ, ಹಾಗೇ ಖರ್ಚು ಕೂಡ. ಹಾಗಾಗಿ ಹೋಗಿ ಬರುವ ಖರ್ಚೆಲ್ಲಾ ನೀವುನೀವೇ ನೋಡಿಕೊಳ್ಳಬೇಕು, ಮತ್ತೆ ಗೊತ್ತಲ್ಲಾ ಸಾರ್.. ಬೆಂಗ್ಳೂರಲ್ಲಿ ಕಾರ್ಯಕ್ರಮ ಸಂಘಟಿಸುವುದರ ಹಿಂದಿನ ಕಷ್ಟ-ನಷ್ಟ…, ಖರ್ಚಿಗೆ ಅಂತ ಉಳಿದ ಒಂಬತ್ತು ಜನ ಒಂದಿಪ್ಪತ್ತರಂತೆ ಕೊಡುತ್ತೇವೆ ಅಂತ ಅವರಾಗಿಯೇ ಒಪ್ಪಿಕೊಂಡಿದ್ದಾರೆ. ನೀವು ಸ್ವಲ್ಪ ಅಜೆಸ್ಟ್ ಮಾಡಿ ಸರ್… ಅಂದ.
ಮಿಕ ಬಲೆಗೆ ಬಿತ್ತು ಎಂಬ ಗ್ರಹಿಕೆಯಿಂದಲೋ ಏನೋ? ಇನ್ನೂ ಒಂದು ಸಂಗತಿ ಹೇಳಿದ, “ನಮ್ಮ ಸಂಸ್ಥೆ, ಈ “ಗೌರವ ಡಾ…”ದ ವ್ಯವಸ್ಥೆ ಮಾಡುತ್ತದೆ ಸಾರ್, ಅದಕ್ಕೆ ಈಗ ಕನಿಷ್ಠ ‘ಒಂದು’ ನಡೀತಾ ಇದೆ…ಯಾರಾದ್ರು ಇದ್ರೆ ಹೇಳಿ…” ಎಂದು. “ಏ… ಒಂದೆಲ್ಲಾ(ಲಕ್ಷ) ಕೊಟ್ಟು ಯಾರು ತಗೋಳ್ತಾರೆ ಮಾರಾಯರೇ?” ಎಂದೆ. “ಹಾಗಲ್ಲಾ ಸಾರ್… ಏನೂ ಹೆಸರು ಮಾಡದವರಿಗೆ, ಹೆಸರಿರುವ ವಿ.ವಿ ಯಿಂದ ಕೊಡಿಸುವುದಾದರೆ ಅಷ್ಟು. ಏನಾದರೂ ಹೆಸರು ಮಾಡಿದವರಾದರೆ, ಹೆಸರಿಲ್ಲದ ವಿ.ವಿ ಯಿಂದಾದರೆ ಕಡಿಮೆ….” ಎಂಬ ಲಾಜಿಕ್ಕೊಂದನ್ನು ಬಿಚ್ಚಿಟ್ಟ. ತಕ್ಷಣ ನನ್ನಂತವನ ರೇಟು ಎಷ್ಟಿರಬಹುದು ಎನ್ನುವ ಕುತೂಹಲ ಇಣುಕಿತಾದರೂ ಪ್ರಶ್ನೆಗಳಿಗೆ ಪ್ರಾಮಾಣಿಕ ಉತ್ತರ ನೀಡುವ ಆತನ ಮುಗ್ಧ(ಕುರುಡು) ಬದ್ಧತೆ ಕಂಡು, “ನೋಡಿ ಮೀ.. ನನಗೆ ನೀವು ಧರ್ಮಾರ್ಥ ಕೊಡುತ್ತೇನೆಂದರೂ ಈ ಅಂತರಾಷ್ಟ್ರೀಯ ಪ್ರಶಸ್ತಿಗಳಾಗಲೀ, ಡಾ….ಗಳಾಗಲಿ ಬೇಡ, ನೀವು ಈ ರೀತಿ ಜನರ ದಾರಿ ತಪ್ಪಿಸುವ ಕೆಲಸ ಮಾಡಿದ್ರೆ, ಪ್ರಾಮಾಣಿಕ ಪ್ರಶಸ್ತಿ, ಪುರಸ್ಕಾರಗಳ ಮೌಲ್ಯ ಕಳೆದು ಹೋಗುತ್ತದೆ” ಎಂದು ಹೇಳುತ್ತಿದ್ದಂತೆ ಆತ ಚೌಕಾಸಿಗಿಳಿದ. ಈ ಸಂಭಾಷಣೆಯೇ ಹೇಸಿಗೆಯಂತೆ ಕಂಡು ಕರೆ ಕಡಿತಗೊಳಿಸಿದೆ.
ಇನ್ನೊಂದು ಕೆಲವು ದಿನಗಳ ಹಿಂದಿನ ಸಂಗತಿ, ವ್ಯಕ್ತಿಯೋರ್ವರಿಗೆ ಅಕಾಡೆಮಿಯ ಪ್ರಶಸ್ತಿಯೊಂದು ಸಹಜವಾಗಿಯೇ ಬಂತು. ಆದರೆ ಹೆಚ್ಚುಕಡಿಮೆ ಒಂದು ತಿಂಗಳ ಕಾಲ ತನಗೆ ಸಿಕ್ಕ ಪ್ರಶಸ್ತಿಯ ಸಮಸ್ತ ಪರಿಕರಗಳನ್ನು ಚೀಲವೊಂದರಲ್ಲಿ ಹಾಕಿ, ದಿನಾ ದಾರಿಯಲ್ಲಿ ಸಿಗುವವರಿಗೆ ವಿವರಿಸುತ್ತಾ ತನಗೆ ನಿಧಿ ಸಿಕ್ಕಂತೆ ವರ್ತಿಸಿದರು. ಅಷ್ಟಕ್ಕೇ ಬಿಡದೇ ಅಲ್ಲಿಇಲ್ಲಿ ಅವರಿವರನ್ನು ಒತ್ತಾಯಿಸಿ ಅಭಿನಂದನಾ ಸಮಾರಂಭ(ಮರಿ ಸನ್ಮಾನ), ಪತ್ರಿಕಾ ಜಾಹೀರಾತು, ಬ್ಯಾನರ್ ಇತ್ಯಾದಿಗಳಿಂದಲೂ ವಿಜೃಂಭಿಸಿದರು. ಅಂತೂ ಪ್ರಾಮಾಣಿಕ ಪ್ರಶಸ್ತಿಯ ಗೌರವಕ್ಕಿಂತಲೂ ಹೆಚ್ಚಿನ ಗೇಲಿಗೆ ತುತ್ತಾಗಿ ಕೆಡಿಸಿಬಿಟ್ಟರು.
ಈಗ ವಿಷಯಕ್ಕೆ ಬರುವುದಾದರೆ, ಇತ್ತೀಚಿನ ಕೆಲವು ವರ್ಷಗಳಲ್ಲಿ ವಿಪರೀತವಾಗಿ ಕಾಣುತ್ತಿರುವ ವ್ಯವಸ್ಥಿತ ದಂಧೆ ಈ ಪ್ರಶಸ್ತಿ, ಪುರಸ್ಕಾರ, ಸನ್ಮಾನ, ಬಿರುದು ಮತ್ತು ಡಾ… ವಿತರಣೆ. ಮೇಲಿನ ಆಸಾಮಿಗಳ ವ್ಯವಹಾರಕ್ಕೆ ಕೈಜೋಡಿಸುವ ಅಪರಾಧವಲ್ಲದೇ ವಿಪರೀತ ಫೋಟೋ, ವರದಿ, ಅಲ್ಲಿಇಲ್ಲಿ ಅಭಿನಂದನೆ, ಬ್ಯಾನರ್ ಇತ್ಯಾದಿ ಪ್ರಾರಬ್ಧಗಳನ್ನೂ ಕಾಣುತ್ತಿದ್ದೇವೆ. ಪ್ರಜ್ಞಾವಂತರಿಗೆ ಮುಜುಗರವಾಗುವಂತಹಾ ವಿಚಿತ್ರ ಹೆಸರುಗಳ ಈ ಪ್ರಶಸ್ತಿಗಳನ್ನು ಕ್ಯೂ ನಿಂತು ಪಡೆಯುವವರ ಸಂಖ್ಯೆಯೂ ಹೆಚ್ಚುತ್ತಿದೆ. ಹಾಗೆಂದು ಈ ನಾಡಿನ ಅಧಿಕೃತ ಕೆಲವು ಪ್ರತಿಷ್ಠಿತ ಪ್ರಶಸ್ತಿಗಳ ಆಯ್ಕೆಯ ವಿಧಾನವೂ ಇದಕ್ಕಿಂತ ಭಿನ್ನವೇನೂ ಇಲ್ಲ. ಪುಟಗಟ್ಟಲೆ ಸ್ವವಿವರದ ಅರ್ಜಿ ಹಾಕಿಸುವ, ವಸೂಲಿ ಬಾಜಿಗೆ ಅವಕಾಶ ನೀಡುವ, ಯಾರ್ಯಾರನ್ನೋ ಓಲೈಸಲು ಓಡಾಡಿಸುವ, ಕೊಟ್ಟವರಿಗೇ ಮತ್ತೆಮತ್ತೆ ಕೊಡುವ, ಆಯ್ಕೆ ಸಮಿತಿಗಳ ಮಧ್ಯೇ ಜಟಾಪಟಿ ಮಾಡಿಸುವ ಸ್ಥಿತಿ ನೋಡಿದರೆ, ಈ ಅರೆಬೆಂದವರು ವರ್ತನೆ ಹೆಚ್ಚು ಆಶ್ಚರ್ಯ ಹುಟ್ಟಿಸುವಂತದ್ದೇನೂ ಅಲ್ಲ.
ಒಂದು ಪ್ರತಿಷ್ಠಿತ ಪ್ರಶಸ್ತಿ ಎಂದರೆ ಅದಕ್ಕೆ ಅದರದೇ ಆದ ಮೌಲ್ಯವಿರುತ್ತದೆ. ಅದು ಸಲ್ಲಬೇಕಾದವರಿಗೆ ಸಂದಾಗ ಆ ಮೌಲ್ಯ ಘನವಾಗಿಯೂ ನಿಲ್ಲುತ್ತದೆ. ಇಲ್ಲದಿದ್ದರೆ ಅದು ಸನ್ಮಾನವಾಗುವ ಬದಲು ಅಪಮಾನವಾಗುವುದೇ ಹೆಚ್ಚು. ಅನೇಕ ಬಾರಿ ದಾಕ್ಷಿಣ್ಯಕ್ಕೋ ಪಡೆದವನ ಮೇಲಿನ ಕುರುಡು ನಂಬಿಕೆಗೋ ಬಹುಪರಾಕ್ ಹೇಳುವವರೂ ಇರುತ್ತಾರೆ. ಆದರೆ ಒಳಗಿನ ಬೇಗುದಿಯೇ ಬೇರೆ.
ಪ್ರಶಸ್ತಿ, ಪುರಸ್ಕಾರಗಳ ವಿಷಯಲ್ಲಿ ತೇಜಸ್ವಿಯಂತವರು ಎಂದೆಂದಿಗೂ ಮಾದರಿ ಹೌದು. ಹಾಗೆಂದು ಅವರಷ್ಟು ನಿಷ್ಠುರವಾಗಿರಬೇಕೆಂಬ ತಾತ್ಪರ್ಯ ಇಲ್ಲಿಯದಲ್ಲ. ತಾನು ಮಾಡಿದ ನಿಸ್ವಾರ್ಥ ಕೆಲಸವನ್ನು ಗುರುತಿಸಿ, ಪ್ರಾಮಾಣಿಕವಾಗಿ ಸಿಗುವ ಕಾಲದಲ್ಲಿ ಪ್ರಶಸ್ತಿ, ಪುರಸ್ಕಾರಗಳು ಸಿಕ್ಕರೆ ಪಡೆಯುವುದು ತಪ್ಪಲ್ಲ. ಆ ಸಂತಸವನ್ನು ಆತ್ಮೀಯರಲ್ಲಿ ಹಂಚುವುದರಲ್ಲೂ ಆಕ್ಷೇಪಗಳಿಲ್ಲ. ಅದರ ಬದಲು ಕೆಲಸ ಮಾಡುವುದೇ ಪ್ರಶಸ್ತಿಗಾಗಿ, ಅದು ಸಿಕ್ಕ ನಂತರ ಮರೆಯಾಗುವುದು ಅಥವಾ ಸಿಕ್ಕಿದ್ದಕ್ಕಿಂತ ಹೆಚ್ಚು ಪ್ರಚಾರ, ಸನ್ಮಾನ ಪಡೆಯುವುದು, ಸಿಗುವುದಕ್ಕಾಗಿ ಇನ್ನಿಲ್ಲದ ಸರ್ಕಸ್ ನಡೆಸುವುದು, ಅನೇಕ ಬಾರಿ ಕಳಪೆ ಎನ್ನುವುದಕ್ಕೆ ಹೊಳಪು ನೀಡುವುದು ಇದು ಒಂದು ರೀತಿಯ ಅವಮಾನವೇ ಸರಿ.
ಆದ್ದರಿಂದ ಪ್ರಶಸ್ತಿ ಪುರಸ್ಕಾರಗಳು ತಮ್ಮನ್ನರಸಿ ಬಂದರೆ ಅಥವಾ ನಿಜವಾಗಿಯೂ ಸಿಗಬೇಕಿತ್ತು, ಸಿಕ್ಕಿಲ್ಲವೆಂದು ಶಿಫಾರಸ್ಸಿಗೆ ಒಳಗಾದರೆ ಪಡೆಯದೇ ಇರುವುದೂ ಅಕ್ಷಮ್ಯವೇ. ಅಂತೇ ಅರ್ಹತೆ ಇಲ್ಲದಿದ್ದರೂ ಇದೆ ಎಂದು ಭ್ರಮಿಸಿ, ಅದರ ಹಿಂದೆ ಹೋಗಿ ಅದ್ಯಾವುದೋ ಹೆಸರಿಲ್ಲದ ಹೆಸರಿನ ಪುರಸ್ಕಾರ ಪಡೆದರೆ ಅದು ತನಗೆ ತಾನೇ ಮಾಡಿಕೊಳ್ಳುವ ಮಂಗಳಾರತಿ. ಆಡುಮಾತಿನ ಈ ಮಂಗಳಾರತಿಗಿಂತ ಗರ್ಭಗುಡಿಯೊಳಗಿನದ್ದಕ್ಕೆ ಮಾತ್ರ ದೈವತ್ವ ಮತ್ತು ಮಹತ್ವ, ಅದು ಸಿಗುವಂತಾಗಬೇಕು ಇದೇ ಇಲ್ಲಿಯ ಆಶಯ.
ಡಾ.ಸುಂದರ ಕೇನಾಜೆ
(ಡಾ.ಸುಂದರ ಕೇನಾಜೆ ಜಾನಪದ ಸಂಶೋಧಕರು, ಲೇಖಕರು ಹಾಗೂ ಅಂಕಣಕಾರರು)