*ಗಣೇಶ್ ಮಾವಂಜಿ.
ಮಕ್ಕಳಿಗೆ ರಜೆ ಸಿಕ್ಕುವ ಸಮಯ ಬಂದಿದೆ. ರಜೆ ಸಿಕ್ಕಿದ ಕೂಡಲೇ ಮಕ್ಕಳನ್ನು ಸಮ್ಮರ್ ಕ್ಯಾಂಪ್ ಗೆ ಸೇರಿಸುವ ಪ್ರಕ್ರಿಯೆಗಳು ಆರಂಭಗೊಂಡಿವೆ. ಖಾಸಗಿ ಶಾಲೆಗಳು ತಮ್ಮ ಶಾಲೆಗಳಲ್ಲೇ ಕೆಲ ದಿನಗಳ ಮಟ್ಟಿಗೆ ಸಮ್ಮರ್ ಕ್ಯಾಂಪ್ ಆಯೋಜಿಸಿ ಮಕ್ಕಳಿಗೆ ಒಂದಷ್ಟು ಮನರಂಜನೆ, ಜ್ಞಾನ ವೃದ್ಧಿಗೆ ಅವಕಾಶ ನೀಡುತ್ತಿವೆ.
ದಶಕಗಳ ಹಿಂದೆ ಈ ರೀತಿಯ ಸಮ್ಮರ್ ಕ್ಯಾಂಪ್ಗಳನ್ನು ಯಾರೂ ಆಯೋಜನೆ ಮಾಡುತ್ತಿರಲಿಲ್ಲ. ಹಾಗಿದ್ದರೆ ಆಗಿನ ಆ ಮಕ್ಕಳಿಗೆ ಪ್ರತಿಭೆಗಳೇ ಇರಲಿಲ್ಲವೇ? ಈ ರೀತಿಯ ಸಮ್ಮರ್ ಕ್ಯಾಂಪ್ ಗಳಿಗೆ ಸೇರದೆ ಅವರೇನಾದರೂ ಕಳೆದುಕೊಂಡಿದ್ದಾರೋ? ಖಂಡಿತಾ ಇಲ್ಲ.
ಈ ರೀತಿಯ ಸಮ್ಮರ್ ಕ್ಯಾಂಪ್ ಗಳಲ್ಲಿ ಸೇರದೆಯೂ ಆಗಿನ ಮಕ್ಕಳು

ರಭಸದಿಂದ ಹರಿಯುವ ನದಿಗಳಲ್ಲಿ ಈಜು ಕಲಿಯುತ್ತಿದ್ದರು. ಒಂದಿಷ್ಟೂ ದಣಿಯದೆ ಮಾವು, ಹಲಸು ಹಾಗೂ ಇತರ ಕಾಡುಮರಗಳನೇರಿ ತಮಗೆ ಬೇಕಾದಷ್ಟು ಹಣ್ಣುಗಳನ್ನು ಕೊಯ್ದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಗೇರು ಮರದಡಿ ಹೋಗಿ ಒಣಗೆಲೆ ಸರಿಸಿ ಸಿಕ್ಕಿದ ಗೇರುಬೀಜವನ್ನು ‘ಒಡ್ಡಿ’ ಲೆಕ್ಕ ಹಾಕಿ ಜಾರುವ ಚಡ್ಡಿಯ ಕಿಸೆಯಲ್ಲಿ ತುಂಬಿ ಬೇಕಾದ ಅಂಕ್ರೋಟು, ರಬ್ಬರ್ ಮೀಠಾಯಿ, ಕ್ಯಾಂಡಿ ಖರೀದಿಸುತ್ತಿದ್ದರು. ಎರಡು ಜಡೆ ಹಾಕುವ ಚೋಟುದ್ದದ ಹುಡುಗಿಯರೂ ಅಮ್ಮ ಮಾಡುವ ಅಷ್ಟೂ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡುವ ಬಗೆಯನ್ನು ತಿಳಿದುಕೊಂಡಿರುತ್ತಿದ್ದರು.
ಮೊದಲೆಲ್ಲಾ ಶಾಲೆಗೆ ರಜೆ ಸಿಕ್ಕಿದ ಮರು ದಿನದಿಂದಲೇ ಮಕ್ಕಳಿಗೆ ಪಠ್ಯದ ಹೊರತಾದ ಜೀವನ ಪಾಠ ದೊರೆಯುತ್ತಿತ್ತು. ಬೇಸಾಯದ ಮನೆಯಾದರೆ ನೇಜಿ ತೆಗೆಯುವುದು, ನೆಡುವುದು, ಭತ್ತ ಕಟಾವು ನಡೆಸುವುದು, ಬೈ ಹುಲ್ಲು ಒಣಗಿಸುವುದು, ಜಾನುವಾರುಗಳನ್ನು ಬಯಲಿನಲ್ಲಿ ಮೇಯಿಸುವುದು ಮುಂತಾದ ಪ್ರಕೃತಿಗೆ ಸನಿಹವಾದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿತ್ತು. ಮನೆಯ ಹಿರಿಯರು ತಮ್ಮ ತುತ್ತಿನ ಚೀಲ ತುಂಬಲು ಯಾವ ಉದ್ಯೋಗ ಆಶ್ರಯಿಸುತ್ತಿದ್ದರೋ ಆ ಕೆಲಸಗಳನ್ನು ಅರಿತುಕೊಳ್ಳಲು ಮಕ್ಕಳಿಗೆ ರಜೆ ಸಹಾಯ ಮಾಡುತ್ತಿತ್ತು. ಹೀಗಾಗಿ ಪ್ರಾಥಮಿಕ, ಪ್ರೌಢ ಶಾಲಾ ವಿದ್ಯಾಭ್ಯಾಸ ಮುಗಿಸಿದ ಬಹುತೇಕ ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ಬದುಕು ಕಟ್ಟಲು ಬೇಕಾಗುವ ಕಾಯಕದ ಅರ್ಧಾಂಶವನ್ನು ಅರಿತಿರುತ್ತಿದ್ದರು.ಗೇರು ಬೀಜ ಹೆಕ್ಕಿ ಮುಗಿದ ಮೇಲೆಯೋ ಅಥವಾ ಮಳೆಗಾಲಕ್ಕೆ ಮೊದಲು

ಆಗಲೇ ಬೇಕಾದ ಕೆಲಸಗಳು ಮುಗಿದ ಬಳಿಕವೋ ಮಕ್ಕಳು ನೆಂಟರ ಮನೆಗೋ, ಅಜ್ಜಿ ಮನೆಗೋ ಹೋಗುವ ಪರಿಪಾಠ ಎಲ್ಲಾ ಕಡೆಯೂ ಇರುತ್ತಿತ್ತು. ಹೀಗೆ ಹೋದಾಗ ‘ಏನು ಮಾವ? ಏನತ್ತೆ? ಏನು ಚಿಕ್ಕಮ್ಮ? ಎನ್ನುತ್ತಾ ಸಂಬಂಧಿಕರ ಸಂಬಂಧವನ್ನು ಸಂಬೋಧಿಸಿ ಹೇಳಿದಾಗ ಸಂಬಂಧದ ಬಗ್ಗೆಯೂ ಮಕ್ಕಳಿಗೆ ಗೊತ್ತಾಗುತ್ತಿತ್ತು. ಹೀಗೆ ತಮ್ಮ ಮನೆಯಿಂದ ಬೇರೆ ಬಂಧುಗಳ ಮನೆಗೆ ಹೋದಾಗ ಅಲ್ಲಿನವರ ಆಚಾರ, ವಿಚಾರ, ಸಂಸ್ಕೃತಿ, ಅವರೊಂದಿಗೆ ಒಡನಾಡುವ ಬಗೆಯನ್ನು ಮಕ್ಕಳು ಅರಿಯುವಂತಾಗುತ್ತಿತ್ತು. ಮನೆಯಲ್ಲಿ ಪೋಷಕರಿಗೆ ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ನೆರವಾಗುವಾಗುವಾಗ, ಸಂಬಂಧಿಕರ ಮನೆಗೆ ತೆರಳಿ ಅಲ್ಲಿಯೂ ಅಲ್ಲಿನವರೊಂದಿಗೆ ಬೆರೆತಾಗ ಮಕ್ಕಳಿಗೆ ಬದುಕಿನ ಪಾಠ ಅರ್ಥವಾಗುತ್ತಿತ್ತು.
ಆದರೆ ಈಗ ಹಾಗಲ್ಲ. ‘ ಹಾಯ್’ ಎನ್ನುತ್ತಾ ‘ಬಾಯ್’ ಎನ್ನುವಲ್ಲಿಗೆ ಸಂಬಂಧಿಕರನ್ನು ನೆಂಟರಿಷ್ಟರನ್ನು ಸ್ವಾಗತಿಸಿ, ಬೀಳ್ಕೊಡುವ ಪ್ರಕ್ರಿಯೆ

ಮುಗಿದು ಹೋಗಿಬಿಡುತ್ತದೆ. ಈಗ ಪ್ರಾಥಮಿಕ, ಪ್ರೌಢ ಶಾಲೆ ಬಿಡಿ.., ಕಾಲೇಜು ವಿದ್ಯಾಭ್ಯಾಸ ಮುಗಿಸಿದ ಮೀಸೆ ಹೊತ್ತ ಯುವಕರಿಗೂ ಬದುಕು ಕಟ್ಟುವ ಕಲೆ ಕರಗತವಾಗಿರುವುದಿಲ್ಲ. ಅಂದಿನ ಹೆಣ್ಣು ಮಕ್ಕಳು ಪ್ರಾಥಮಿಕ ಶಾಲೆಯಿಂದ ಪ್ರೌಢ ಶಾಲೆ ತಲುಪುವ ವೇಳೆಗಾಗಲೇ ಈಗಿನಂತೆ ಯೂಟ್ಯೂಬ್ ನ ಮೊರೆ ಹೋಗದೆ ತಕ್ಕ ಮಟ್ಟಿನ ಅಡುಗೆಗಳನ್ನೆಲ್ಲಾ ಮಾಡಿ ಬಡಿಸುವಷ್ಟು ಪ್ರಾಯೋಗಿಕ ಜ್ಞಾನ ಹೊಂದಿರುತ್ತಿದ್ದರು.
ಹಿಂದೆಲ್ಲಾ ಮಳೆಗಾಲದ ಕೆಲ ತಿಂಗಳುಗಳನ್ನು ಹೊರತುಪಡಿಸಿ ಉಳಿದ ಸಮಯಗಳಲ್ಲಿ ಊರಾಚೆಯ ಸಾರ್ವಜನಿಕ ಮೈದಾನಗಳಲ್ಲಿ ಟೆಂಟಿನ ಆಟ, ನಾಟಕ ಕಂಪೆನಿಗಳ ನಾಟಕಗಳು, ಸರ್ಕಸ್.., ಹೀಗೆ ಬೇರೆ ಬೇರೆ ಮನೋರಂಜನಾ ಕಾರ್ಯಕ್ರಮಗಳು ನಡೆಯುತ್ತಿದ್ದವು. ನಾಟಕ, ಯಕ್ಷಗಾನ, ಸರ್ಕಸ್ ಗಳನ್ನು ತಪ್ಪದೆ ವೀಕ್ಷಿಸುತ್ತಿದ್ದ ಶಾಲಾ ಮಕ್ಕಳು ಬಳಿಕ ದಿನ ತಮ್ಮ ಮನೆಯ ಅಂಗಳದಲ್ಲಿ, ಹಿಂದಿನ ದಿನ ವೀಕ್ಷಿಸಿದ ಎಲ್ಲಾ ದೃಶ್ಯಗಳಿಗೆ ತಾವೇ ಸ್ವತಃ ಕಲಾವಿದರಾಗಿ ಜೀವ ತುಂಬಲು ಪ್ರಯತ್ನಿಸುತ್ತಿದ್ದರು. ಈ ರೀತಿಯ ಅನುಕರಣೆಗಳೇ ಅಂದಿನ ಮಕ್ಕಳಲ್ಲಿದ್ದ ಸಭಾ ಕಂಪನವೆಂಬ ಪೆಡಂಭೂತವನ್ನು ದೂರ ಸರಿಸಲು ಸಹಾಯ ಮಾಡುತ್ತಿದ್ದವು. ಹಾಗಾಗಿ ಅಂದಿನ ಮಕ್ಕಳಿಗೆ ಇಂದಿನ ಸಮ್ಮರ್ ಕ್ಯಾಂಪ್ ಗಳ ಅವಶ್ಯಕತೆ ಇರಲಿಲ್ಲ.

ಸಮ್ಮರ್ ಕ್ಯಾಂಪ್ಗೆ ತಮ್ಮ ಮಕ್ಕಳನ್ನು ಕಳಿಸುವ ಪೋಷಕರಲ್ಲಿ ನೀವೊಮ್ಮೆ ಕೇಳಿ ನೋಡಿ. ‘ರಜೆ ಸಿಕ್ಕಿದ ಕೂಡಲೇ ನೀವೇಕೆ ನಿಮ್ಮ ಮಕ್ಕಳನ್ನು ಸಮ್ಮರ್ ಕ್ಯಾಂಪ್ ಗೆ ಸೇರಿಸುತ್ತೀರಿ?’ ಎಂದು ಪ್ರಶ್ನಿಸಿದರೆ ‘ಹೊತ್ತುಗೊತ್ತಿಲ್ಲದೆ ಮೊಬೈಲ್ ನೋಡುತ್ತಾ ಕಾಲ ಕಳೆಯುವ ಅವರು ಕ್ಯಾಂಪ್ ಗೆ ಹೋಗಿ ಅಲ್ಲಿ ಕಾಲ ಕಳೆಯುಷ್ಟು ಹೊತ್ತಾದರೂ ಮೊಬೈಲ್ ನಿಂದ ದೂರ ಇರಲಿ…’ ಎಂಬ ಉತ್ತರ ನಿಮಗೆ ಸಿಕ್ಕೇ ಸಿಗುತ್ತದೆ. ಅಲ್ಲಿಯವರೆಗೆ ಈಗಿನ ಮಕ್ಕಳು ಮೊಬೈಲ್ ಎಂಬ ಮಾಯಾಲೋಕದೊಳಗೆ ಮುಳುಗಿ ಹೋಗಿರುತ್ತಾರೆ.
ಬೇಸಾಯದ ಜಾಗವನ್ನು ವಾಣಿಜ್ಯ ಬೆಳೆಗಳು ಕಬಳಿಸಿದ ಪರಿಣಾಮವೋ.., ಅಥವಾ ಕೆಲಸಕ್ಕಾಗಿ ಅತಿಯಾದ ಯಂತ್ರಗಳ ಬಳಕೆಯಿಂದಾಗಿಯೋ ಅಥವಾ ಆದುನಿಕ ಜೀವನ ಪದ್ಧತಿಯ ಪರಿಣಾಮವೋ.., ಒಟ್ಟಿನಲ್ಲಿ ಈಗ ಜೀವನ ನಿರ್ವಹಣೆಗೆ ಹಿಂದಿನಷ್ಟು ತ್ರಾಸಪಡುವ ಅವಶ್ಯಕತೆ ಇಲ್ಲ. ಹಾಗಾಗಿ ಬೆಳೆಯುವ ಮಕ್ಕಳಿಗೆ ಮನೆಯಲ್ಲಿ ಪ್ರಾಯೋಗಿಕ ಕೆಲಸಗಳಿಲ್ಲದ ಪರಿಣಾಮವಾಗಿ ಮಕ್ಕಳಿಗೆ ಪಠ್ಯದ ಹೊರತಾದ ಜ್ಞಾನದ ಅವಶ್ಯಕತೆ ಇದೆ. ಪರಿಸ್ಥಿತಿ ಹೀಗಿರುವುದನ್ನು ಗಮನಿಸಿಯೇ ಈಗೀಗ ಹೆಚ್ಚೆಚ್ಚು ಸಮ್ಮರ್ ಕ್ಯಾಂಪ್ ಗಳ ಆಯೋಜನೆ ಆಗುತ್ತಿವೆ.ಕೂಡು ಕುಟುಂಬದಿಂದ ಹೊರಬಂದು

ಅಂಗಳವೇ ಇಲ್ಲದ ಅಪಾರ್ಟ್ಮೆಂಟ್ ನ ಜೀವನ ಶೈಲಿಗೆ ಒಗ್ಗಿದವರಿಗೆ, ಮೊಬೈಲ್ ಬಿಟ್ಟು ಬೇರೆ ಪ್ರಪಂಚವೇ ಇಲ್ಲ ಎನ್ನುವ ಮಕ್ಕಳಿಗೆ, ಮಕ್ಕಳ ವಯೋಸಹಜ ಆಟೋಟಗಳು ಮನೆಯ ಹಿರಿಯರಿಗೆ ತಡೆಯಲು ಸಾಧ್ಯವೇ ಆಗದ ತಲೆನೋವು ಎಂಬಂತಾದರೆ ಖಂಡಿತವಾಗಿಯೂ ಸಮ್ಮರ್ ಕ್ಯಾಂಪ್ ಎಂಬುದೊಂದು ಅತ್ಯುತ್ತಮ ಆಯ್ಕೆ.
ಈ ನಿಟ್ಟಿನಲ್ಲಿ ಯೋಚಿಸಿದರೆ ಈಗಿನ ಸಮ್ಮರ್ ಕ್ಯಾಂಪ್ ಗಳು ಮಕ್ಕಳಿಗೆ ಬದುಕು ಕಟ್ಟಲು ಬೇಕೇ ಬೇಕಾಗುವ ಒಂದಷ್ಟು ಟಿಪ್ಸ್ ಗಳನ್ನು ನೀಡುತ್ತವೆ ಎಂಬುದು ಮಾತ್ರ ಸುಳ್ಳಲ್ಲ.

(ಗಣೇಶ್ ಮಾವಂಜಿ ಪತ್ರಕರ್ತರು ಹಾಗೂ ಲೇಖಕರು. ಪ್ರತಿ ಮಂಗಳವಾರ ಅವರ ಅಂಕಣ ‘ಸುಳ್ಯ ಮಿರರ್’ನಲ್ಲಿ ಪ್ರಕಟಗೊಳ್ಳಲಿದೆ.)