ಹೋರಾಟವನ್ನು ಶಿಸ್ತುಬದ್ಧವಾಗಿ ಸಂಘಟಿಸಿದ, ಸಂಗ್ರಾಮದ ಬಹುವ್ಯಾಪಿ ಆಯಾಮಗಳನ್ನು ಆಯೋಜಿಸಿದ ಸುಳ್ಯ ಉಬರಡ್ಕ ಗ್ರಾಮದ ಕೆದಂಬಾಡಿ ರಾಮಯ್ಯ ಗೌಡ ಎಂಬ ಅತ್ಯಂತ ಪ್ರಭಾವಶಾಲಿಯಾದ ಅಗಾಧ ಶ್ರೀಮಂತ ಜಮೀನ್ದಾರ ಅದ್ಭುತ ಜನನಾಯಕನಾಗಿ ಹೊರಹೊಮ್ಮುತ್ತಾರೆ. ಸಶಸ್ತ್ರ ಸಮರಕ್ಕೆ ನಾಯಕನೊಬ್ಬ ಅನಿವಾರ್ಯ.ಅಂತಹ ನಾಯಕ ರಾಜ ಮನೆತನಕ್ಕೆ ಸೇರಿದವನಾದರೆ ಜನಸಾಮಾನ್ಯರು ಭಾವನಾತ್ಮಕತೆಯಿಂದ ಆಪ್ತತೆಯಿಂದ ಸ್ವೀಕರಿಸುತ್ತಾರೆ. ಇದು ಕೆದಂಬಾಡಿ ರಾಮಯ್ಯ ಗೌಡರಿಗೆ ಮತ್ತು ಅವರ ಆಪ್ತ ವಲಯಕ್ಕೆ ತಿಳಿದಿತ್ತು ಅದಕ್ಕೆಂದೇ ಅವರು
ಶನಿವಾರಸಂತೆ ಹೆಮ್ಮನೆಯಿಂದ ಪುಟ್ಟಬಸಪ್ಪ ಎಂಬ ತರುಣನನ್ನು ಕರೆತರುತ್ತಾರೆ . ಅವನಿಗೆ ಸನ್ಯಾಸಿಯ ವೇಷ ತೊಡಿಸುತ್ತಾರೆ.’ಕಲ್ಯಾಣಸ್ವಾಮಿ ‘ಎಂಬ ಹೆಸರನ್ನು ಇಡುತ್ತಾರೆ . ಸನಿಹದ ಹೂಮಲೆ ಕಾಡಲ್ಲಿ ಆಶ್ರಮ ಕಟ್ಟಿಸಿ ನೆಲೆ ನಿಲ್ಲಿಸುತ್ತಾರೆ.ಈತ ಹಾಲೇರಿ ರಾಜವಂಶಸ್ಥ ಎಂಬ ಸುದ್ದಿ ಎಲ್ಲೆಡೆ ಹರಡುತ್ತದೆ.ಜನ ಆಶ್ರಮಕ್ಕೆ ಭೇಟಿ ಕೊಡುತ್ತಾರೆ . ಸುಳ್ಯದ ಸುತ್ತಲಿನ ಗ್ರಾಮಗಳ ಯುವಕರನ್ನು ಯುದ್ಧಕ್ಕೆ ಸನ್ನದ್ಧಗೊಳಿಸಲಾಗುತ್ತದೆ . ಶಸ್ತ್ರಾಸ್ತ್ರ ತರಬೇತಿ ನೀಡಲಾಗುತ್ತದೆ.ಬಂದೂಕು ,
ಖಡ್ಗ ,ಗುರಾಣಿ, ಭಲ್ಲೆ , ಒಡಿಕತ್ತಿ , ನಾಯರ್ ಕತ್ತಿ ,ಬಿಲ್ಲು ಬಾಣ ಎಲ್ಲವನ್ನೂ ಕೆದಂಬಾಡಿ ರಾಮಯ್ಯ ಗೌಡ ಸಜ್ಜುಗೊಳಿಸುತ್ತಾರೆ.1837ರ ಮಾರ್ಚ್ 30 ರಂದು ಹೋರಾಟ ಆರಂಭಗಗೊಳ್ಳುತ್ತದೆ . ಕಲ್ಯಾಣಸ್ವಾಮಿಯನ್ನು ಪೂಮಲೆ ಕಾಡಿನ ಆಶ್ರಮದಿಂದ ಗೌರಪೂರ್ವಕವಾಗಿ ಕರೆದುಕೊಂಡು ಬರುತ್ತಾರೆ.ಈ ದಿನ ಕೆದಂಬಾಡಿ ರಾಮಯ್ಯ ಗೌಡನ ಮಗನ ಮದುವೆಯೆಂಬ ಯುದ್ಧ ಸನ್ನದ್ಧತೆಯ ಸಂಕೇತದ ಸುದ್ದಿಯನ್ನು ಸಾರಲಾಗಿರುತ್ತದೆ . ಜನ ಆಯುಧಪಾಣಿಗಳಾಗಿ ಕೆದಂಬಾಡಿ ರಾಮಯ್ಯ ಗೌಡರ ಮನೆಯ ಮುಂದಿನ ಗದ್ದೆಯಲ್ಲಿ ನರೆಯುತ್ತಾರೆ. ಕನಿಷ್ಠ 2000 ದಷ್ಟು ಅಪಾರ ಸಂಖ್ಯೆಯ ಹೋರಾಟಗಾರರು ಅಲ್ಲಿ ಸೇರಿರುತ್ತಾರೆ. ಅದೇ ದಿನ ಪೆರಾಜೆ, ಸುಳ್ಯ,ಸುಬ್ರಹ್ಮಣ್ಯ ಮಂಜ್ರಾಬಾದ್ ಬಿಸಲೆ ಮಾದಲಾದ ಕಡೆಗಳಲ್ಲಿ ಯುದ್ಧದ ನಿರೂಪಗಳನ್ನು ಪ್ರಕಟಿಸಲಾಗುತ್ತದೆ.ಸುಳ್ಯದ ಪ್ರಭಾವಶಾಲಿ ವ್ಯಕ್ತಿಯಾಗಿದ್ದ ಅಟ್ಲೂರು ರಾಮಪಯ್ಯ ಹೋರಾಟಕ್ಕೆ ಮೊದಲು ಬೆಂಬಲ ನೀಡಿದ್ದರೂ ಕೊನೆಗೆ ವಿರುದ್ಧ ದಿಕ್ಕಿಗೆ ವಾಲಿಕೊಂಡಿದ್ದ. ದಂಡು ಹೊರಡುವ ಮೊದಲು ಅವನನ್ನು ಕರೆತರಲು ಕೆದಂಬಾಡಿ ರಾಮಯ್ಯ ಗೌಡರು ತಂಡವೊಂದನ್ನು ರಚಿಸಿ ಪಯಸ್ವಿನಿ ನದಿಯ ಪಶ್ಚಿಮದ ದಡದಲ್ಲಿನ ಅಟ್ಲೂರಿಗೆ ಕಳುಹಿಸುತ್ತಾರೆ. ಆದರೆ ರಾಮಪ್ಪಯ್ಯನ ಜನ ಇವರ ವಿರುದ್ಧ ಕಾದಾಟ ನಿಲ್ಲುತ್ತಾರೆ . ಆತನನ್ನು ಬಂಧಿಸಿ ಕರೆತರುವುದು ಅವರಿಗೆ ಅನಿವಾರ್ಯವಾಗುತ್ತದೆ .
ಇಂದು ಮದುವೆಗದ್ದೆಯಂದು ಕರೆಯುವ ಮನೆಯ ಮುಂಭಾಗದ ಗದ್ದೆಯಲ್ಲಿ ಕಲ್ಯಾಣಸ್ವಾಮಿಗೆ ರಾಮಯ್ಯಗೌಡರ ನೇತೃತ್ವದಲ್ಲಿ ನಡೆದ ಕಾರ್ಯ ಯೋಜನೆಯಂತೆ ಯುದ್ಧದ ನಾಯಕತ್ವದ ಪಟ್ಟವನ್ನು
ಕಟ್ಟಲಾಗುತ್ತದೆ.ಆ ಬಣ್ಣದ ಕುದುರೆಯನ್ನು ರಾಜಾಶ್ವವಾಗಿ ಅರ್ಪಿಸಲಾಗುತ್ತದೆ. ಜೊತೆಗೆ ಪ್ರೀತಿ, ಗೌರವದ ಪರಾಕಾಷ್ಟ್ರೆ ಎಂಬಂತೆ ಮಿತ್ತೂರು ನಾಯರ್ ದೈವದ ಕೆಂಪು ಕೊಡೆಯನ್ನು ಹಿಡಿಯುತ್ತಾರೆ. ಮಿತ್ತೂರ್ ನಾಯರ್ ಸುಳ್ಯ ಪರಿಸರದ ಅತ್ಯಂತ ಕಾರಣಿಕದ ದೈವವೆಂಬ ನಂಬಿಕೆ ಇಂದಿಗೂ ಪ್ರಚಲಿತದಲ್ಲಿದೆ. ಇಂತಹ ದೈವದ ಛತ್ರಚಾಮರವನ್ನು ಹಿಡಿಯುವ ಮೂಲಕ ಈ ಹೋರಾಟದ ಬಗ್ಗೆ ಜನ ಸಾಮಾನ್ಯರಿಗಿದ್ದ ಅರ್ಪಣಾ ಮನೋಬಾವ ಅರ್ಥವಾಗುತ್ತದೆ.ಮದುವೆ ಗದ್ದೆಯಲ್ಲಿ ಕ್ರಿ.ಶ.1837 ಮಾರ್ಚ್ 30 ರಂದು ರೈತ ಸೈನ್ಯ ಜಮಾವಣೆಯಾದಲ್ಲಿಂದ ಕೆದಂಬಾಡಿ ರಾಮಯ್ಯ ಗೌಡರ ನಾಯಕತ್ವದ ಗುಣಗಳು ಅನಾವರಣಗೊಳ್ಳುತ್ತಾ ಹೋಗುತ್ತವೆ. ಮೊದಲು ದಂಡು ಬೆಳ್ಳಾರೆಯತ್ತ ಸಾಗಿ ಕಂಪೆನಿಯ ಖಜಾನೆಯನ್ನು ಸ್ವಾಧೀನಕ್ಕೆ ಪಡೆದುಕೊಳ್ಳುತ್ತದೆ. ಸ್ಥಳೀಯ ಶಿರಸ್ತೇದಾರ ದೇವಪ್ಪನ ಪ್ರತಿಭಟನೆ ನಿಷ್ಪಲಗೊಳ್ಳುತ್ತದೆ.
ಪೈಶ್ಕಾರನ ಕಚೇರಿಯ ಮುಖ್ಯ ಶಿರಸ್ತೇದಾರ, ತಹಸೀಲ್ದಾರ ಇನ್ನಿತರ ಉದ್ಯೋಗಿಗಳನ್ನು ಸೆರೆ ಹಿಡಿಯುತ್ತಾರೆ. ಬೆಳ್ಳಾರೆಯಲ್ಲಿ 3000 ಕ್ಕಿಂತಲೂ ಹೆಚ್ಚು ಹೋರಾಟಗಾರರು ಜಮಾವಣೆಗೊಂಡಿದ್ದರು. ದಂಡಿನಲ್ಲಿ ಕುದುರೆ ಮತ್ತು ಆನೆಗಳೂ ಇದ್ದವು . ಬೆಳ್ಳಾರೆಯಲ್ಲಿ ಹೋರಾಟದ ಸೇನಾಳುಗಳನ್ನು ನಾಲ್ಕು ತಂಡಗಳಾಗಿ ವಿಂಗಡಿಸಲಾಗುತ್ತದೆ. 800 ಜನರ ಮೊದಲ ದಂಡು ಕುಡೆಕಲ್ಲು ಪುಟ್ಟ ಗೌಡ ಹಾಗೂ ಕುಂಚಡ್ಕ ರಾಮ ಗೌಡರ ನೇತೃತ್ವದಲ್ಲಿ ಕುಂಬ್ಳೆ – ಕಾಸರಗೋಡು ಮಂಜೇಶ್ವರಗಳನ್ನು ಗೆಲ್ಲಲು ಕಳುಹಿಸಲಾಯಿತು. ಎರಡನೇ ದಳ ಬಂಟ್ವಾಳ ಕಾರ್ಕಳಕ್ಕೆ ಮತ್ತು ಮೂರನೇ ತಂಡ ಕೂಜುಗೋಡು ಮಲ್ಲಪ್ಪ ಗೌಡ ಹಾಗೂ ಅಪ್ಪಯ್ಯ ಗೌಡರ ಮುಂದಾಳುತನದಲ್ಲ ಉಪ್ಪಿನಂಗಡಿ – ಬಿಸಲೆ – ಐಗೂರಿಗೆ ಹೋಗುತ್ತದೆ . ಕಲ್ಯಾಣಸ್ವಾಮಿ , ಕೆದಂಬಾಡಿ ರಾಮಯ್ಯ ಗೌಡ, ಗುಡ್ಡೆಮನೆ ಅಪ್ಪಯ್ಯ ಗೌಡ ಹಾಗೂ ಕುಕ್ಕುನೂರು ಚೆನ್ನಯ್ಯ ಇವರುಗಳಿದ್ದ ಪ್ರಧಾನ ಸೈನ್ಯವು ಮಂಗಳೂರಿಗೆ ಹೊರಟಿತು. ಮಂಗಳೂರಿಗೆ ಹೊರಟ ಮುಖ್ಯ ಸೈನ್ಯ ಮೊದಲು ಪುತ್ತೂರಿಗೆ ಲಗ್ಗೆ ಇಟ್ಟಿತು. ಜನಸಮರದ ಸುದ್ದಿ ತಿಳಿದ ಕೆನರಾ ಜಿಲ್ಲೆಯ ಕಲೆಕ್ಟರ್ ಲೆವಿನ್ ಮಂಗಳೂಲಿನಿಂದ ಹೊರಟು ತುಕಡಿಯೊಂದಿಗೆ
ಪುತ್ತೂರಿಗೆ ಆಗಮಿಸಿದ. ಆದರೆ ಹೋರಾಟಗಾರರ ಸಂಖ್ಯೆ , ಜನಬೆಂಬಲ ಮತ್ತು ಸರಕಾರಿ ಉದ್ಯೋಗಿಗಳು ಅವರೊಂದಿಗೆ ಸೇರಿಕೊಂಡ ಬಗೆಯನ್ನು ನೋಡಿದ ಲೆವಿನ್ಗೆ ಯುದ್ಧಕ್ಕೆ ಧುಮುಕಲು ಎದೆಗಾರಿಕೆ ಸಾಲದಾಯಿತು. ಪುತ್ತೂರಲ್ಲಿ ಕಂಪೆನಿ ಕಛೇರಿ ಸುಲಭವಾಗಿ ಹೋರಾಟಗಾರರ ವಶಕ್ಕೆ ಬಂತು. ಅಲ್ಲಿನ ಉದ್ಯೋಗಿಗಳು ಬಂಧನಕ್ಕೊಳಗಾದರು. ಎರಡು ದಿನ ದೂರದಲ್ಲಿದ್ದು ಹೊಂಚು ಹಾಕಿದ ಲೆವಿನ್ ಯುದ್ಧ ನಡೆಸಿದರೆ ತನಗೇ ಅಪಾಯ ಎಂದು ತಿಳಿದು ಎಪ್ರಿಲ್ 2 ನೇ ರಾತ್ರಿ ಅಲ್ಲಿಂದ ಮಂಗಳೂರು ಕಡೆ ಕಾಲ್ಕಿತ್ತ , ಪುತ್ತೂರಲ್ಲಿ ಅದಾಗಲೇ ಅಪಾರ ಪ್ರಮಾಣದ ಸಶಸ್ತ್ರ ಜನ ಸೇರಿದ್ದರು. ಅಲ್ಲಿ ಅಪಾಯವನ್ನು ಎದುರು ಹಾಕಿಕೊಳ್ಳುವುದಕ್ಕಿಂತ ದುರ್ಬಲ ಮಂಗಳೂರನ್ನು ರಕ್ಷಿಸಲು ಮುಂದಾಗುವುದು ಒಳಿತೆಂದು ಲೆವಿನ್ ಭಾವಿಸಿದ . ಮಂಗಳೂರಲ್ಲಿ ಸಹ ಅಲ್ಲಿನ ನಿವಾಸಿಗಳ ಅಸಹಕಾರ ಲೆವಿನ್ ಗಮನಕ್ಕೆ ಬಂತು. ಪುತ್ತೂರಿಂದ ಮಂಗಳೂರಿಗೆ ಹೋಗುವ ದಾರಿಯಲ್ಲಿ ಲೆವಿನ್ ಸೈನಿಕರನ್ನು ಒಟ್ಟು ಸೇರಿಸಿ ಬಂದೂಕು ಮತ್ತು ಮದ್ದುಗುಂಡುಗಳನ್ನು ಕೊಟ್ಟರೂ ಅವರುಗಳು ತಮಗೆ ಕೊಟ್ಟ ಕೆಲಸವನ್ನು ನಿರ್ವಹಿಸುವ ಬದಲು ಯಾರಿಗೂ ತಿಳಿಸದೆ ನಾಪತ್ತೆಯಾದರು.ಈ ಕಲೆಕ್ಟರ್ ಮಂಗಳೂರಿಗೆ ತಲಪುವ ಹೊತ್ತಿಗೆ ಊರು ನಿರ್ಜನವಾಗಿತ್ತು. ಅಲ್ಲಿನ ಜನ ಹೋರಾಟಗಾರರೊಂದಿಗೆ ಸಂಪರ್ಕದಲ್ಲಿರುವುದು ಅವನ ಗಮನಕ್ಕೆ ಬಂದಿತು , ನಗರದ ಕಾವಲು ಪಡೆ ಸಹ ಅವರೊಂದಿಗೆ ಸೇರಿಕೊಂಡಿತ್ತು . ಒಂದೆಡೆ ಹೋರಾಟಗಾರರೊಂದಿಗೆ ಕಾದಾಡುತ್ತಾ,ಇನ್ನೊಂದೆಡೆ ಯುರೋಪಿಯನ್ ಕುಟುಂಬಗಳನ್ನು ಮಂಗಳೂರಿನಿಂದ ತೆರವು ಮಾಡಿ ಅಪಾಯಕಾರಿಯಲ್ಲದ ಸ್ಥಳಕ್ಕೆ ಕಳುಹಿಸಲು ಕಂಪೆನಿಯ ಅಧಿಕಾರಿಗಳು ತೀರ್ಮಾನಿಸಿದರು. ಎಪ್ರಿಲ್ 5 ರಂದು ಅವರನ್ನು ಹಡಗಿಗೆ ಹತ್ತಿಸಲು ನಿರ್ಧರಿಸಿದ್ದರೂ ಅದು ಸಾಧ್ಯವಾಗಲಿಲ್ಲ. ಈ ನಡುವೆ ಖಜಾನೆಯನ್ನು ಸಂರಕ್ಷಿಸುವ ಪ್ರಯತ್ನದಿಂದ ಅವರ ಉಳಿದ ಕೆಲಸಕ್ಕೂ ಅಡಚಣೆಯಾಯಿತು . ಕೊನೆಗೂ ಆ ಸಾಹಸವನ್ನು ಕೈಬಿಡಬೇಕಾಯಿತು. ಅಂತೂ ಇಂತೂ ಎಪ್ರಿಲ್ 6 ಮತ್ತು 7 ರಂದು ಒಂದಷ್ಟು ಜನ ಮಂಗಳೂರು ತೊರೆದು ಕಣ್ಣನೂರಿಗೆ ಪಲಾಯನ ಮಾಡಿದರು. 1837 ರ ಹೋರಾಟದ ಸೈನ್ಯವು ಮಂಗಳೂರಿನ ಕಡೆ ಸಾಗುತ್ತಿದ್ದಂತೆ ಅದಕ್ಕೆ ದಾರಿಯುದ್ದಕ್ಕೂ ಅಪಾರವಾದ ಜನಬೆಂಬಲ , ಪ್ರೋತ್ಸಾಹ , ನೆರವು ಮತ್ತು ಸಹಭಾಗಿತ್ವ ದೊರಕುತ್ತದೆ. ದಂಡಿನ ಗಾತ್ರ ವಿಶಾಲವಾಗಿ ಹಿಗ್ಗುತ್ತದೆ . ಧರ್ಮಸ್ಥಳದ ಧರ್ಮಾಧಿಕಾರಿ ಮಂಜಯ್ಯ ಹೆಗ್ಗಡೆ ಫಿರಂಗಿ , ಕುದುರೆ ಹಾಗು ಅಪಾರ ಪ್ರಮಾಣದ ಹಣವನ್ನು ನೀಡುತ್ತಾರೆ. ನಂದಾವರದಲ್ಲಿದ್ದ ಬಂಗಾಡಿ ಅರಸು ಮನೆತನದ ಲಕ್ಷ್ಮಪ್ಪ ಬಂಗರಸ ದೊಡ್ಡ ಸಂಖ್ಯೆಯ ಯೋಧರೊಂದಿಗೆ ನೇರವಾಗಿ ಯುದ್ಧಕ್ಷೇತ್ರಕ್ಕೆ ಧಾವಿಸುತ್ತಾರೆ . ಉಪ್ಪಿನಂಗಡಿಯಲ್ಲಿ ಕಂಪೆನಿಯ ಉದ್ಯೋಗಿ ಮಂಜ ದಂಡಿಗೆ ಜನರನ್ನು ಜಮಾವಣಿಗೊಳಿಸುತ್ತಾರೆ.
(ಮುಂದುವರಿಯುವುದು).
ನಿರೂಪಣೆ- ಗಂಗಾಧರ ಕಲ್ಲಪಳ್ಳಿ.
ಮಾಹಿತಿ ಕೃಪೆ: ಹಿರಿಯ ಸಾಹಿತಿ ವಿದ್ಯಾಧರ ಕುಡೆಕಲ್ಲು ಅವರ ‘ಅಮರ ಸುಳ್ಯ -1837’ ಕೃತಿ ಹಾಗು ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಉಸ್ತುವಾರಿ ಸಮಿತಿ ಮಂಗಳೂರು ಪ್ರಕಟಿಸಿದ ಕೈಪಿಡಿ.