ಸುಳ್ಯ: ಅಡ್ತಲೆ ನಾಗರಿಕ ಹಿತರಕ್ಷಣಾ ವೇದಿಕೆಯ ವತಿಯಿಂದ ಮಾಜಿ ಸಚಿವ ಎಸ್.ಅಂಗಾರ ಅವರಿಗೆ ನಾಗರಿಕ ಸನ್ಮಾನ ಹಾಗೂ ನೂತನ ಶಾಸಕಿ ಭಾಗೀರಥಿ ಮುರುಳ್ಯ ಅವರಿಗೆ ಅಭಿನಂದನಾ ಕಾರ್ಯಕ್ರಮ ಜೂ.10ರಂದು ಅಡ್ತಲೆ ಶಾಲಾ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ಅಡ್ತಲೆ ನಾಗರಿಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಎ.ಕೆ.ಹರಿಪ್ರಸಾದ್ ಅಡ್ತಲೆ ತಿಳಿಸಿದ್ದಾರೆ. ಸುಳ್ಯದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಬಹುಬೇಡಿಕೆಯ ರಸ್ತೆಯಾಗಿರುವ ಅರಂತೋಡು
– ಅಡ್ತಲೆ ರಸ್ತೆ ಅಭಿವೃದ್ಧಿಗಾಗಿ ಮಾಜಿ ಸಚಿವ ಎಸ್.ಅಂಗಾರರು ಅನುದಾನ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಅವರಿಗೆ ಸನ್ಮಾನ ಮಾಡಲಾಗುವುದು. ಅರಂತೋಡು – ಎಲಿಮಲೆ ರಸ್ತೆ ಅಭಿವೃದ್ಧಿಗೆ ಕಳೆದೆರಡು ವರ್ಷಗಳಿಂದ ನಾಗರಿಕ ಹಿತರಕ್ಷಣಾ ವೇದಿಕೆ ವಿವಿಧ ರೀತಿಯ ಹೋರಾಟಗಳನ್ನು ಹಮ್ಮಿಕೊಂಡ ಪರಿಣಾಮ ರೂ. 3 ಕೋಟಿ ಅನುದಾನದಲ್ಲಿ ಅರಂತೋಡಿನಿಂದ ರಸ್ತೆ ಅಭಿವೃದ್ಧಿ ಆಗಿದೆ. ಅರಂತೋಡಿನಿಂದ ಪಿಂಡಿಮನೆ ತನಕ 3.9. ಕಿ.ಮೀ. ರಸ್ತೆ ಅಗಲೀಕರಣ ಗೊಂಡಿದ್ದು, ಇದರಲ್ಲಿ 1.3 ಕಿ.ಮೀ ರಸ್ತೆ ಸಂಪೂರ್ಣ ಡಾಮರೀಕರಣ, 2.6 ಕಿ.ಮೀ. ರಸ್ತೆ ಅಭಿವೃದ್ಧಿ ನಡೆದು ಒಂದು ಕೋಟ್ ಡಾಮರು ಹಾಕಲಾಗಿದ್ದು ಇನ್ನೊಂದು ಕೋಟ್ ಡಾಮರೀಕರಣ ಬಾಕಿ ಇದೆ. 2.5 .ಕಿಮೀ. ರಸ್ತೆ ಮರುಡಾಮರೀಕರಣ ಮಾಡಲಾಗಿದೆ. ರಸ್ತೆ ಅಭಿವೃದ್ಧಿ ಸಂದರ್ಭ ವಿದ್ಯುತ್ ಕಂಬ, ಚರಂಡಿ ವ್ಯವಸ್ಥೆ, ಮರಗಳ ತೆರವು ಆಗಿಲ್ಲ. ಅದನ್ನು ಮಾಡಿ ವಾಹನ ಸಂಚಾರ ಸುಗಮವಾಗುವಂತೆ ಆಗಬೇಕು. ಉಳಿದ ಕಡೆ ಇನ್ನೊಂದು ಕೋಟ್ ಡಾಮರೀಕರಣ ಕೂಡಲೇ ಮಾಡಬೇಕು ಎಂದು ಅವರು ಒತ್ತಾಯಸಿದರು.
ರಸ್ತೆ ಅಭಿವೃದ್ಧಿಗೆ ಅನುದಾನ ನೀಡಿದ ಹಿನ್ನಲೆಯಲ್ಲಿ ಮಾಜಿ ಸಚಿವ ಎಸ್.ಅಂಗಾರ ಅವರನ್ನು ಸನ್ಮಾನಿಸಲಾಗುವುದಿ. ಜೊತೆಗೆ ನೂತನ ಶಾಸಕಿ ಭಾಗೀರಥಿ ಮುರುಳ್ಯ ಅವರನ್ನು ಕಾರ್ಯಕ್ರಮದಲ್ಲಿ ಅಭಿನಂದಿಸಲಾಗುವುದು. ರಸ್ತೆ ಅಭಿವೃದ್ಧಿಗೆ ಸಹಕರಿಸಿದ ಎಲ್ಲರನ್ನೂ ಗೌರವಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಜೊತೆ ಕಾರ್ಯದರ್ಶಿ ರಂಜಿತ್ ಅಡ್ತಲೆ, ಗೌರವ ಸಲಹೆಗಾರರಾದ ಹರಿಶ್ಚಂದ್ರ ಮೇಲಡ್ತಲೆ ಉಪಸ್ಥಿತರಿದ್ದರು.