ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ)ಯು ಸೂರ್ಯನ ಅಧ್ಯಯನಕ್ಕಾಗಿ ಕಳುಹಿಸಿರುವ ಆದಿತ್ಯ–ಎಲ್ 1 ನೌಕೆ ಯಶಸ್ವಿಯಾಗಿ ಎರಡನೇ ಕಕ್ಷೆಯನ್ನು ಪ್ರವೇಶಿಸಿದೆ ಎಂದು ಇಸ್ರೊ ತಿಳಿಸಿದೆ. ಸೆಪ್ಟೆಂಬರ್ 5ರ ರಾತ್ರಿ 2.45ಕ್ಕೆ ಆದಿತ್ಯ ಎಲ್ -1 ಎರಡನೇ ಕಕ್ಷೆಯನ್ನು ಪ್ರವೇಶಿಸಿದೆ ಎಂದು
ಇಸ್ರೊ ಸಾಮಾಜಿಕ ಜಾಲತಾಣ ‘ಎಕ್ಸ್‘ನಲ್ಲಿ ಮಾಹಿತಿ ಹಂಚಿಕೊಂಡಿದೆ. ಆದಿತ್ಯ–ಎಲ್ 1 ಸೆಪ್ಟೆಂಬರ್ 10 ರಂದು ರಾತ್ರಿ 2.30ಕ್ಕೆ ಮೂರನೇ ಕಕ್ಷೆಯನ್ನು ಪ್ರವೇಶಿಸುತ್ತದೆ ಎಂದು ಇಸ್ರೊ ತಿಳಿಸಿದೆ. ಸೆಪ್ಟೆಂಬರ್ 3ರಂದು ಆದಿತ್ಯ–ಎಲ್ 1 ಮೊದಲ ಕಕ್ಷೆಯನ್ನು ಯಶಸ್ವಿಯಾಗಿ ಬದಲಾಯಿಸಿತ್ತು.
ಸೂರ್ಯ ಮತ್ತು ಭೂಮಿ ನಡುವಿನ ‘L1’ ಪಾಯಿಂಟ್ನಲ್ಲಿ ಭಾರತ ಮೊದಲ ಸೌರ ವೀಕ್ಷಣಾಲಯವನ್ನು ಸ್ಥಾಪಿಸಲಿದ್ದು ಈ ಮೂಲಕ ಸೂರ್ಯನ ಹೊರಗಿನ ವಾತಾವರಣವನ್ನು ಅಧ್ಯಯನ ಮಾಡುವ ಗುರಿಯನ್ನು ಹೊಂದಿದೆ. L1 ಪಾಯಿಂಟ್ ಭೂಮಿಯಿಂದ 15 ಲಕ್ಷ ಕಿ. ಮೀಟರ್ ದೂರದಲ್ಲಿದೆ, ಭೂಮಿಯಿಂದ L1 ಪಾಯಿಂಟ್ ತಲುಪಲು ಆದಿತ್ಯ–ಎಲ್1 ಒಟ್ಟು 125 ದಿನಗಳನ್ನು ಪ್ರಯಾಣಿಸಬೇಕು.