*ಎಂ.ನಾ.ಚಂಬಲ್ತಿಮಾರ್.
ಆಟಿ ಎಂಬ ಆಷಾಡಕ್ಕೆ ಹೇಳಲು ನೂರಾರು ಕತೆಗಳಿವೆ. ಇದು ತುಳು – ಮಲಯಾಳ ನಾಡಿಗೆ ವರ್ಷ ಪರ್ವದ ಕಟ್ಟಕಡೆಯ ತಿಂಗಳು. ಆದ್ದರಿಂದಲೇ ಅದಕ್ಕೆ ಕಾಠಿಣ್ಯ..! ಹಿಂದೆ ಜನತೆ ಕೃಷಿ ಅವಲಂಬಿತ ಬದುಕು ನಡೆಸುತ್ತಿದ್ದಾಗ ಆಟಿಯಲ್ಲಿ ಭೂಮ್ಯಾಕಾಶವೇ ಒಂದಾಗುವಂತೆ ಹನಿಕಡಿಯದ ಜಡಿಮಳೆ ಸುರಿಯುತಿತ್ತು. ನೆಲಕ್ಕೆ ಸೂರ್ಯ ಕಿರಣಗಳೇ ಸೋಂಕದಂತೆ ಮಬ್ಬಾದ ಕಾರಿರುಳ ಛಾಯೆ. ಮನುಷ್ಯ ಮನೆಯಿಂದ ಹೊರಗಿಳಿಯಲು ಕೂಡಾ ಪಾಡುಪಡುತ್ತಿದ್ದ!
ಈ ದಿನಗಳಿಗೆಂದೇ ಜನತೆ ಉಪ್ಪಿನಿಂದ ಕರ್ಪೂರದ ತನಕ ಸಕಲ ವಸ್ತುಗಳನ್ನೂ ಮೊದಲೇ ಶೇಖರಿಸಿಟ್ಟು ದಿನದೂಡುವ ಕ್ರಮವಿತ್ತು.
ಅದು ಬಡತನದ ರೌದ್ರಕಾಲ. ಹಸಿವೇನೆಂದು ಅರಿವಾಗಿಸುತ್ತಿದ್ದ ಕಾಲ.!
ಈಗ ಕಾಲವೇ ಬದಲಾಗಿದೆ. ತಂತ್ರಜ್ಞಾನ ವಿಕ್ರಮದ
ಇ-ಯುಗದಲ್ಲಿ ನಾವಿದ್ದೇವೆ. ಜಗತ್ತೇ ಅಂಗೈಯಲ್ಲಿದೆ.
ಬದುಕಿನ ಜೀವನಚರ್ಯೆಗಳೇ ಬದಲಾಗಿದೆ. ಕೃಷಿ ಅವಲಂಬಿತ ಬದುಕಿನಿಂದ ಕೈಗಾರಿಕೆ,ಉದ್ಯಮ,ಉದ್ಯೋಗಾಧಾರಿತ ಬಿಡುವಿಲ್ಲದ ಜೀವನಚಕ್ರ ನಮ್ಮದಾಗಿದೆ. ಇದಕ್ಕೆ ಗಾಳಿ-ಮಳೆಗಳ ಅಂಕುಶಗಳೇ ಇಲ್ಲ. ಆದರೆ ಆಟಿಯೆಂಬ ಆಷಾಡದ ಆಚರಣೆಗಳಲ್ಲೇನೂ ಪಲ್ಲಟವಾಗಿಲ್ಲ. ಅದು ಹೊಸ ಕಾಲಕ್ಕೆ ತೆರೆದುಕೊಂಡಿದೆ. ಮನುಷ್ಯ ಪರಿಷ್ಕೃತನಾದಷ್ಟೂ ಮನೋಸ್ಥಿತಿಗಳೂ
ಬದಲಾಗುತ್ತದೆ ತಾನೇ…?
ಆಟಿ ಎಂದರೆ ಅಶುಭ, ಅನಿಷ್ಟಗಳ ಮಾಸವೆಂದು ಸನಾತನ ನಂಬಿಕೆ.ಈ ಹೊತ್ತು ಊರಿಗೆ ಮಾರಿ ಬಡಿಯುವುದೆಂದು ಜನಪದರು ನಂಬಿದ್ದರು. ಇದನ್ನು ನೀಗಿಸಲೆಂದೇ ಈ ತಿಂಗಳು ಮನೆಯಂಗಳಕ್ಕೆ ಆಟಿಕಳಂಜ, ಮರ್ದ, ವೇಡನ್ ಮೊದಲಾದ ತುಳು, ಮಲಯಾಳಿ ಸಂಸ್ಕೃತಿಯ ಮರಿದೈವಗಳು ಬರುತ್ತವೆ. ತುಳು,ಮಲಯಾಳ ತೀರದ ದಂಡೆಯಲ್ಲಿ ಆರಾಧನೆ ಪಡೆಯುತ್ತಿದ್ದ ದೈವಗಳೆಲ್ಲವೂ ಈ ಮಾಸ ಘಟ್ಟ ಹತ್ತಿದಾಗ ಮರಿದೈವಗಳು ಊರಿನ ಮಾರಿ ನೀಗಿಸಿ ಸುಭಿಕ್ಷ ಬದುಕನ್ನು ಕರುಣಿಸುವುದೆಂಬುದೇ ನಂಬಿಕೆ. ಆದರೀಗ ಆಧುನಿಕ ಯುಗದಲ್ಲಿ ನಲಿಕೆ, ಮಲಯರ್ ಜನಾಂಗದಲ್ಲಿ ಮರಿದೈವಗಳನ್ನು ಕಟ್ಟಿ ಊರೂರು ಅಲೆಯಲು ಮಕ್ಕಳೇ ಸಿಗುತ್ತಿಲ್ಲವೆಂಬುದು ಸಮಸ್ಯೆಯ ಕೊರಗು. ಮಕ್ಕಳೆಲ್ಲರೂ ಶಿಕ್ಷಣ ಪಡೆಯುವುದರಿಂದ ಶಾಲಾ ರಜಾದಿನದಲ್ಲಷ್ಟೇ ಮರಿದೈವ ಸಂಚಾರ.!
ಆಟಿ ಎಂದರೆ ಆಕಾಶವೇ ತೂತಾದಂತೆ ಮಬ್ಬುಗತ್ತಲೆ ಕವಿದು ಮಳೆ ಸುರಿವ ಮಾಸ.
ಈ ತಿಂಗಳಲ್ಲಿ ವಾತ,ಪಿತ್ಥ, ಕಫ ಸಹಿತ ಸಕಲ ಶಾರೀರಿಕ ಗುಪ್ತ ರೋಗಗಳು ಉಲ್ಬಣಗೊಂಡು ದೇಹವನ್ನು ಕಾಡಿಪೀಡಿಸುತ್ತದೆ. ಜತೆಗೆ ಗ್ರಹಗತಿಗಳೂ ನೆಟ್ಟಗಿಲ್ಲದ ಸಮಯ. ಆದ್ದರಿಂದಲೇ ಈ ತಿಂಗಳಲ್ಲಿ ನೂತನ ವಧೂವರರ ಶಾರೀರಿಕ ಸಂಗಮಕ್ಕೆ ನಿಯಂತ್ರಣವಿತ್ತು. ಈ ಕಾರಣದಿಂದಲೇ ನವವಧು ಆಟಿ ಕೂರಲು ತವರಿಗೆ ಹೋಗುವ ಪರಿಪಾಠ ಬೆಳೆಯಿತು.
ಇಂಥ ಆಟಿಯಲ್ಲೇ ಅಗಲಿದ ಪೂರ್ವಿಕರ ಆತ್ಮಕ್ಕೆ ತರ್ಪಣ ಬಡಿಸಿ, ಅಂಡಲೆಯುವ ಪ್ರೇತಾತ್ಮಗಳನ್ನೆಲ್ಲ ತೃಪ್ತಿಗೊಳಿಸುವ ಆಚಾರ ತುಳು,ಮಲಯಾಳದ ತರವಾಡಿನಲ್ಲಿ ಈಗಲೂ ಇದೆ. ಇದನ್ನು ಸತ್ತವರಿಗೆ ಬಡಿಸುವುದು ಎನ್ನುತ್ತಾರೆ.
ಆಟಿ ಮಾಸದಲ್ಲಿ ಶುಭಕಾರ್ಯಗಳನ್ನು ನಡೆಸುವ ವಾಡಿಕೆ ಇಲ್ಲ. ಮದುವೆ, ಗೃಹಪ್ರವೇಶ ಇತ್ಯಾದಿಗಳೆಲ್ಲ ನಿಷಿಧ್ಧ. ಇದು ಕನ್ನಡನಾಡಿಗೆ ದುರ್ಗಾಪೂಜೆಯ ಮಾಸವಾದರೆ ಕೇರಳಕ್ಕೆ ರಾಮಾಯಣ ಮಾಸ.
ಈ ತಿಂಗಳಿಡೀ ರಾಮಾಯಣ ಪಾರಾಯಣಗಳಿಂದ ಭವದುರಿತಗಳನ್ನೆಲ್ಲ ನೀಗಿಸುವ ಸಂಪ್ರದಾಯವೊಂದು ಸನಾತನತೆಯಿಂದಲೇ ಕೇರಳದಲ್ಲಿ ರೂಢಿಯಾಗಿದೆ. ದೇಶದಲ್ಲೇ ಒಂದಿಡೀ ತಿಂಗಳು ಜನತೆ ಆರಾಧನೆಯ ಮರೆಯಲ್ಲಿ ಪುರಾಣ ಕಾವ್ಯವಾಚನ ಮಾಡುವುದಿದ್ದರೆ ಅದು ಕೇರಳದಲ್ಲಿ ಮಾತ್ರ!
ಭವದುರಿತಗಳೆಲ್ಲವೂ ಕಾಡುವ ಈ ಕರ್ಕಾಟಕ ಮಾಸಕ್ಕೆ ಕೇರಳೀಯರಿತ್ತಷ್ಟು ಮಹತ್ವ ದಕ್ಷಿಣದ ಮತ್ತೆಲ್ಲೂ ಇಲ್ಲ.!
ಪ್ರತಿ ತಿಂಗಳೂ ವಾಡಿಕೆಯ ಅಮವಾಸ್ಯೆ ಇದ್ದರೂ ಕೇರಳ ಮತ್ತು ತುಳುನಾಡಿಗೆ ಕರ್ಕಾಟಕದ ಆಟಿ ಅಮವಾಸ್ಯೆಯೇ ಮುಖ್ಯ. ಈ ದಿನ ಪೂರ್ವಿಕರಿಗೆ ಪಿಂಡ ತರ್ಪಣ ನೀಡಿ, ಅಮವಾಸ್ಯೆ ಉಣ್ಣುವ ಸಂಪ್ರದಾಯ ಗೌರವದಿಂದಲೇ ತಲೆಮಾರಿಂದ ತಲೆಮಾರಿಗೆ ಕೈದಾಟಿ ಬಂದಿದೆ.
ಮಲಯಾಳಿ ಮಾನಿನಿಯರು ಈ ತಿಂಗಳಲ್ಲಿ ದಶಪುಷ್ಪ( 10ಬಗೆಯ ನಿರ್ದಿಷ್ಟ ಪ್ರಾಕೃತಿಕ ಹೂ) ಮುಡಿಯಬೇಕೆಂಬ ಆಚಾರವಿದೆ. ಇದರಿಂದ ಶಿರೋಭಾಗದ ರೋಗಶಮನವೆಂದೇ ನಂಬಿಕೆ. ಹಾಗೆಯೇ ಹತ್ತೆಲೆಗಳ ಸಸ್ಯಾಹಾರ ಭುಂಜಿಸಬೇಕೆಂದೂ ಆಚಾರಗಳಿದ್ದುವು. ಇದರಿಂದ ಉದರ, ಅಧರ ರೋಗಶಮನವೆಂದು ಪ್ರತೀತಿ. ಈ ಕಾರಣದಿಂದಲೇ ಈ ಮಾಸದಲ್ಲಿ ನುಗ್ಗೆ ಎಲೆ ಹೊರತಾದ ಪ್ರಕೃತಿ ಜನ್ಯ ಸಸ್ಯಗಳನ್ನು ಆಹಾರವನ್ನಾಗಿಸಿ ದೈಹಿಕ ಪೌಷ್ಠಿಕತೆ ವರ್ಧಿಸುತ್ತಾರೆ. ಕರ್ಕಡಂ ಗಂಜಿ ಉಣ್ಣುವ ಸಂಪ್ರದಾಯ ಕೇರಳದಲ್ಲಿ ಜನಪ್ರಿಯ. ಇದು ಆಯುರ್ವೇದ ಸೂಚಿತ ಔಷಧಿಗಂಜಿ. ವರ್ಷಕ್ಕೊಮ್ಮೆ ಇದನ್ನುಣ್ಣುವುದು ಪ್ರಾಚೀನ ಜೀವನಕ್ರಮ. ಆದರೆ ಆಧುನೀಕತೆಯಲ್ಲಿ ಇದಕ್ಕೆ ವ್ಯಾಪಕ ಪ್ರಚಾರ ಸಿಕ್ಕಿದೆ. ಪ್ರಭಾವ ಬೀರಿದೆ.
ಆಟಿ, ಆಷಾಡ, ಕರ್ಕಾಟಕ ಮಾಸಗಳ ಮೂಲ ಆಶಯ ಒಂದೇ ಆದರೂ ಪ್ರಾದೇಶಿಕ ಭಾಷಿಗರಿಗೆ ತಕ್ಕಂತೆ ಅದರಲ್ಲಿ ವೈವಿಧ್ಯ ಆಚಾರಗಳಿವೆ. ಕೇರಳದಲ್ಲಂತೂ ಇದು ಆಯುರ್ವೇದ ಚಿಕಿತ್ಸೆಯ ಪರ್ವಕಾಲ. ಈ ತಿಂಗಳಲ್ಲಿ ಆಯುರ್ವೇದದ ಪಂಚಕರ್ಮ ಸುಖಚಿಕಿತ್ಸೆ ಪಡೆದು ಶಾರೀರಿಕ ಪೌಷ್ಠಿಕತೆಯೊಂದಿಗೆ ನವತಾರುಣ್ಯದ ಹುರುಪು, ನವೋಲ್ಲಾಸ ಪಡೆಯುವುದು ಪ್ರಾಚೀನ ವಿಧಾನ. ಇದಕ್ಕೆಂದೇ ಕೇರಳದಲ್ಲಿ ನೂರಾರು ಹೈಟೆಕ್ ಆಯುರ್ವೇದ ಚಿಕಿತ್ಸಾ ಕೇಂದ್ರಗಳಿವೆ. ರಾಜಕಾರಣಿಗಳು, ಸಿನಿಮಾ ನಟನಟಿಯರು, ಸೆಲೆಬ್ರಿಟಿಗಳೆಲ್ಲರೂ ಈ ಚಿಕಿತ್ಸೆ ಪಡೆಯುವುದರಿಂದ ಇದಕ್ಕೆ ಜಾಗತಿಕ ಪ್ರಚಾರವಾಗಿ ಪ್ರಸಿದ್ದಿಯಾಗಿದೆ. ಇದೊಂದು ಉದ್ಯಮ ಸ್ವರೂಪಪತಾಳಿ ಪ್ರವಾಸೋದ್ಯಮದ ಭಾಗವಾಗಿದೆ. ಸರಕಾರವೇ ಇದನ್ನು ಪ್ರಮೋಟ್ ಮಾಡುತ್ತದೆ.
ಕೇರಳ ಕರ್ಕಾಟಕ ಮಾಸವನ್ನು ಕೊಂಡಾಡುವಂತೆ ತುಳುನಾಡಿನ ಆಟಿಯಾಗಲೀ, ಕರ್ನಾಟಕದ ಆಷಾಡವಾಗಲಿ ಆಚರಣೆಯಾಗುತ್ತಿಲ್ಲ. ಹಿಂದೆ ಆಟಿ ಎಂದರೆ ಬಡತನದ, ನಿರುದ್ಯೋಗದ ಕಷ್ಟಕಾರ್ಪಣ್ಯಗಳ ಮಾಸವಾಗಿತ್ತು. ಆದರೀಗ ಬದಲಾದ ಕಾಲಚಕ್ರದಲ್ಲಿ ಆಟಿಯೊಂದು ಪ್ರವಾಸೋದ್ಯಮಕ್ಕೆ ಇಂಬು ನೀಡುವ ಮಾಸವಾಗಿದೆ. ‘ನಾಲಂಬಲಂ ದರ್ಶನ’ ಸಹಿತ “ಆಟಿ ಸೇಲ್” ವರೆಗೆ ಎಲ್ಲವೂ ವಾಣಿಜ್ಯಮಯವಾಗಿದೆ. ಇದರ ನಡುವೆ ಸನಾತನ ಸಂಪ್ರದಾಯಗಳು ಈ ನೆಲದ ಸಾಂಸ್ಕೃತಿಕ ಚೆಲುವಿನ ವೈಶಿಷ್ಟ್ಯತೆಗೆ ಕನ್ನಡಿ ಹಿಡಿಯುತ್ತದೆ.
ಆಟಿ ಎಂದರೆ ಶ್ರಾವಣಕ್ಕೆ ಮುನ್ನುಡಿ ಬರೆಯುವ ಮಾಸ.
ಶ್ರಾವಣವೆಂಬ ಸೋಣವೇ ಕೇರಳದ ‘ಚಿಂಙ್ಙ’ ಮಾಸ.
ಇದು ವರ್ಷಾರಂಭದ ಸಂಭ್ರಮಗಳ ಕಾಲ.
ಅಬ್ಬರದ ಮಳೆಗೆ ಮೈಯ್ಯೊಡ್ಡಿದ ನೆಲ ಮತ್ತೆ ಚಿಗುರಿ ಪುಷ್ಪಿಣಿಯಾಗಿ ನಲಿವ ಕಾಲ. ಸೂರ್ಯ ಕಿರಣಗಳು ಬೆಚ್ಚನೆಯಾಗಿ ನೆಲವನ್ನು ಸುಡಲಾರಂಭಿಸುವ ಕಾಲ. ಇಂಥ ಕಾಲದ ಪಲ್ಲಟಗಳೇ ನಮ್ಮ ಸನಾತನ ಸಂಪ್ರದಾಯಶೀಲ ಹಬ್ಬಗಳು, ಆಚರಣೆಗಳು. ಇದೆಲ್ಲವೂ ಪ್ರಕೃತಿಯನ್ನವಲಂಬಿಸಿವೆ.
ತುಳು, ಮಲಯಾಳದ ಗಡಿನಾಡಿನಲ್ಲಿ ಆಟಿ ಎಂದರೆ ತೆಂಬರೆ ಸದ್ದಿನ ಆಟಿಕಳಂಜ ಮತ್ತು ಪತ್ರೊಡೆಯಷ್ಟೇ ಅಲ್ಲ. ಅದು ನೆಲಮೂಲ ದ್ರಾವಿಡ ಸಂಸ್ಕಾರಗಳ ಅಳಿದುಳಿದ ಆಚರಣೆಯ ಮುಂದುವರಿದ ಭಾಗ.
ಆದರೆ ಜಾಗತೀಕತೆ ಮತ್ತು ಜಾತ್ಯಾತೀತ ಸಮ್ಮಿಶ್ರ ವಿವಾಹಬಂಧನದ ಜತೆ ಅಣುಕುಟುಂಬಿಕರಾಗುವ ಹೈಂದವರ ನಡುವೆ ಸಾಂಪ್ರದಾಯಿಕ ಆಚಾರಗಳೆಲ್ಲ ಇನ್ನೆಷ್ಟು ದಿನ ಎಂಬುದು ಪ್ರಶ್ನೆಯಾಗಿ ಹೆಡೆ ಎತ್ತಿದೆ.
ಸವಾಲಾಗಿ ಕಾಡತೊಡಗಿದೆ!
ಎಂ.ನಾ.ಚಂಬಲ್ತಿಮಾರ್.
(ಎಂ.ನಾರಾಯಣ ಚಂಬಲ್ತಿಮಾರ್ ಹಿರಿಯ ಪತ್ರಕರ್ತರು ಹಾಗೂ ಅಂಕಣಕಾರರು. ಕಣಿಪುರ ಯಕ್ಷಗಾನ ಪತ್ರಿಕೆಯ ಸಂಪಾದಕರು)