ಸುಳ್ಯ: ಸುಳ್ಯದ ಬಹುಕಾಲದ ಬೇಡಿಕೆಯಾದ 110 ಕೆವಿ ಸಬ್ಸ್ಟೇಷನ್ ನಿರ್ಮಾಣ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಜನವರಿ 10 ರಂದು ಶಂಕುಸ್ಥಾಪನೆ ನಡೆಯಲಿದೆ ಎಂದು ಬಂದರು ಮೀನುಗಾರಿಕೆ ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜ.10 ಪೂ.10.30ಕ್ಕೆ ಸುಳ್ಯದ ವಿದ್ಯುತ್ ಸಬ್ ಸ್ಟೇಷನ್ ಬಳಿಯಲ್ಲಿ ಇಂಧನ ಸಚಿವರಾದ ವಿ.ಸುನಿಲ್ ಕುಮಾರ್ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಮಾಡಾವಿನಿಂದ ಸುಳ್ಯಕ್ಕೆ
110 ಕೆವಿ ಲೈನ್ ಕಾರಿಡಾರ್ 22 ಕಿ.ಮಿ.ಉದ್ದವಿದೆ. ಇದರಲ್ಲಿ 1.8 ಕಿ.ಮಿ. ಲೈನ್ ಇದೆ. ಹೊಸತಾಗಿ 19.2 ಕಿ.ಮಿ.ಹೊಸ ಲೈನ್ ಮತ್ತು ಸುಳ್ಯದಲ್ಲಿ ಹೊಸ ಸಬ್ ಸ್ಟೇಷನ್ ನಿರ್ಮಾಣ ಆಗಲಿದೆ. 2007 ರಲ್ಲಿ ಸಬ್ ಸ್ಟೇಷನ್ ಮಂಜೂರುಗೊಂಡಾಗ 14.97 ಕೋಟಿ ಅಂದಾಜು ವೆಚ್ಚ ಇತ್ತು. ಈಗ 46.20 ಕೋಟಿ ವೆಚ್ಚದಲ್ಲಿ ಹೊಸ ಸಬ್ ಸ್ಟೇಷನ್ ಮತ್ತು ಲೈನ್ ನಿರ್ಮಾಣವಾಗಲಿದೆ. ಹೊಸ ಅಂದಾಜು ವೆಚ್ಚಕ್ಕೆ ಇಂಧನ ಸಚಿವರು ಅಧ್ಯಕ್ಷರಾಗಿರುವ ಕೆಪಿಟಿಸಿಎಲ್ ಬೋರ್ಡ್ನ ಅನುಮತಿ ಸಿಕ್ಕಿದೆ ಎಂದು ಸಚಿವರು ವಿವರಿಸಿದರು. ಆಂಧ್ರಪ್ರದೇಶದ ಗುತ್ತಿಗೆದಾರರಿಗೆ ಕಾಮಗಾರಿ ವಹಿಸಲಾಗಿದೆ. ಕಾಮಗಾರಿ ಪೂರ್ತಿಯಾಗಲು 12 ತಿಂಗಳ ಕಾಲಾವಕಾಶ ಇದೆ. ಮಾಡಾವು-ಕೊಳ್ತಿಗೆ, ಪೆರ್ಲಂಪಾಡಿ, ಕಾಣಿಯೂರು ಸರಹದ್ದಿನ ಮೂಲಕ ಕನಕಮಜಲು ಜಾಲ್ಸೂರು ಬೈತ್ತಡ್ಕ-ಅಜ್ಜಾವರ ಮೂಲಕ ಹೊಸ ಲೈನ್ ಹಾದು ಬರಲಿದೆ. ಈಗಿನ ಮೆಸ್ಕಾಂ 33 ಕೆವಿ ಸಬ್ ಸ್ಟೇಷನ್ ಸಮೀಪ ಹೊಸ 110 ಸಬ್ ಸ್ಟೇಷನ್ ನಿರ್ಮಾಣ ಆಗಲಿದೆ. ಅರಣ್ಯದ ಮೂಲಕ ಲೈನ್ ಹಾದು ಹೋಗಲು ಅರಣ್ಯ ಇಲಾಖೆಯ ಅನುಮತಿ ಲಭಿಸಿದೆ.
22 ಮೀಟರ್ನ ಕಾರಿಡಾರ್ ನಿರ್ಮಾಣ ಮಾಡಲಾಗುವುದು.
110 ಕೆವಿ ಸಬ್ ಸ್ಟೇಷನ್ ನಿರ್ಮಾಣಕ್ಕೆ ಸರಕಾರದ ಮಟ್ಟದಲ್ಲಿ ಎಲ್ಲಾ ಕೆಲಸಗಳು ಆಗಿದೆ. ಸಬ್ ಸ್ಟೇಷನ್ ನಿರ್ಮಾಣಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಸಚಿವರು ವಿನಂತಿಸಿದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ
ನಿಯಮಿತ ಅಧೀಕ್ಷಕ ಇಂಜಿನಿಯರ್ ರವಿಕಾಂತ್ ಕಾಮತ್, ಬೃಹತ್ ಕಾಮಗಾರಿ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಗಂಗಾಧರ ಕೆ.
ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಪ್ರಧಾನ ಕಾರ್ಯದರ್ಶಿ ಸುಬೋದ್ ಶೆಟ್ಟಿ ಮೇನಾಲ, ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕೇರ್ಪಳ ಉಪಸ್ಥಿತರಿದ್ದರು.