ಮಂಗಳೂರು: ಯುವನಿಧಿ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, 2023ನೇ ಹಾಗೂ 2024ನೇ ಸಾಲಿನಲ್ಲಿ ಯಾವುದೇ ವೃತ್ತಿ ಪರ ಕೋರ್ಸ್, ಪದವಿ, ಡಿಪ್ಲೋಮಾ, ಸ್ನಾತಕೋತ್ತರ ಪದವಿ ಉತ್ತೀರ್ಣರಾಗಿ 6 ತಿಂಗಳವರೆಗೆ (180 ದಿನ) ಉದ್ಯೋಗ ಸಿಗದ ವಿದ್ಯಾವಂತ ನಿರುದ್ಯೋಗಿ ಯುವಕ ಯುವತಿಯರು ಈ ಯೋಜನೆಗಾಗಿ
ಅರ್ಜಿ ಸಲ್ಲಿಸಬಹುದು. ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಮಾನದಂಡಗಳು: ಅಭ್ಯರ್ಥಿಯು ಕರ್ನಾಟಕದಲ್ಲಿ ವಾಸಿಸುವ ಕನ್ನಡಿಗ ಅಭ್ಯರ್ಥಿಯಾಗಿರಬೇಕು. ವಾಸವಿರುವ ವಿದ್ಯಾರ್ಥಿ ಎಂದರೆ ಕರ್ನಾಟಕದಲ್ಲಿ ಕನಿಷ್ಠ 6 ವರ್ಷಗಳವರೆಗೆ ಪದವಿ/ಡಿಪ್ಲೋಮಾ/ಸ್ನಾತಕೋತ್ತರ ಪದವಿವರೆಗೆ ಅಧ್ಯಯನ ಮಾಡಿದವರು. 2023 ಹಾಗೂ 2024ರ ವರ್ಷದಲ್ಲಿ ತೇರ್ಗಡೆಯಾಗಿದ್ದು, ಉತ್ತೀರ್ಣರಾಗಿ 180 ದಿನಗಳು ಕಳೆದರೂ ಉದ್ಯೋಗ ಲಭಿಸದವರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ದಿನದಿಂದ ಉದ್ಯೋಗ ಸಿಗುವವರೆಗೆ ಮಾತ್ರ ಅಥವಾ 02 ವರ್ಷ ಗರಿಷ್ಠ ಅವಧಿಯವರೆಗೆ ಮಾತ್ರ ಈ ಭತ್ಯೆ ಸಿಗಲಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 4,023 ಅಭ್ಯರ್ಥಿಗಳು ಯುವನಿಧಿ ಯೋಜನೆಯಡಿ ಅರ್ಜಿ ಸಲ್ಲಿಸಿದ್ದು, ಈ ಪೈಕಿ ಈಗಾಗಲೇ ಒಟ್ಟು 3,328 ಫಲಾನುಭವಿಗಳಿಗೆ ಜುಲೈ-2024ರ ಅಂತ್ಯಕ್ಕೆ ಒಟ್ಟು ರೂ. 2,02,69,500 (ರೂ. ಎರಡು ಕೋಟಿ ಎರಡು ಲಕ್ಷ ಅರುವತ್ತೊಂಬತ್ತು ಸಾವಿರದ ಐದುನೂರು) ಡಿ.ಬಿ.ಟಿ ಮೂಲಕ ಫಲಾನುಭವಿಗಳ ಖಾತೆಗೆ ಜಮೆಯಾಗಿರುತ್ತದೆ.
31-08-2024ರ ಅಂತ್ಯಕ್ಕೆ ಯುವನಿಧಿ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪುರುಷರು -1,764. ಮಹಿಳೆಯರು-2,259 ಸೇರಿದಂತೆ ಒಟ್ಟು 4,023 ಮಂದಿ ನೋಂದಾಯಿಸಿದ್ದಾರೆ.
ವಿದ್ಯಾರ್ಹತೆವಾರು ನೋಂದಣಿ ವಿವರ : ಪದವಿ ಅಭ್ಯರ್ಥಿಗಳು- 3868. ಡಿಪ್ಲೋಮಾ ಅಭ್ಯರ್ಥಿಗಳು – 155
ಅರ್ಜಿ ಸಲ್ಲಿಸುವ ವಿಧಾನ:
ಅಭ್ಯರ್ಥಿಗಳು ಸೇವಾಸಿಂಧು ಪೋರ್ಟಲ್ ಮೂಲಕ ಲಾಗಿನ್ ಆಗಿ ಸ್ವತಃ ಅರ್ಜಿ ಸಲ್ಲಿಸಬಹುದು. ಅಥವಾ ಗ್ರಾಮ ಒನ್, ಕರ್ನಾಟಕ ಒನ್, ಬಾಪೂಜಿ ಸೇವಾ ಕೇಂದ್ರಗಳು ಮೂಲಕವೂ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ನೇರ ನಗದು ವರ್ಗಾವಣೆಗಳನ್ನು (ಡಿಬಿಟಿ) ಸ್ವೀಕರಿಸಲು ಮೊಬೈಲ್ ಸಂಖ್ಯೆಗೆ ಲಿಂಕ್ ಆದ ಆಧಾರ್ ಸಂಖ್ಯೆಯ ಬ್ಯಾಂಕ್ ಖಾತೆಯನ್ನು ಕಡ್ಡಾಯವಾಗಿ ಹೊಂದಿರಬೇಕು.
ಸ್ವಯಂ-ದೃಢೀಕರಣ:
ಅಭ್ಯರ್ಥಿಗಳು ಈ ಯೋಜನೆಯ ಪ್ರಯೋಜನವನ್ನು ಪ್ರತಿ ತಿಂಗಳು ಪಡೆಯಬೇಕಿದ್ದರೆ, ಪ್ರತಿ ತಿಂಗಳು 25ನೇ ತಾರೀಖಿನೊಳಗೆ ತಾನು ನಿರುದ್ಯೋಗಿಯೆಂದು, ವ್ಯಾಸಂಗ ಮುಂದುವರೆಸುತ್ತಿಲ್ಲವೆಂದು ಹಾಗೂ ಸ್ವಯಂ ಉದ್ಯೋಗಿಯಲ್ಲವೆಂದು ವೆಬ್ಸೈಟ್ ಮೂಲಕ ಸ್ವಯಂ ಘೋಷಣೆಯನ್ನು ಕಡ್ಡಾಯವಾಗಿ ಮಾಡಬೇಕು ಎಂದು ಜಿಲ್ಲಾ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.