ಪುತ್ತೂರು:ರಾಜ್ಯದಲ್ಲಿ ಮತ್ತೊಮ್ಮೆ ಪೂರ್ಣಪ್ರಮಾಣದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದರು. ಅವರು ಶನಿವಾರ ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರ ಪರವಾಗಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು. ತೆರೆದ ವಾಹನದಲ್ಲಿ ಪುತ್ತೂರು ದೇವಳದ ಮುಂಬಾಗದಿಂದ ಕಿಲ್ಲೆ ಮೈದಾನದ ತನಕ ರೋಡ್ ಶೋ ನಡೆಸಿದ ಯೋಗಿ ಆದಿತ್ಯನಾಥ್ ಅವರು ಕಿಲ್ಲೆ ಮೈದಾನದಲ್ಲಿ
ಜನರನ್ನು ಉದ್ದೇಶಿಸಿ ಮಾನತಾಡಿದರು.ಪುತ್ತೂರಿನ ಮುತ್ತಿನಂತ ಜನರಿಗೆ ನನ್ನ ನಮಸ್ಕಾರಗಳು ಎಂದು ಕನ್ನಡದಲ್ಲೇ ಮಾತು ಆರಂಭಿಸಿದ ಅವರು
ನಾನು ಮರ್ಯಾದಾ ಪುರುಷೋತ್ತಮ ರಾಮನ ಜನ್ಮಭೂಮಿಯಿಂದ ಹನುಮಂತನ ಜನ್ಮಭೂಮಿಯಾದ ಕರ್ನಾಟಕಕ್ಕೆ ಬಂದಿದ್ದೇನೆ.
ಕಾಂಗ್ರೇಸ್ ಹನುಮಂತನ ನಾಡಿನಲ್ಲಿ ಭಜರಂಗದಳ ನಿಶೇಧದ ಬಗ್ಗೆ ಹೇಳಿಕೆ ನೀಡುತ್ತಿದೆ.ಭಜರಂಗದಳ ದೇಶದ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘಟನೆಯಾಗಿದೆ. ದೇಶದ ಸಂಸ್ಕೃತಿಯ ಜೊತೆ ಬೆಸೆದುಕೊಂಡಿರುವ ಈ ಸಂಘಟನೆಯನ್ನು ನಿಶೇಧಿಸಲು ಕಾಂಗ್ರೆಸ್ ಮುಂದಾಗಿದೆ ಇದಕ್ಕೆ ಜನತೆ ತಕ್ಕ ಉತ್ತರ ನೀಡಲಿದ್ದಾರೆ ಎಂದರು.
ಮೋದಿ ನೇತೃತ್ವದಲ್ಲಿ ಭಾರತ ಜಗತ್ತಿನಲ್ಲೇ ಪ್ರಬಲ ರಾಷ್ಟ್ರವಾಗಿ ಮೂಡಿ
ಬಂದಿದೆ. ಕರ್ನಾಟಕದಲ್ಲಿ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅಭಿವೃದ್ಧಿ ಮಾಡಿದ್ದಾರೆ. ಆದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಅಭಿವೃದ್ಧಿಗೆ ತಡೆಯೊಡ್ಡುವ ನಿಲುವು ತಳೆದಿದೆ. ಕರ್ನಾಟಕ ರಾಜ್ಯದ ಜನತೆ ಮೋದಿ ಅವರ ಜೊತೆ ನಿಲ್ಲಬೇಕಿದೆ ಎಂದು ಕರೆ ನೀಡಿದ ಅವರು ರಾಜ್ಯದಲ್ಲಿ ಮತ್ತೆ ಭಾರತೀಯ ಜನತಾ ಪಕ್ಷಕ್ಕೆ ಜನರು ಆಶೀರ್ವಾದ ಮಾಡಬೇಕಿದೆ. ಪುತ್ತೂರಿನ ಜನತೆ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಜೊತೆ ಜನತೆ ಕೈಜೋಡಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್, ಬಿಜೆಪಿ ದ.ಕ.ಜಿಲ್ಲಾಧ್ಯಕ್ಷ ಸುದರ್ಶನ ಮೂಡಬಿದ್ರೆ, ಪುತ್ತೂರು ಶಾಸಕ ಸಂಜೀವ ಮಠಂದೂರು ಮತ್ತು ಪಕ್ಷದ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ, ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಜೊತೆಗಿದ್ದರು.
ಬೃಹತ್ ರೋಡ್ ಶೋ:
ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಅವರ ಪರವಾಗಿ ಚುನಾವಣಾ ಪ್ರಚಾರ ನಡೆಸಲು ಪುತ್ತೂರಿಗೆ ಆಗಮಿಸಿದ್ದ ಯೋಗಿ ಆದಿತ್ಯನಾಥ್ ಅವರು ನಗರದ ಹೊರ ವಲಯದ ಮೊಟ್ಟೆತ್ತಡ್ಕ ಹೆಲಿಪ್ಯಾಡ್ಗೆ ಹೆಲಿಕಾಪ್ಟರ್ ಮೂಲಕ ಆಗಮಿಸಿದರು. ಅಲ್ಲಿಂದ ವಾಹನದಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸಿದರು. ಬಳಿಕ ದೇವಳದಲ್ಲಿ ದೇವರ ದರ್ಶನ ಪಡೆದು ದೇವರಿಗೆ ಆರತಿ ಬೆಳಗಿ ಪೂಜೆ ಸಲ್ಲಿಸಿದರು. ಆ ಬಳಿಕ ದೇವಳದ ಮುಂಬಾಗದಿಂದ ರೋಡ್ಶೋ ಆರಂಭಿಸಿದರು. ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿದ ಅವರು ಮುಖ್ಯರಸ್ತೆಗೆ ಆಗಮಿಸಿ ಅಲ್ಲಿಂದ ಕಿಲ್ಲೆ ಮೈದಾನಕ್ಕೆ ಆಗಮಿಸಿದರು.