ಬೆಂಗಳೂರು: ಸತತ 2 ಆಘಾತಕಾರಿ ಸೋಲಿನೊಂದಿಗೆ ಟೂರ್ನಿಯಿಂದ ಹೊರಬೀಳುವ ಭೀತಿಯಲ್ಲಿರುವ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡ ಇಂದು ಮಾಜಿ ಚಾಂಪಿಯನ್ ಶ್ರೀಲಂಕಾ ತಂಡದ ಸವಾಲು ಎದುರಿಸಲಿದೆ. ಜೋಸ್ ಬಟ್ಲರ್ ಬಳಗ ಗೆಲುವಿನ ಹಳಿಗೇರುವ ಮೂಲಕ ಸೆಮೀಸ್ ಆಸೆ ಜೀವಂತವಿರಿಸುವ ತವಕದಲ್ಲಿದೆ. ಅತ್ತ ಶ್ರೀಲಂಕಾ ಪಾಲಿಗೂ ಇದು
ಮಾಡು ಇಲ್ಲವೆ ಮಡಿ ಹೋರಾಟವೆನಿಸಿದೆ. ಈ ಪಂದ್ಯದಲ್ಲಿ ಸೋತ ತಂಡಕ್ಕೆ ಸೆಮೀಸ್ ಬಾಗಿಲು ಬಹುತೇಕ ಮುಚ್ಚಿಹೋಗಲಿದೆ.
ಉಭಯ ತಂಡಗಳು ಇದುವರೆಗೆ ಆಡಿರುವ 4 ಪಂದ್ಯಗಳಲ್ಲಿ 2 ಅಂಕ ಕಲೆಹಾಕಿದ್ದು, ಇಂಗ್ಲೆಂಡ್ಗಿಂತ ಉತ್ತಮ ರನ್ರೇಟ್ ಹೊಂದಿರುವ ಲಂಕಾ 8ನೇ ಸ್ಥಾನದಲ್ಲಿದೆ. ಆಲ್ರೌಂಡರ್ಗಳ ನೀರಸ ನಿರ್ವಹಣೆ ಆಂಗ್ಲರಿಗೆ ಹಿನ್ನಡೆ ತಂದಿದೆ. ಸೆಮಿಫೈನಲ್ ಆಸೆ ಜೀವಂತವಾಗಿರಿಸಲು ಮುಂದಿನ ಪ್ರತಿ ಪಂದ್ಯ ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿದೆ.
ಅತ್ತ ಶ್ರೀಲಂಕಾ ಸತತ 3 ಸೋಲಿನ ಬಳಿಕ ಜಯದ ಹಳಿಗೆ ಮರಳಿದ್ದು, ಅನುಭವಿ ಏಂಜೆಲೊ ಮ್ಯಾಥ್ಯೂಸ್ ಸೇರ್ಪಡೆ ತಂಡಕ್ಕೆ ಬಲ ನೀಡಲಿದೆ. ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಮಹೀಶ್ ತೀಕ್ಷಣ ಸಂಪೂರ್ಣ ಫಿಟ್ ಆಗಿದ್ದು ಇಂಗ್ಲೆಂಡ್ ವಿರುದ್ಧ ಪಂದ್ಯಕ್ಕೆ ಲಭ್ಯರಾಗಿದ್ದಾರೆ. ಲಂಕಾದ ಅಗ್ರ ಕ್ರಮಾಂಕದ ಬ್ಯಾಟರ್ಗಳು ಉತ್ತಮ ರನ್ ಕಲೆಹಾಕಿದ್ದಾರೆ.
ಇಂಗ್ಲೆಂಡ್ ತಂಡ: ಜಾನಿ ಬೈರ್ಸ್ಟೋವ್, ಡೇವಿಡ್ ಮಲನ್, ಜೋ ರೂಟ್, ಬೆನ್ ಸ್ಟೋಕ್ಸ್, ಹ್ಯಾರಿ ಬ್ರೂಕ್, ಜೋಸ್ ಬಟ್ಲರ್ (ನಾಯಕ ಮತ್ತು ವಿಕೆಟ್ ಕೀಪರ್), ಸ್ಯಾಮ್ ಕರನ್, ಡೇವಿಡ್ ವಿಲ್ಲಿ, ಆದಿಲ್ ರಶೀದ್, ಅಟ್ಕಿನ್ಸನ್, ಮಾರ್ಕ್ ವುಡ್.
ಶ್ರೀಲಂಕಾ ತಂಡ: ಪಾತುಮ್ ನಿಸಂಕ, ಕುಸಾಲ್ ಪೆರೇರಾ, ಕುಸಾಲ್ ಮೆಂಡಿಸ್ (ನಾಯಕ ಮತ್ತು ವಿಕೆಟ್ ಕೀಪರ್), ಚರಿತ್ ಅಸ್ಲಂಕಾ, ಸದಿರಾ ಸಮರವಿಕ್ರಮ, ಧನಂಜಯ್ ಡಿ ಸಿಲ್ವಾ, ದುಶನ್ ಹೇಮಂತ, ಮಹೇಶ್ ತಿಕ್ಷಣ, ಚಾಮಿಕಾ ಕರುಣಾರತ್ನ, ಕಸೂನ್ ರಜಿತಾ, ದಿಲ್ಶನ್ ಮಧುಶಂಕ.